Connect with us

Districts

‘ಬಿಜೆಪಿ ಸರ್ಕಾರದಲ್ಲಿ ಇಬ್ಬರು ಸಿಎಂ’- ಸಿದ್ದು ಹೇಳಿಕೆಗೆ ಸಚಿವ ಬಿಸಿ ಪಾಟೀಲ್ ತಿರುಗೇಟು

Published

on

ಕೊಪ್ಪಳ: ಬಿಜೆಪಿ ಸರ್ಕಾರದಲ್ಲಿ ಇಬ್ಬರು ಸಿಎಂ ಇದ್ದಾರೆ ಎಂಬ ಮಾಜಿ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಕೃಷಿ ಸಚಿವ ಬಿಸಿ ಪಾಟೀಲ್ ಅವರು, ಸಿದ್ದರಾಮಯ್ಯ ಅವರ ಕಾಲದಲ್ಲೂ ಇಬ್ಬರು ಸಿಎಂ ಇದ್ದರು. ಒಬ್ಬರು ಸಿದ್ದರಾಮಯ್ಯ ಆದರೆ ಮತ್ತೊಬ್ಬರು ರಾಕೇಶ್ ಆಗಿದ್ದರು ಎಂದು ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಬಿಸಿ ಪಾಟೀಲ್ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ಕೆಂಪಯ್ಯ ಕೂಡ ಹೋಂ ಮಿನಿಸ್ಟರ್ ಆಗಿದ್ದರು. ಆದರೆ ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಯಾವತ್ತು ವಿಜಯೇಂದ್ರ ಹಸ್ತಕ್ಷೇಪ ಮಾಡಿಲ್ಲ. ಕೇವಲ ಇದು ಸಿದ್ದರಾಮಯ್ಯ ಅವರು ಮಾಡಿರುವ ರಾಜಕೀಯ ಆರೋಪ. ಚುನಾವಣೆ ಸಮಯದಲ್ಲಿ ಹೆಂಡತಿ, ಮಕ್ಕಳು ಸಂಬಂಧಿಕರು ದುಡಿಯುತ್ತಾರೆ. ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಮೇಲೆ ಅವರನ್ನು ದೂರ ಮಾಡೋಕ್ಕಾಗುತ್ತಾ? ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನಡೆಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರ ಬೀಳಲು ಅವರೇ ಕಾರಣ ಎಂದು ಕಿಡಿಕಾರಿದ್ರು.

ಕಾಮನ್ ಸೆನ್ಸ್, ಸಾಮಾನ್ಯ ಜ್ಞಾನ ಇರಬೇಕು: ಇದೇ ವೇಳೆ ಕೊರೊನಾ ಸೋಂಕು ನಿಯಂತ್ರಣದ ಕುರಿತು ಸರ್ಕಾರದ ವಿರುದ್ಧ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೊರೊನಾ ಬಗ್ಗೆ ತಿಳಿದುಕೊಳ್ಳಲು ಬರಿ ಕಾಮನ್ ಸೆನ್ಸ್ ಇದ್ದರೆ ಸಾಲದು. ಜೊತೆಗೆ ಸಾಮಾನ್ಯ ಜ್ಞಾನ ಕೂಡ ಇರಬೇಕು. ಕೊರೊನಾ ಮಾಹಿತಿಗಾಗಿ ಪಿಎಚ್‍ಡಿ ಮಾಡಬೇಕೆಂದಿಲ್ಲ. ಕಾಮನ್ ಸೆನ್ಸ್ ಸಾಕು ಎಂದು ಟೀಕೆಗಳಿಗೆ ಟಾಂಗ್ ನೀಡಿದರು.

ಇಡೀ ಜಗತ್ತಿನಲ್ಲಿ ಕೊರೊನಾ ಕೇಸ್‍ಗಳು ಹೆಚ್ಚಿರುವುದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರ ಇಟಲಿ ದೇಶದಲ್ಲಿ. ಅತ್ಯಂತ ಕಡಿಮೆ ಕೊರೊನಾ ಕೇಸ್‍ಗಳು ಪತ್ತೆಯಾಗುತ್ತಿರುವ ಬೃಹತ್ ಜನಸಂಖ್ಯೆ ಹೊಂದಿರುವ ಭಾರತದಲ್ಲಿ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಜ್ಯದ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದಾರೆ ಎಂದರು.

ಕೊಪ್ಪಳದಲ್ಲಿ ಪ್ರಾಯೋಗಿಕವಾಗಿ 55 ಸ್ಯಾಂಪಲ್ ಪರೀಕ್ಷೆಯನ್ನು ಮಾಡಲಾಗಿದೆ. 55 ಸ್ಯಾಂಪಲ್ ಟೆಸ್ಟ್ ನೆಗೆಟಿವ್ ಬಂದಿದೆ. ಈಗ ಕೋವಿಡ್ ಟೆಸ್ಟ್ ಇಲ್ಲಿಯೇ ನಡೆಯುತ್ತದೆ. ಇದಕ್ಕೂ ಮುನ್ನ ಬಳ್ಳಾರಿ, ಬೆಂಗಳೂರು ಟೆಸ್ಟ್ ಕಳುಹಿಸಲಾಗುತ್ತಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಇಲ್ಲಿ ಲ್ಯಾಬ್ ಮಾಡಲಾಗಿದೆ ಎಂದರು. ಇದೇ ವೇಳೆ ಸ್ಥಳೀಯ ಶಾಸಕರು ಕಾರ್ಯಕ್ರಮಕ್ಕೆ ಗೈರ ಹಾಜರಿ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸ್ಥಳೀಯ ಶಾಸಕರಿಗೆ ಇವತ್ತಿನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಗಿತ್ತು. ಆದರೆ ಯಾವುದೇ ಸಮನ್ವಯದ ಕೊರತೆ ಇಲ್ಲ ಎಂದರು.

Click to comment

Leave a Reply

Your email address will not be published. Required fields are marked *