ಬೆಂಗಳೂರು: ಜೂನ್ 19 ರಂದು ನಡೆಯಲಿರುವ ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಕಾಂಗ್ರೆಸ್, ಜೆಡಿಎಸ್ ಇಂದು ಅಭ್ಯರ್ಥಿಯನ್ನು ಘೋಷಿಸಿದೆ. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯಾಗಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ. ಇತ್ತ ಬೆಂಗಳೂರಿನಲ್ಲಿ ನಡೆದ ಜೆಡಿಎಲ್ಪಿ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರನ್ನು ಅಭ್ಯರ್ಥಿಯಾಗಿ ಜೆಡಿಎಸ್ ನಿಂದ ಕಣಕ್ಕಿಳಿಸಲಾಗಿದೆ.
Advertisement
ಕಾಂಗ್ರೆಸ್ ಏಕಾಂಗಿಯಾಗಿ ಒಂದು ಸ್ಥಾನವನ್ನು ಗೆಲ್ಲಲಿದ್ದು ಜೆಡಿಎಸ್ಗೆ ಒಂದು ಸ್ಥಾನಕ್ಕೆ ಬೆಂಬಲ ನೀಡಲಿದೆ. ಈ ಬಾರಿ ಬಿಜೆಪಿಗೆ ಎರಡು ಸ್ಥಾನಗಳ ಗೆಲ್ಲುವ ಅವಕಾಶವಿದ್ದು, ಇನ್ನು ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ರಾಜ್ಯಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಸಾಕಷ್ಟು ಪೈಪೋಟಿ ಶುರುವಾಗಿತ್ತು. ಈ ಒಂದು ಸ್ಥಾನಕ್ಕೆ ಬಿ.ಕೆ ಹರಿಪ್ರಸಾದ್ ಮತ್ತು ರಾಜೀವ್ ಗೌಡ ಮರು ಆಯ್ಕೆ ಬಯಸಿದ್ದರು. ಲೋಕಸಭಾ ಟಿಕೆಟ್ ವಂಚಿತ ಮಾಜಿ ಸಂಸದ ಮುದ್ದಹನುಮೇಗೌಡರು ಕೂಡಾ ಟಿಕೆಟ್ಗಾಗಿ ಪ್ರಯತ್ನ ಮಾಡಿದ್ದರು.
Advertisement
ಲೋಕಸಭೆ ಚುನಾವಣೆ ಬಳಿಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಗೆ ಆಯ್ಕೆಯಾಗುವ ಇಂಗಿತವನ್ನು ಹೈಕಮಾಂಡ್ ಮುಂದೆ ವ್ಯಕ್ತಪಡಿಸಿದ್ದರು. ಇದಕ್ಕಾಗಿ ಅವರು ನಿರಂತರ ಪ್ರಯತ್ನ ಕೂಡ ಮಾಡುತ್ತಿದ್ದರು. ರಾಜ್ಯಸಭೆಯಲ್ಲಿ ಬಿಜೆಪಿ ವಿರುದ್ಧ ಗಟ್ಟಿ ಧ್ವನಿಯ ಅವಶ್ಯಕತೆ ಹಿನ್ನಲೆ ಎಐಸಿಸಿ ರಾಜ್ಯದ ವರದಿಗೂ ಮುನ್ನ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಹೆಚ್.ಡಿ ದೇವೇಗೌಡರು ಅಭ್ಯರ್ಥಿಯಾದರೆ ಕಾಂಗ್ರೆಸ್ ಬೆಂಬಲ ನೀಡುವ ಭರವಸೆ ನೀಡಿದ ಹಿನ್ನೆಲೆ ಜೆಡಿಎಸ್ ಹೆಚ್.ಡಿ.ದೇವೇಗೌಡರನ್ನೇ ಆಯ್ಕೆ ಮಾಡಿದೆ. ಇದನ್ನು ಓದಿ: ಎಚ್ಡಿಡಿ ಸ್ಪರ್ಧೆ ಬಗ್ಗೆ ನಮ್ಮೊಂದಿಗೆ ಯಾರೂ ಚರ್ಚಿಸಿಲ್ಲ- ಡಿಕೆಶಿ
Advertisement
Advertisement
ಎಚ್ಡಿಡಿ, ಖರ್ಗೆ ಟಿಕೆಟ್ ಫೈನಲ್ ಆಗಿದ್ದು ಯಾಕೆ?
ಕಾಂಗ್ರೆಸ್ ಹೈಕಮಾಂಡ್ ಆಪ್ತ ವಲಯದಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಲೋಕಸಭೆ ಅವಧಿಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕರಾಗಿ ಛಾಪು ಮೂಡಿಸಿದ್ದರು. ಪರಿಣಾಮ ಪ್ರಧಾನಿ ಮೋದಿ, ಅಮಿತ್ ಶಾ ಕೆಂಗಣ್ಣಿಗೆ ಗುರಿಯಾಗಿದ್ದ ಖರ್ಗೆ ಚುನಾವಣೆಯಲ್ಲಿ ಸೋಲುಂಡಿದ್ದರು. ಲೋಕಸಭೆ ಚುನಾವಣೆ ಸೋಲಿನ ಬಳಿಕ ಮಹಾರಾಷ್ಟ್ರ ರಾಜ್ಯದ ಉಸ್ತುವಾರಿ ವಹಿಸಿಕೊಂಡು ಶಿವಸೇನೆ ಮತ್ತು ಎನ್ಸಿಪಿ ಜೊತೆಗೆ ಮೈತ್ರಿ ಮೂಲಕ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಜೂನ್ 8 ಕ್ಕೆ ರಾಜ್ಯ ಸಭೆ ಸದಸ್ಯ ಗುಲಾಂ ನಬಿ ಆಜಾದ್ ಅವರ ಅವಧಿ ಅಂತ್ಯವಾಗಲಿದೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ನಾಯಕನ ಅವಶ್ಯಕತೆ ಇದ್ದು, ಬಿಜೆಪಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸುವ ಚತುರ ಮಾತುಗಾರ ಖರ್ಗೆ ಅವರನ್ನು ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದೆ. ಇದನ್ನು ಓದಿ: ಮಲ್ಲಿಕಾರ್ಜುನ್ ಖರ್ಗೆಗೆ ಟಿಕೆಟ್ ಘೋಷಿಸಿದ ಹೈಕಮಾಂಡ್
ಇತ್ತ ಜೆಡಿಎಸ್ ಪಕ್ಷ ಎಚ್ಡಿ ದೇವೇಗೌಡ ಅವರಿಗೆ ಟಿಕೆಟ್ ನೀಡಿದ್ದು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಜಿ ಪ್ರಧಾನಿಗಳು ಸಾಥ್ ನೀಡಲಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ಕುಸಿಯುತ್ತಿದ್ದು, ಈ ಹಿನ್ನಲೆ ಬಿಜೆಪಿ ವಿರೋಧಿಸುವ ಪ್ರಬಲ ನಾಯಕರ ಅವಶ್ಯಕತೆ ಇದೆ. ದೇವೇಗೌಡರಿಗೆ ಬೆಂಬಲ ಸೂಚಿಸಿ ರಾಜ್ಯಸಭೆಯಲ್ಲಿ ಜೆಡಿಎಸ್ ಬೆಂಬಲ ಪಡೆಯುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ. ದೇವೇಗೌಡರಿಗೆ ಇತರೆ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿಕೊಳ್ಳುವ ಶಕ್ತಿ ಇದ್ದು, ಇದು ಮುಂದೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ಗೆ ನೆರವಾಗಲಿದೆ.