ಬೆಂಗಳೂರು: ರಾಜ್ಯ ಸರ್ಕಾರ ಇಷ್ಟು ದಿನ ಮೈಮರೆತು ಕುಳಿತಿದ್ದ ಕಾರಣ ರಾಜ್ಯದಲ್ಲಿ ಕೊರೋನಾ ಆರ್ಭಟ ಹೆಚ್ಚಾಗುತ್ತಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದ್ದರೆ ರಾಜ್ಯದಲ್ಲಿ ಮಾತ್ರ ಕಳೆದ ಮೂರು ವಾರಗಳಿಂದ ತೀವ್ರತೆ ಶೇ.39ರಷ್ಟು ಹೆಚ್ಚಾಗಿದೆ. ಹೀಗಾಗಿ, ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವ ಹಾಗೆ ಕೊರೋನಾ ನಿಯಂತ್ರಣ ಸಂಬಂಧ ಮತ್ತೆ ಕಠಿಣ ನಿಯಮಗಳಿಗೆ ಸರ್ಕಾರ ಮನಸ್ಸು ಮಾಡಿದಂತೆ ಕಾಣುತ್ತಿದೆ. ಸರ್ಕಾರದ ಬತ್ತಳಿಕೆಯಲ್ಲಿದ್ದ ಮತ್ತೆ ಹಳೇ ನಿಯಮಗಳನ್ನು ಒಂದೊಂದಾಗಿ ಜಾರಿ ಮಾಡುತ್ತಿದೆ.
ಮೊನ್ನೆಯಷ್ಟೇ ಮಾಸ್ಕ್ ಧರಿಸದವರಿಗೆ ವಿಧಿಸುವ ದಂಡದ ಪ್ರಮಾಣವನ್ನು 1 ಸಾವಿರ ರೂಪಾಯಿಗೆ ಹೆಚ್ಚಿಸಿದ್ದ ಬಿಎಸ್ವೈ ಸರ್ಕಾರ, ಇದೀಗ ಕೊರೋನಾ ಟೆಸ್ಟ್ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ಐಎಲ್ಐ, ಸಾರಿ ಕೇಸ್ಗಳು.., ಸೋಂಕಿತರ ಸಂಪರ್ಕದಲ್ಲಿರುವವರು ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕೆಂದು ಆದೇಶ ಹೊರಡಿಸಿದೆ.
Advertisement
Advertisement
ಇನ್ಮುಂದೆ ಕೊರೊನಾ ಟೆಸ್ಟಿಂಗ್ಗೆ ಯಾರೂ ನಿರಾಕರಿಸುವಂತೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರವಾಸ ತಾಣಗಳಿಗೆ ಹೆಚ್ಚು ಪ್ರವಾಸಿಗಳು ಭೇಟಿ ನೀಡುತ್ತಿರುವ ಕಾರಣ ಕೊರೊನಾ ಮತ್ತಷ್ಟು ಹೆಚ್ಚುವ ಆತಂಕ ಎದುರಾಗಿದೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
Advertisement
ಹೋಟೆಲ್, ಹೋಂ ಸ್ಟೇಗಳಲ್ಲಿ ಉಳಿಯುವವರು ಕೋವಿಡ್ ಟೆಸ್ಟ್ ಸರ್ಟಿಫಿಕೇಟ್ ಕಡ್ಡಾಯ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ. ಅಲ್ಲದೇ, ಪ್ರವಾಸಿ ತಾಣಗಳಲ್ಲಿ ಆರೋಗ್ಯ ಇಲಾಖೆ ಚೆಕ್ ಪೋಸ್ಟ್ ಸ್ಥಾಪಿಸಿ, ಪ್ರವಾಸಿಗರ ಗಂಟಲು ದ್ರವ ಸಂಗ್ರಹಕ್ಕೆ ಸೂಚನೆ ನೀಡಿದ್ದಾರೆ. ಇನ್ನು ಕೋವಿಡ್ ನಿಯಂತ್ರಣ ಸಂಬಂಧ ಇದೇ ಗುರುವಾರ 11 ಜಿಲ್ಲೆಗಳ ಡಿಸಿಗಳ ಜೊತೆ ಸಿಎಂ ಯಡಿಯೂರಪ್ಪ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.
Advertisement
ಯಾರಿಗೆ ಕೊರೊನಾ ಟೆಸ್ಟ್ ಕಡ್ಡಾಯ.. ?
* ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರು
* ಜ್ವರದ ಲಕ್ಷಣ ಇರುವವವರು
* ಉಸಿರಾಟ ಸಂಬಂಧಿ ತೊಂದರೆಯಿಂದ ಬಳಲುತ್ತಿರುವವರು
* ಕೋವಿಡ್ ಚಿಕಿತ್ಸೆಯಲ್ಲಿ ತೊಡಗಿರುವ ಆರೋಗ್ಯ ಸಿಬ್ಬಂದಿ
* ಕಂಟೈನ್ಮೆಂಟ್ ಝೋನ್, ಬಫರ್ ಝೋನ್ನಲ್ಲಿ ಇರುವವರು
* ಆರೋಗ್ಯ ಸಿಬ್ಬಂದಿಯಿಂದ ಗುರುತಿಸಲ್ಪಟ್ಟ ಯಾವುದೇ ವ್ಯಕ್ತಿ
* ಇನ್ಮುಂದೆ ಕೋವಿಡ್ ಟೆಸ್ಟ್ ನಿರಾಕರಿಸುವಂತೆಯೇ ಇಲ್ಲ