Connect with us

Corona

ಮೇ 31ರವರೆಗೂ ಲಾಕ್‍ಡೌನ್ ವಿಸ್ತರಿಸಿದ ಮಹಾರಾಷ್ಟ್ರ ಸರ್ಕಾರ

Published

on

– ತಮಿಳುನಾಡು, ಪಂಜಾಬ್, ಪ.ಬಂಗಾಳದಿಂದಲೂ ಮಹತ್ವದ ನಿರ್ಧಾರ

ಮುಂಬೈ: ಮಹಾರಾಷ್ಟ್ರ ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್ ತಗುಲಿ ಆತಂಕ ಸೃಷ್ಟಿಸಿದ ಹಿನ್ನೆಲೆ ಮೇ 31ರ ಮಧ್ಯರಾತ್ರಿಯವರೆಗೂ ಲಾಕ್‍ಡೌನ್ ವಿಸ್ತರಿಸಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರವು ಆದೇಶ ಹೊರಡಿಸಿದೆ. ಇತ್ತ ತಮಿಳುನಾಡು, ಪಂಜಾಬ್ ಹಾಗೂ ಪಶ್ಚಿಮ ಬಂಗಾಳದಲ್ಲೂ ಲಾಕ್‍ಡೌನ್ ಅನ್ನು ಮೇ 31ರ ವರೆಗೆ ವಿಸ್ತರಿಸಲಾಗಿದೆ.

ಮಹಾರಾಷ್ಟ್ರ ಸರ್ಕಾರವು ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಸಾಂಕ್ರಾಮಿಕ ರೋಗ ಕಾಯ್ದೆ 1898ರ ಅಡಿ ಮೇ 17ರ ವರೆಗೆ ರಾಜ್ಯಾದ್ಯಂತ ಲಾಕ್‍ಡೌನ್ ವಿಸ್ತರಿಸಿತ್ತು. ಈ ನಿರ್ಬಂಧವು ಇಂದು ಕೊನೆಗೊಳ್ಳುವ ಹಿನ್ನೆಲೆ ಹೊಸ ಆದೇಶವನ್ನು ಹೊರಡಿಸಲಾಗಿದೆ.

“ಕೋವಿಡ್-19 ವೈರಸ್ ಹರಡುವ ಭೀತಿಯಿಂದ ಮಹಾರಾಷ್ಟ್ರಕ್ಕೆ ಆತಂಕ ಶುರುವಾಗಿದೆ. ಆದ್ದರಿಂದ ವೈರಸ್ ಹರಡುವುದನ್ನು ತಡೆಗಟ್ಟಲು ಕೆಲವು ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಮೂಲಕ ಮೇ 31ರ ಮಧ್ಯರಾತ್ರಿಯವರೆಗೆ ಲಾಕ್‍ಡೌನ್ ಅನ್ನು ವಿಸ್ತರಿಸಲಾಗಿದೆ” ಎಂದು ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಅಹೊಯ್ ಮೆಹ್ತಾ ಆದೇಶದಲ್ಲಿ ತಿಳಿಸಿದ್ದಾರೆ.

ಗುರುವಾರ ನಡೆದ ಕ್ಯಾಬಿನೆಟ್ ಮಂತ್ರಿಗಳ ಉನ್ನತ ಮಟ್ಟದ ಸಭೆಯಲ್ಲಿ ಲಾಕ್‍ಡೌನ್ ಅನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಉದ್ದೇಶವನ್ನು ವ್ಯಕ್ತವಾಗಿತ್ತು. ಸಭೆಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್, ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್, ನಗರಾಭಿವೃದ್ಧಿ ಸಚಿವ ಏಕನಾಥ ಶಿಂಧೆ, ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ, ಕಂದಾಯ ಸಚಿವ ಬಾಲಾಸಾಹೇಬ್ ಥೋರತ್ ಮತ್ತು ಲೋಕೋಪಯೋಗಿ ಸಚಿವ ಅಶೋಕ್ ಚವಾನ್ ಭಾಗವಹಿಸಿದ್ದರು. ಕ್ಯಾಬಿನೆಟ್ ನಿರ್ಧಾರದಂತೆ ಕೊರೊನಾ ಹಾಟ್‍ಸ್ಪಾಟ್‍ಗಳಷ್ಟೇ ಅಲ್ಲದೆ ರಾಜ್ಯಾದ್ಯಂತ ಲಾಕ್‍ಡೌನ್ ವಿಸ್ತರಿಸಲಾಗಿದೆ.

ಕೋವಿಡ್-19ನಿಂದಾಗಿ ಮುಂಬೈ ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿದೆ. ಭಾನುವಾರ ಬೆಳಗ್ಗಿನ ಮಾಹಿತಿ ಪ್ರಕಾರ ಮಹಾರಾಷ್ಟ್ರದಲ್ಲಿ 30,706 ಜನರಿಗೆ ಸೋಂಕು ಪತ್ತೆಯಾಗಿದೆ. ಇತ್ತ ಪಂಜಾಬ್‍ನಲ್ಲಿ 1,900ಕ್ಕೂ ಹೆಚ್ಚು ಜನರಿಗೆ, ತಮಿಳುನಾಡಿನಲ್ಲಿ 10,500ಕ್ಕೂ ಹೆಚ್ಚು ಮಂದಿಗೆ ಕೋವಿಡ್-19 ದೃಢಪಟ್ಟಿದೆ. ಪಶ್ಚಿಮ ಬಂಗಾಳದಲ್ಲಿ 2,576 ಜನರಿಗೆ ಸೋಂಕು ತಗುಲಿದ್ದು, 232 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in