– ಇನ್ನೂ 4 ದಿನ ಧಾರಾಕಾರ ಮಳೆಯ ಮುನ್ಸೂಚನೆ
ಬೆಂಗಳೂರು: ಬಿಟ್ಟು ಬಿಡದೇ ರಾಜ್ಯಕ್ಕೆ ಕಾಡುತ್ತಿದೆ ಪುನರ್ವಸು ಮಳೆ. ಐದು ನಿಮಿಷ ಮಳೆ ಬರುತ್ತೆ, ಐದು ನಿಮಿಷ ಬರಲ್ಲ. ಒಂದು ವಾರದಿಂದ ರಾಜ್ಯದ ಬಹುತೇಕ ಕಡೆ ಇದೇ ಕಥೆ. ಪುನರ್ವಸು ಮಳೆಯ ಕಾಟಕ್ಕೆ ರಾಜ್ಯದ ಜನ ಹೈರಾಣಾಗಿದ್ದು, ಮುಂಗಾರು ಆರ್ಭಟಕ್ಕೆ ಹಲವು ಅವಾಂತರ, ಜನಜೀವನ ಅಸ್ತವ್ಯಸ್ತವಾಗಿದೆ.
Advertisement
ಮಲೆನಾಡು, ಕರಾವಳಿಯ ಹಲವೆಡೆ ಭೂಕುಸಿತ ಉಂಟಾಗಿದೆ. ಕೊಚ್ಚಿ ಹೋದ ರಸ್ತೆಗಳು, ನದಿಗಳು ಉಕ್ಕಿ ಹರಿದಿವೆ. ರಾಜ್ಯದಲ್ಲಿ ಇನ್ನೂ 4 ದಿನ ಭಾರೀ ಮಳೆ ಸಂಭವವಿದ್ದು, ಮಲೆನಾಡು, ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಸಮೀಪದ ರಸ್ತೆ ನೋಡನೋಡುತ್ತಿದ್ದಂತೆ ಕುಸಿದುಬಿದ್ದಿದೆ. ಅರ್ಧದಷ್ಟು ರಸ್ತೆಯನ್ನು ಆಪೋಷನ ತೆಗೆದುಕೊಂಡಿದೆ. ಹಂತ ಹಂತವಾಗಿ ರಸ್ತೆ ಕುಸಿಯುತ್ತಲೇ ಸಾಗ್ತಿದೆ. ಉಳಿದರ್ಧ ರಸ್ತೆ ಯಾವಾಗ ಕುಸಿಯುತ್ತೋ ಎಂಬ ಆತಂಕ ಮನೆ ಮಾಡಿದೆ. ಇಡೀ ಮಾಯವಾಗಿ ಎಲ್ಲಿ ಸಂಪರ್ಕ ಕಟ್ ಆಗುತ್ತೋ ಎಂಬ ಭೀತಿ ಈ ಭಾಗದ ಹತ್ತಾರು ಗ್ರಾಮಗಳ ಜನತೆ ಆತಂಕಕ್ಕೀಡಾಗಿದ್ದಾರೆ.
Advertisement
Advertisement
ಕೊಪ್ಪ ತಾಲೂಕಿನ ಅಬ್ಬಿಕಲ್ಲು ಹಾಗೂ ಮಲ್ಲಿಗೆ ಗ್ರಾಮದಲ್ಲೂ ಧರೆ ಕುಸಿದಿದೆ. ರಸ್ತೆಬದಿಯ ಮರಗಳು ಧರೆಗುರುಳಿವೆ. ಪರಿಣಾಮ ಅತ್ತಿಕೂಡಿಗೆ ಗ್ರಾಮದಿಂದ ಹೊರನಾಡು, ಶೃಂಗೇರಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಕಂಪ್ಲೀಟ್ ಬಂದ್ ಆಗಿದೆ. ಭಾರೀ ಗಾಳಿ-ಮಳೆಯಿಂದ ಮಲೆನಾಡಿನ ಅಲ್ಲಲ್ಲೇ ರಸ್ತೆ ಬದಿಯ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದ ಮಲೆನಾಡ ಕೆಲ ಗ್ರಾಮಗಳು ಕತ್ತಲಲ್ಲಿ ಬದುಕುವಂತಾಗಿದೆ. ಕಳಸ ತಾಲೂಕಿನ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ತುಂಗಾ-ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಕೂಡ ಮುಳುಗುವ ಹಂತ ತಲುಪಿದೆ.
Advertisement
ಹೆಬ್ಬಾಳೆ ಸೇತುವೆ ಮುಳುಗಡೆಗೆ ಮೂರೇ ಅಡಿ ಬಾಕಿ ಇದೆ. ಮಳೆ ಹೀಗೆ ಮುಂದುವರೆದಲ್ಲಿ ಇನ್ನು ಒಂದೆರಡು ದಿನಗಳಲ್ಲಿ ಹೆಬ್ಬಾಳೆ ಸೇತುವೆ ಮೇಲೆ ನೀರು ಹರಿಯಲಿದೆ. ಹೊರನಾಡಿಗೆ ಸಂಪರ್ಕ ಕಟ್ ಆಗೋ ಸಾಧ್ಯತೆಗಳು ಹೆಚ್ಚಿವೆ. ಭಾರೀ ಮಳೆಯಿಂದ ಕೊಡಗು ಜಿಲ್ಲೆ ಬಹುತೇಕ ಕತ್ತಲಲ್ಲಿ ಮುಳುಗಿದೆ. ಜಿಲ್ಲೆಯ ಬಹುತೇಕ ಕಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಎಲ್ಲೆಂದರಲ್ಲಿ ವಿದ್ಯುತ್ ತಂತಿಗಳು ಬಿದ್ದಿವೆ. ರಸ್ತೆಗಳಲ್ಲಿ ಸಹ ವಿದ್ಯುತ್ ತಂತಿಗಳು ಬಿದ್ದಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಚೆಸ್ಕಾಂ ಸಿಬ್ಬಂದಿ ಹಗರಲಿರುಳೆನ್ನದೇ ವಿದ್ಯುತ್ ಸಂಪರ್ಕ ಸರಿ ಮಾಡಲು ಶ್ರಮಿಸ್ತಾ ಇದ್ದಾರೆ.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೊಡಗು ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಡಿಕೇರಿ ತಾಲೂಕಿನ ಬಿಳಿಗೀರಿ ಸಮೀಪ ಬೆನ್ನೆಕಾಡು ಕಾಲೋನಿಯಲ್ಲಿ ರಾತ್ರಿ ಗಾಳಿ ಮಳೆಗೆ ಮರ ಬಿದ್ದು ಪಾರ್ವತಿ ಎಂಬುವವರ ಮನೆ ಸಂಪೂರ್ಣ ಜಖಂ ಅಗಿದೆ. ಮನೆಯಲ್ಲಿ ಇದ್ದ ವಸ್ತುಗಳೆಲ್ಲ ನಾಶವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಮನೆಯಲ್ಲಿ ತಾಯಿ ಮಗಳು ಇಬ್ಬರು ರಾತ್ರಿ ಊಟ ಮಾಡಿ ಮತ್ತೊಂದು ರೂಂಗೆ ಹೋಗುವ ಸಂದರ್ಭದಲ್ಲಿ ಮರ ಬಿದ್ದಿದೆ.
ಕೊಡಗು ಜಿಲ್ಲೆಯ ಮದೆನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ತೋಜಿಯಲ್ಲಿ ಸರ್ಕಾರದವರೇ ಮಾಡಿದ ಅಪರಾಧಕ್ಕೆ ಇದೀಗ ಮತ್ತೆ ಭೂಮಿ ಬಾಯ್ದೆರೆದಿದೆ. ಸುಮಾರು 10 ರಿಂದ 15 ಅಡಿಯಷ್ಟು ಅಳದವರೆಗೆ ಗುಡ್ಡ ಕುಸಿದಿದೆ. ಇನ್ನಷ್ಟು ಕುಸಿಯುವ ಸಾಧ್ಯತೆ ಇರುವುದರಿಂದ ಪಕ್ಕದಲ್ಲೇ ಇರುವ ಮಡಿಕೇರಿ ಹಾಗೂ ಮಂಗಳೂರು ರಸ್ತೆ ಬಂದ್ ಆಗುವ ಆತಂಕ ಎದುರಾಗಿದೆ. ಯಾಕಂದ್ರೆ ರಸ್ತೆ ಉಬ್ಬುತ್ತಾ ಇದೆ. 2018ರಲ್ಲಿ ಕರ್ತೋಜಿ ಗ್ರಾಮದ ಬಳಿಯೇ ರಾಷ್ಟ್ರೀಯ ಹೆದ್ದಾರಿ ಕುಸಿದಿತ್ತು. ಹೀಗಾಗಿ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಖಾಸಗಿ ವ್ಯಕ್ತಿ ಗುಡ್ಡ ಪ್ರದೇಶದಿಂದ ಸಾವಿರಾರು ಲೋಡ್ ಮಣ್ಣು ಸಾಗಿಸಿದ್ರು. ಇದೀಗ ಈ ಪ್ರದೇಶದಲ್ಲಿಯೇ ಗುಡ್ಡ ಕುಸಿತ ಆರಂಭವಾಗಿದೆ. ಇದೀಗ ಮಂಗಳೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಉಬ್ಬುತ್ತಿದ್ದು, ಉಬ್ಬಿರುವ ಜಾಗದ ಬಳಿ ಬ್ಯಾರಿಕೇಡ್ ಹಾಕಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆಗೆ ಹೊನ್ನಾವರ ತಾಲೂಕಿನ ಕಾವೂರಿನಲ್ಲಿ ಗುಡ್ಡ ಕುಸಿದಿದೆ. ಕಾವೂರು ಗ್ರಾಮದ ಸುರೇಶ್ ಗೌಡ ಎನ್ನುವವರ ಮನೆಯ ಬಳಿ ಗುಡ್ಡ ಕುಸಿತವಾಗಿದೆ. ಗುಡ್ಡ ಕುಸಿದ ರಭಸಕ್ಕೆ ಮನೆಯ ಮುಂದೆ ದೊಡ್ಡ ಕಲ್ಲುಬಂಡೆ ಉರುಳಿ ಬಂದಿದೆ. ಈ ಗುಡ್ಡದ ಮೇಲೆಯೇ ಶಾಲೆ ಸಹ ಇದ್ದು, ಹೆಚ್ಚಿನ ಕುಸಿತವಾದಲ್ಲಿ ಶಾಲೆಗೂ ತೊಂದರೆಯಾಗಿವ ಆತಂಕ ಎದುರಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಪುನರ್ವಸು ಮಳೆಯ ಅಬ್ಬರ ಹೆಚ್ಚಿದೆ. ಅಬ್ಬರದ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಗೆ ನೀರು ನುಗ್ಗಿದೆ. ಅಂತರ ಗಂಗೆ ಆತ್ಮಲಿಂಗದ ಸ್ಪರ್ಷ ಮಾಡಿದೆ. ಏಕಾಏಕಿ ಗರ್ಭಗುಡಿ ಕೆಳಭಾಗದಿಂದ ಜಲ ಒಡೆಯುವ ಮೂಲಕ ಗರ್ಭಗುಡಿಯ ತುಂಬ ನೀರು ತುಂಬಿಕೊಂಡಿದೆ. ದೇವಸ್ಥಾನದ ಗರ್ಭಗುಡಿಯಲ್ಲಿ ಅಭಿಷೇಕ ಮಾಡಿದ ನೀರು ಹೋಗುವ ಸೋಮಸೂತ್ರ ನಾಲಾದ ಭಾಗದಿಂದ ನೀರು ಬರುತಿದ್ದು ಸಾತ್ವಿಕರನ್ನು ಪುಳಕಿತರನ್ನಾಗಿದೆ. ಕೂಡಲೇ ದೇಗುಲದ ಸಿಬ್ಬಂದಿ ದೇವರ ಪೂಜಾ ಕಾರ್ಯಕ್ಕೆ ತೊಂದರೆಯಾಗಬಾರದು ಎಂದು ನೀರನ್ನು ಖಾಲಿ ಮಾಡಿಸಿದೆ. ಅಂಕೋಲ ದಲ್ಲಿ 91.0, ಹಳಿಯಾಳ-33.4, ಕಾರವಾರ-130.7, ಮುಂಡಗೋಡು-18.8, ಶಿರಸಿ-96.0, ಯಲ್ಲಾಪುರ-44.4, ಭಟ್ಕಳ-105.0, ಹೊನ್ನಾವರ-120.0, ಕುಮಟಾ-113.6, ಸಿದ್ದಾಪುರ-106.4, ಜೋಯಿಡಾ-70.6 ಮಿಲೀ ಮೀಟರ್ ಮಳೆಯಾಗಿದೆ. ಜಿಲ್ಲೆಯಲ್ಲಿ ಜೂ18 ರವರೆಗೂ ಜೋರು ಮಳೆ ಬೀಳುವ ಮುನ್ಸೂಚನೆ ಇದೆ. ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಉತ್ತರ ಕನ್ನಡದಲ್ಲಿ ಮತ್ತೆ ಮಳೆರಾಯ ಅಬ್ಬರಿಸುತ್ತಿದ್ದಾನೆ. ಕರಾವಳಿ ಭಾಗದಲ್ಲಿ ಅಬ್ಬರದ ಮಳೆಯ ಜೊತೆಗೆ ಸಮುದ್ರವೂ ಪ್ರಕ್ಷುಬ್ಧವಾಗಿದೆ. ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಪ್ರವಾಸಿಗರು, ಸ್ಥಳೀಯರಿಗೂ ಕಡಲ ತೀರಕ್ಕೆ ಬರದಂತೆ ನಿರ್ಬಂಧ ಹೇರಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಆಗ್ತಿದೆ. ಮಂಗಳೂರು ಹೊರವಲಯದ ಪದವಿನಂಗಡಿಯಲ್ಲಿ ರಸ್ತೆ ಬದಿಯಲ್ಲಿದ್ದ ಎತ್ತರದ ತೆಂಗಿನ ಮರ ಗಾಳಿಯ ಅಬ್ಬರಕ್ಕೆ ಉರುಳಿಬಿದ್ದಿದೆ. ಮರ ಬೀಳುವ ವೇಳೆ ಕೆಲವೇ ಸೆಕೆಂಡ್ಗಳಲ್ಲಿ ಬೈಕ್ ಸವಾರ ಬಚಾವ್ ಆಗಿದ್ದಾರೆ. ತೆಂಗಿನ ಮರ ಬೀಳ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಅರಬ್ಬೀ ಸಮುದ್ರ ಸಂಪೂರ್ಣ ಪ್ರಕ್ಷುಬ್ಧಗೊಂಡಿದೆ. ಮಂಗಳೂರಿನ ಉಳ್ಳಾಲದ ಬಟ್ಟಪಾಡಿ, ಸೋಮೇಶ್ವರ, ಉಚ್ಚಿಲ ಕಡಲ ಕಿನಾರೆಯಲ್ಲಿ ಅಬ್ಬರ ಹೆಚ್ಚಾಗಿದೆ. ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಉಡುಪಿ ಜಿಲ್ಲೆಯಲ್ಲೂ ಧಾರಾಕಾರ ಮಳೆ ಆಗ್ತಿದ್ದು ಜಿಲ್ಲೆಯಲ್ಲಿ ಗಂಟೆಗೆ 60 ಕಿಲೋ ಮೀಟರ್ ವೇಗದಲ್ಲಿ ಗಾಳಿ ಮಳೆ ಆಗ್ತಿದೆ. ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರು ಮಕ್ಕಿಮನೆಯಲ್ಲಿ ಮನೆ ಮೇಲೆ ಬೃಹತ್ ಮರ ಬಿದ್ದಿದೆ. ಮನೆಯಲ್ಲಿದ್ದ ಗಣಪಯ್ಯ ಮತ್ತು ವಾರಿಜ ದಂಪತಿ ಗಾಯಗೊಂಡಿದ್ದು, ಮನೆಗೆ ಭಾರೀ ಹಾನಿ ಆಗಿದೆ. ಇತ್ತ ಕಾಪು ತಾಲೂಕಿನಲ್ಲಿ ಗಾಳಿ ಮಳೆ ಅಬ್ಬರಕ್ಕೆ ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ನೂರೈವತ್ತು ವರ್ಷದಷ್ಟು ಹಳೆಯ ಬೃಹತ್ ಮರ ಉರುಳಿ ಬಿದ್ದಿದೆ.
ಹಾಸನದ ಸಕಲೇಶಪುರದಲ್ಲಿ ಮೂರು ದಿನಗಳಿಂದ ಮಳೆ ತನ್ನ ಆರ್ಭಟವನ್ನು ಮುಂದುವರಿಸಿದ್ದು, ನಿರಂತರವಾಗಿ ಸುರಿದ ಮಳೆಯಿಂದಾಗಿ ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯ ಪೇಂಟರ್ ಪೌಲ್ ಎಂಬವರ ಮನೆಯ ಮುಂಬಾಗದ ಗಾರೆ, ಮಣ್ಣು ಕುಸಿದಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಹಾನಿಯಾಗಿದೆ. ಪುರಸಭೆ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ರೀತಿ ಮಳೆ ಮುಂದುವರಿದರೆ ಅನೇಕ ಕಡೆಗಳಲ್ಲಿ ಈ ರೀತಿಯ ಭೂ ಕುಸಿತ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.
ಸಕಲೇಶಪುರ ತಾಲೂಕಿನ ಜಮ್ಮನಹಳ್ಳಿಯ ಅಡಿಕೆ ತೋಟ, ಗದ್ದೆಗಳು ಜಲಾವೃತವಾಗಿವೆ. ಭಾರಿ ಮಳೆಯಿಂದ ಬೆಳೆ ನಾಶವಾಗುವ ಭೀತಿಯಲ್ಲಿ ರೈತರಿದ್ದಾರೆ. ಕಾಫಿ ಬೆಳೆಗಾರ ಶೇಖ್ ರಾಜ್ಗೆ ಸೇರಿದ ತೋಟದಲ್ಲಿ ಹಳ್ಳದ ನೀರು ತುಂಬಿ ಹರಿಯುತ್ತಿದೆ. ಎಲ್ಲಿ ನೋಡಿದ್ರೂ ನೀರೇ ಕಾಣ್ತಿದೆ. ಕಳಸ ತಾಲೂಕಿನ ಕುದುರೆಮುಖ, ಮೂಡಿಗೆರೆ ತಾಲೂಕಿನ ದೇವರಮನೆಗುಡ್ಡ, ಶೃಂಗೇರಿ ತಾಲೂಕಿನ ಕೆರೆಕಟ್ಟೆಯ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಜಿಲ್ಲೆಯ ಜಲಪಾತಗಳಿಗೂ ಜೀವಕಳೆ ಬಂದಿದೆ. ತರೀಕೆರೆ ತಾಲೂಕಿನ ಕಾಮನದುರ್ಗ ಹಾಗೂ ಹೆಬ್ಬೆ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು ನೋಡುಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿವೆ.