Bengaluru CityCrimeLatestMain Post

ರಾಜಸ್ಥಾನದಿಂದ ಬರ್ತಿದ್ದ ಡ್ರಗ್ಸ್ ಗೆ ಎಂಜಿನಿಯರಿಂಗ್ ವಿದ್ಯಾರ್ಥಿಗಳೇ ಕಸ್ಟಮರ್ಸ್!

ಬೆಂಗಳೂರು: ರಾಜಸ್ಥಾನ ಮತ್ತು ಗುಜರಾತ್ ನಿಂದ ಡ್ರಗ್ಸ್ ತರಿಸಿ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಉತ್ತರ ಭಾರತ ಮೂಲದ ಇಬ್ಬರು ಪೆಡ್ಲರ್ ಗಳನ್ನ ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ.

ಪಪ್ಪುರಾಮ್ ಹಾಗೂ ಚುನ್ನಿಲಾಲ್ ಬಂಧಿತ ಆರೋಪಿಗಳಾಗಿದ್ದಾರೆ. ಇವರು ರಾಜಸ್ಥಾನ ಮೂಲದವರಾಗಿದ್ದಾರೆ. ಬಂಧಿತರಿಂದ 1.6 ಕೆ.ಜಿ ಗ್ರಾಂ. ಬ್ರೌನ್ ಶುಗರ್, 800ಗ್ರಾಂ ಎಂಡಿಎಂ, 1.7 ಕೆ.ಜಿ. ಗಾಂಜಾ, ಕೃತ್ಯಕ್ಕೆ ಬಳಸಿದ್ದ ಸ್ವಿಫ್ಟ್ ಡಿಜೈರ್ ಕಾರ್, ಎರಡು ಹುಕ್ಕಾ ಸೇದುವ ಸಾಧನ ಸೇರಿದಂತೆ 2 ಕೋಟಿ ರೂ.ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಪ್ರಮುಖ ಆರೋಪಿ ಪಪ್ಪುರಾಮ್ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಮಾದಕವಸ್ತು ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದ. ರಾಜಸ್ತಾನ, ಗುಜರಾತ್‍ನಲ್ಲಿ ಓಪಿಯಂ ಸೇರಿದಂತೆ ಕೆಲ ಮಾದಕ ವಸ್ತುಗಳನ್ನು ಕೃಷಿ ಚಟುವಟಿಕೆಗೆ ಮಾತ್ರ ಬಳಸಲು ಅಲ್ಲಿನ ಸರ್ಕಾರಗಳು ಅನುಮತಿ ನೀಡಿವೆ. ಇದನ್ನೇ ದುರ್ಬಳಕೆ ಮಾಡಿಕೊಂಡ ಆರೋಪಿಗಳು ವ್ಯವಸ್ಥಿತ ಜಾಲದ ಮುಖಾಂತರ ಡ್ರಗ್ಸ್‍ಗಳನ್ನು ನಗರಕ್ಕೆ ಆಮದು ಮಾಡಿಕೊಳ್ಳುತ್ತಿದ್ದ. ಇದಕ್ಕೆ ಮತ್ತೊಬ್ಬ ಆರೋಪಿ ಕೈ ಜೋಡಿಸಿದ್ದ.

ದಂಧೆಯಲ್ಲಿ ಮುಳುಗಿದ್ದ ಆರೋಪಿಗಳು ರಾಜಸ್ಥಾನದಿಂದ ಬೆಂಗಳೂರಿಗೆ ಬರುವ ಗೂಡ್ಸ್ ವಾಹನಗಳ ಮುಖಾಂತರ ಡ್ರಗ್ಸ್‍ಗಳನ್ನು ನಗರಕ್ಕೆ ಸಾಗಾಟಕ್ಕೆ ಮಾಡುತ್ತಿದ್ದರು. ಯಾರಿಗೂ ಗುಮಾನಿ ಬರದಿರಲು ಪ್ಯಾಕಿಂಗ್ ಮಾಡಿದ ಡ್ರಗ್ಸ್ ಮೇಲೆ ಮಸಾಲ ಪದಾರ್ಥವಾದ ಚಕ್ಕೆಯನ್ನು ಪುಡಿ ಮಾಡಿ ಸಿಂಪಡಿಸುತ್ತಿದ್ದರು. ಇದರಿಂದ ಡ್ರಗ್ಸ್ ವಾಸನೆ ಬರುತ್ತಿರಲ್ಲ. ಅಲ್ಲದೆ ಈ ಬಗ್ಗೆ ಪೊಲೀಸರಿಗೆ ಗೊತ್ತಾಗುವುದಿಲ್ಲ ಎಂದು ಭಾವಿಸಿ ನಗರ ಅತ್ತಿಬೆಲೆ ಬಳಿ ಡ್ರಗ್ಸ್ ಪ್ಯಾಕೇಟ್‍ಗಳನ್ನು ಸ್ವೀಕರಿಸುತ್ತಿದ್ದರು. ಡ್ರಗ್ಸ್ ಅವ್ಯವಹಾರ ನಡೆಸುತ್ತಿದ್ದ ಪಪ್ಪುರಾಮ್ ನಗರದ ಹೊರ ವಲಯದಲ್ಲಿ ಪ್ರತ್ಯೇಕ ಮೂರು ಮನೆ ಮಾಡಿಕೊಂಡಿದ್ದ. ಅತ್ತಿಬೆಲೆಯಲ್ಲಿ ಈತನ ಕುಟುಂಬ ವಾಸ್ತವ್ಯ ಹೂಡಿದರೆ ಚಂದಾಪುರ ಬಳಿ ಡ್ರಗ್ಸ್ ಶೇಖರಿಸಲು ಪ್ರತ್ಯೇಕ ಮನೆ ಮಾಡಿದ್ದ.

ಪಪ್ಪುರಾಮ್ ಸಹಚರ ಚುನ್ನಿಲಾಲ್ ಇಬ್ಬರು ಉಳಿದುಕೊಳ್ಳಲು ಮತ್ತೊಂದು ಮನೆ ಮಾಡಿಕೊಂಡಿದ್ದ. ಗಿರಿನಗರ, ಹನುಮಂತನಗರ ಹಾಗೂ ಸಿಟಿ ಮಾರ್ಕೆಟ್ ಸೇರಿದಂತೆ ವಿವಿಧ ಕಡೆ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದರು. ನಿರಂತರವಾಗಿ ಡ್ರಗ್ಸ್ ಮಾರಾಟ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳು ಪೊಲೀಸರ ಭೀತಿಯಿಂದ ಮೂರು ತಿಂಗಳಿಗೊಮ್ಮೆ ಮನೆ ಬದಲಾವಣೆ ಜೊತೆಗೆ ಮೊಬೈಲ್ ಚೇಂಜ್ ಮಾಡುತ್ತಿದ್ದರು.

ಪೊಲೀಸರು ಆರೋಪಿಗಳನ್ನು ಹಿಡಿಯಲು ಕಷ್ಟಸಾಧ್ಯವಾಗಿತ್ತು. ಅಲ್ಲದೆ ಹಳೆಯ ಹಾಗೂ ನಂಬಿಕಸ್ಥ ಗ್ರಾಹಕರನ್ನು ಹೊರತುಪಡಿಸಿದರೆ ಅಪರಿಚಿತರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿರಲಿಲ್ಲ. ಕಳೆದ ಹತ್ತು ತಿಂಗಳಿಂದ ಆರೋಪಿಗಳ ಬೆನ್ನು ಬಿದ್ದಿದ್ದ ಇನ್ಸ್‌ಪೆಕ್ಟರ್‌ ಕುಮಾರಸ್ವಾಮಿ ನೇತೃತ್ವದ ತಂಡ ಆರೋಪಿಗಳ ಹಳೆ ಗ್ರಾಹಕನೊಬ್ಬನ ಮುಖಾಂತರ ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರಾಟ ಮಾಡುವಾಗ ದಂಧೆಕೋರರು ಸಿಕ್ಕಿಬಿದ್ದಿದ್ದಾರೆ. ಪ್ರಮುಖ ಆರೋಪಿ ಪಪ್ಪುರಾಮ್ 2019ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಹನುಮಂತನಗರ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ. ಜಾಮೀನನ ಮೇಲೆ ಹೊರಬಂದ ಮತ್ತೋರ್ವ ಆರೋಪಿ ಜೊತೆಗೂಡಿ ದಂಧೆಯಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published.

Back to top button