Belgaum
ರಾಜಕಾರಣಿಗಳು, ಉದ್ಯಮಿಗಳ ಮೇಲೆ ಕೊವಾಕ್ಸಿನ್ ಪ್ರಯೋಗ

ಬೆಳಗಾವಿ: ಕೊರೊನಾ ಮಹಾಮಾರಿಗೆ ಲಸಿಕೆ ಕಂಡು ಹಿಡಿಯುತ್ತಿರುವ ಭಾರತ ಇದರ ಪ್ರಯೋಗಕ್ಕೆ ಮುಂದಾಗಿದೆ. ಲಸಿಕೆ ಪ್ರಯೋಗ ಕೇಂದ್ರವಾಗಿರುವ ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯಲ್ಲಿ ಈಗಾಗಲೇ ಪ್ರಯೋಗಕ್ಕಾಗಿ ಕೊಡಲಾದ ಕೋವ್ಯಾಕ್ಸಿನ್ ಲಸಿಕೆಯನ್ನು ರಾಜಕಾರಣಿಗಳು, ಮತ್ತು ಉದ್ಯಮಿಗಳು ಪಡೆದುಕೊಂಡಿದ್ದಾರೆ ಎಂದು ಆಸ್ಪತ್ರೆಯ ವೈದ್ಯ ಅಮಿತ್ ಭಾತೆ ಹೇಳಿದ್ದಾರೆ.
ಕರ್ನಾಟಕದಲ್ಲಿ ಬೆಂಗಳೂರಿನ ವೈದೇಹಿ ಆಸ್ಪತ್ರೆ ಮತ್ತು ಬೆಳಗಾವಿಯ ಜೀವನ್ ರೇಖಾ ಬಯೋಟೆಕ್ನಿಂದ ಲಸಿಕೆ ಪ್ರಯೋಗ ನಡೆಯುತ್ತಿದ್ದು. ಈಗಾಗಲೇ 3 ಬೇರೆ ಬೇರೆ ಹಂತಗಳಲ್ಲಿ ನಡೆದಿದೆ. ಪ್ರಥಮ ಹಂತದಲ್ಲಿ 4 ಮಂದಿ, ದ್ವಿತೀಯ ಹಂತದಲ್ಲಿ 50 ಜನರಿಗೆ ಲಸಿಕೆ ಕೊಡಲಾಗಿದೆ. ಇನ್ನೂ ಮೂರನೇ ಹಂತದಲ್ಲಿ 1,200 ಮಂದಿಗೆ ಲಸಿಕೆ ಪ್ರಯೋಗ ನಡೆದಿದ್ದು ಲಸಿಕೆ ಹಾಕಿಸಿಕೊಂಡವರ ಮೇಲೆ ನಿಗಾವಹಿಸುತ್ತೀದ್ದೆವೆಂದು ಜೀವನ್ ರೇಖಾ ಆಸ್ಪತ್ರೆಯ ವೈದ್ಯ ಅಮಿತ್ ಭಾತೆ ಪಬ್ಲಿಕ್ ಟಿವಿಗೆ ಹೇಳಿಕೆ ಕೊಟ್ಟಿದ್ದಾರೆ.
0 ಯಿಂದ 24 ದಿನಗಳಲ್ಲಿ 2 ಬಾರಿ ಲಸಿಕೆ ಪ್ರಯೋಗ ಮಾಡಲಾಗುತ್ತಿದ್ದು, ಲಸಿಕೆ ಪಡೆದುಕೊಂಡವರ ರಕ್ತದ ಮಾದರಿಯನ್ನು ಸಂಗ್ರಹಮಾಡಿ ಪ್ರಯೋಗಕ್ಕೆ ಒಳಪಡಿಸಿದ್ದೇವೆ. ಭಾರತದಾದ್ಯಂತ 25 ಕೇಂದ್ರದಲ್ಲಿ ಲಸಿಕೆ ಪ್ರಯೋಗ ನಡೆಸುತ್ತಿದೆ.
ಕೋವ್ಯಾಕ್ಸಿನ್ಗಾಗಿ ನಾವೂ ಸ್ವಯಂ ಪ್ರೇರಿತವಾಗಿ ಬಂದವರಿಗೆ ಲಸಿಕೆ ಕೊಡುತ್ತಿದ್ದೆವು. ಮೊದ ಮೊದಲು ಇದರ ತಿಳುವಳಿಕೆ ಇಲ್ಲದ ಕಾರಣ ಯಾರೂ ಬರುತ್ತಿರಲಿಲ್ಲ. ನಂತರ ಲಸಿಕೆಯ ಮಾಹಿತಿ ಸರಿಯಾಗಿ ತಿಳಿದುಕೊಂಡು ಹೆಚ್ಚಿನ ಜನರು ನಮ್ಮನ್ನು ಸಂಪರ್ಕಿಸಿದ್ದಾರೆ. ಈಗಾಗಲೇ ಹಲವು ಉದ್ಯಮಿಗಳು, ರಾಜಕಾರಣಿಗಳು, ಎಂಜಿನಿಯರ್ಗಳು ಲಸಿಕೆಯನ್ನು ಹಾಕಿಸಿಕೊಂಡಿದ್ದು ಅವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದೆ. ಇನ್ನೂ ಲಸಿಕೆ ಪಡೆದುಕೊಂಡವರ ಮೇಲೆ ನಾವೂ ದೂರವಾಣಿ ಮೂಲಕ ಸಂಪರ್ಕಿಸುತ್ತಿದ್ದು ಅವರ ಆರೋಗ್ಯದ ಏರುಪೇರುಗಳನ್ನು ತಿಳಿದುಕೊಂಡು ಮಾಹಿತಿ ಕಲೆಹಾಕುತ್ತಿದ್ದೇವೆ ಎಂದರು.
ಪ್ರಸ್ತುತ ಪ್ರಯೋಗವಾಗಿರುವ ಲಸಿಕೆ ಮುಂದಿನ ದಿನಗಳಲ್ಲಿ ದೇಶದಾದ್ಯಂತ ಬಿಡುಗಡೆಯಾಗುವ ಸಾಧ್ಯತೆ ಇದೆ. ಲಸಿಕೆಯ ಕುರಿತು ಜನಸಾಮಾನ್ಯರಲ್ಲಿ ಅರಿವೂ ಬಂದರೆ ಮುಂದಿನ ದಿನಗಳಲ್ಲಿ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಾಗಬಹುದೆಂದು ಅಭಿಪ್ರಾಯಪಟ್ಟರು.
