ಲಾಕ್‍ಡೌನ್ ಎಫೆಕ್ಟ್- ತರಕಾರಿ, ಮಾಸ್ಕ್ ಮಾರಲು ನಿಂತ ಉಪನ್ಯಾಸಕರು

ದಾವಣಗೆರೆ: ಕೊರೊನಾದಿಂದಾಗಿ ಇಡೀ ಪ್ರಪಂಚವೇ ನಲುಗಿದ್ದು, ಸೋಂಕು ತಗುಲಿದವರು ಚಿಕಿತ್ಸೆಗಾಗಿ ಪರದಾಡಿದರೆ, ಉಳಿದವರು ಲಾಕ್‍ಡೌನ್‍ನಿಂದಾಗಿ ಪರದಾಡು ಸ್ಥಿತಿ ಬಂದೊದಗಿದಿದೆ. ಲಾಕ್‍ಡೌನ್‍ನಿಂದಾಗಿ ಬಹುತೇಕ ಯುವಕರು ಕೆಲಸ ಕಳೆದುಕೊಂಡಿದ್ದು, ಇದರಿಂದಾಗಿ ಎಲ್ಲ ವಲಯಗಳಿಗೂ ಹೊಡೆತ ಬಿದ್ದಿದೆ. ಹಲವು ಯುವಕರು ಪರ್ಯಾಯವಾಗಿ ವಿವಿಧ ಕೆಲಸಗಳನ್ನು ಮಾಡುತ್ತಿದ್ದು, ಇನ್ನೂ ಹಲವರು ಸಣ್ಣ ಪುಟ್ಟ ಬ್ಯುಸಿನೆಸ್ ಮಾಡುತ್ತಿದ್ದಾರೆ. ಇನ್ನೂ ನೋವಿನ ಸಂಗತಿ ಎಂದರೆ ಅತಿಥಿ ಉಪನ್ಯಾಸಕರ ಸ್ಥಿತಿ ಹೇಳತೀರದಾಗಿದೆ.

ಲಾಕ್‍ಡೌನ್‍ನಿಂದಾಗಿ ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಹಾಗೂ ಖಾಸಗಿ  ಕಾಲೇಜುಗಳ ಉಪನ್ಯಾಸಕರು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಮೊದಲೇ 10-12 ಸಾವಿರ ರೂ. ಸಂಬಳಕ್ಕೆ ದುಡಿಯುತ್ತಿದ್ದ ಉಪನ್ಯಾಸಕರಿಗೆ ಇದೀಗ ಲಾಕ್‍ಡೌನ್‍ನಿಂದಾಗಿ ಅದೂ ಇಲ್ಲವಾಗಿದೆ. ಹೀಗಾಗಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿದ್ದು, ಸಣ್ಣ ಪುಟ್ಟ ಬ್ಯುಸಿನೆಸ್ ಮಾಡುತ್ತಿದ್ದಾರೆ. ತರಕಾರಿ, ಮಾಸ್ಕ್, ಎಗ್ ರೈಸ್ ಮಾರುವುದು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಉಪನ್ಯಾಸಕರು ತೊಡಗಿದ್ದಾರೆ.

- Advertisement -

ದಾವಣಗೆರೆಯಲ್ಲಿ ಕೆಲ ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳ ಅಥಿತಿ ಉಪನ್ಯಾಸಕರು ಕುಟುಂಬದ ನಿರ್ವಹಣೆಗಾಗಿ ಮಾಸ್ಕ್, ತರಕಾರಿ ಹಾಗೂ ಎಗ್ ರೈಸ್ ಮಾರಾಟ ಮಾಡುತ್ತಿದ್ದಾರೆ. ಜೀವನೋಪಾಯಕ್ಕಾಗಿ ವಿದ್ಯಾ ನಗರದ ಮುಖ್ಯ ರಸ್ತೆಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದು, ಕಳೆದ ನಾಲ್ಕೈದು ತಿಂಗಳುಗಳಿಂದ ಕಾಲೇಜು ತೆರೆಯದ ಹಿನ್ನೆಲೆ ಇವರ ಕುಟುಂಬ ಬೀದಿಗೆ ಬಿದ್ದಿದೆ. ಎಂಎ, ಎಂಕಾಂ, ಎಂಬಿಎ ಪದವೀಧರರಾಗಿರುವ ಉಪನ್ಯಾಸಕರಿಗೆ ಸಂಬಳವಿಲ್ಲದೆ ಕುಟುಂಬ ನಿರ್ವಹಣೆ ಮಾಡುವುದು ಕಷ್ಟಕರವಾಗಿ ಪರಿಣಮಿಸಿದೆ.

- Advertisement -

ಕುಟುಂಬದ ನಿರ್ವಹಣೆಗಾಗಿ ಪಡಬಾರದ ಕಷ್ಟಪಡುವಂತಾಗಿದ್ದು, ಹೇಗೋ ತರಕಾರಿ, ಮಾಸ್ಕ್ ಮಾರಿ ಜೀವನ ಸಾಗಿಸುತ್ತಿದ್ದಾರೆ. ಸಹಾಯಧನ ನೀಡುವಂತೆ ಉಪನ್ಯಾಸಕರು-ಅತಿಥಿ ಉಪನ್ಯಾಸಕರು ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಲಾಕ್‍ಡೌನ್ ಎಫೆಕ್ಟ್ ನಿಂದಾಗಿ ಕೆಲಸವಿಲ್ಲದೆ ಈ ಹಿಂದೆ ಎಂಎಸ್‍ಸಿ, ಬಿ.ಕಾಂ. ಬಿಎ ಸೇರಿದಂತೆ ಹೆಚ್ಚು ಕಲಿತ ಯುವಕರು ಸಹ ನರೇಗಾದ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವುದು, ರಸ್ತೆ ಕೆಲಸ ಸೇರಿದಂತೆ ವಿವಿಧ ಕೆಲಸ ಮಾಡಿದ್ದರು. ಇದೀಗ ಉಪನ್ಯಾಸಕರಿಗೂ ಸಂಕಷ್ಟ ಎದುರಾಗಿದೆ.

ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸರ್ಕಾರ ಶಾಲಾ, ಕಾಲೇಜುಗಳನ್ನು ತೆರೆಯಲು ಅನುಮತಿ ಸೂಚಿಸಿಲ್ಲ. ಇದೆಲ್ಲದರ ಭಯದ ನಡುವೆಯೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಮಾಡಿ ಮುಗಿಸಲಾಗಿದೆ. ಆದರೆ ಶಾಲೆ, ಕಾಲೇಜು ಪ್ರಾರಂಭದ ಕುರಿತು ನಿರ್ಧಾರ ಕೈಗೊಂಡಿಲ್ಲ. ಕೊರೊನಾ ಕಡಿಮೆಯಾಗಲು ಇನ್ನು ಹೆಚ್ಚು ಸಮಯ ಬೇಕಾಗುತ್ತದೆ. ಅಲ್ಲಿಯವರೆಗೆ ಶಾಲೆಗಳು ತೆರೆಯುವುದಿಲ್ಲ. ಹೀಗಾಗಿ ಕುಟುಂಬ ನಿರ್ವಹಣೆಗೆ ಏನು ಮಾಡುವುದು ಎಂದು ಚಿಂತಿಸಿ, ಶಿಕ್ಷಕರು ತರಕಾರಿ, ಮಾಸ್ಕ್ ಹಾಗೂ ಎಗ್ ರೈಸ್ ಮಾರಟ ಮಾಡುವ ಕೆಲಸಕ್ಕೆ ನಿಂತಿದ್ದಾರೆ.

- Advertisement -