ಮಹಾಮಳೆಗೆ ಸಂಡೂರು ತಾಲೂಕಿನಲ್ಲಿ 36 ಕಚ್ಚಾ ಮನೆಗಳು ಭಾಗಶಃ ಕುಸಿತ

– ಸಚಿವ ಆನಂದ್ ಸಿಂಗ್ ಸ್ಥಳ ಪರಿಶೀಲನೆ

ಬಳ್ಳಾರಿ: ಕಳೆದ ಮೂರು ದಿನಗಳಿಂದ ಸುರಿದ ಧಾರಾಕಾರದ ಮಹಾಮಳೆಗೆ ಗಣಿಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಹಳ್ಳಕೊಳ್ಳಗಳು, ಮೇಲ್ಸೆತುವೆ ಸೇರಿದಂತೆ ನಾಟಿ ಮಾಡಿದ ಹೊಲ- ಗದ್ದೆಗಳಲ್ಲಿ ಈ ಮಳೆಯ ನೀರು ನುಗ್ಗಿದೆ. ಇದರಿಂದ ಅಪಾರ ಪ್ರಮಾಣ ಬೆಳೆನಷ್ಟ ಉಂಟಾಗಿರೋದು ಒಂದೆಡೆಯಾದ್ರೆ ಕಚ್ಚಾಮನೆಗಳಲ್ಲಿ ವಾಸಿಸುವವರನ್ನು ಕೂಡ ನಿದ್ದೆಗೆಡಿಸಿದೆ.

- Advertisement -

ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 27 ಹಾಗೂ ತೋರಣಗಲ್ಲು ಹೋಬಳಿ ವ್ಯಾಪ್ತಿಯಲ್ಲಿ 8 ಮತ್ತು ಸಂಡೂರು ಹೋಬಳಿ ವ್ಯಾಪ್ತಿಯಲ್ಲಿ ಕೇವಲ ಒಂದೇ ಒಂದು ಕಚ್ಚಾ ಮನೆಯು (ಮಣ್ಣಿನ ಮನೆಗಳು) ಭಾಗಶಃ ಕುಸಿದು ಬಿದ್ದಿದೆ. ಇದರಿಂದ ಆ ಮನೆಗಳಲ್ಲಿ ವಾಸಿಸುವ ಕುಟುಂಬ ಸದಸ್ಯರು ಭಯಭೀತರಾಗಿದ್ದಾರೆ. ಕೆಲವೆಡೆ ಭಾಗಶಃ ಮನೆಗಳು ಕುಸಿದ್ರೆ, ಉಳಿದೆಡೆ ಮನೆಯ ಒಂದು ಭಾಗ ಅಥವಾ ಮೇಲ್ಛಾವಣಿ, ಮನೆಯ ಮೂಲೆಯಲ್ಲಿ ಕುಸಿದಿದ್ದು, ಅದರಿಂದ ಮಳೆಯ ನೀರು ಮನೆಯೊಳಗೆ ನುಗ್ಗುತ್ತವೆ. ಹೀಗಾಗಿ, ರಾತ್ರಿಯಿಡೀ ನಿದ್ದೆಗೆಡುವ ಸನ್ನಿವೇಶ ನಿರ್ಮಾಣವಾಗಿದೆ.

- Advertisement -

ಸಚಿವ ಆನಂದ್ ಸಿಂಗ್ ಭೇಟಿ:
ಜಿಲ್ಲೆಯ ಹೊಸಪೇಟೆ ನಗರದಲ್ಲಿಂದು ಸುರಿದ ಭಾರೀ ಮಳೆಯಿಂದಾಗಿ ನಾನಾ ಕಡೆ ಮಳೆ ನೀರು ಜಲಾವೃತಗೊಂಡಿವೆ. ಇಲ್ಲಿನ ಪಟೇಲಗರದ ಶ್ರೀ ಕೃಷ್ಣ ದೇಗುಲದಲ್ಲಿ ಒಳಗಡೆ ನೀರು ನುಗ್ಗಿದ್ದವು. ಅರಣ್ಯ ಖಾತೆ ಸಚಿವ ಆನಂದ್ ಸಿಂಗ್ ಅವರು ಹಾಗೂ ಅವರ ಅಳಿಯ ಧರ್ಮೇಂದ್ರ ಸಿಂಗ್ ಭೇಟಿ ಪರಿಶೀಲಿಸಿದರು.

ಜೆ.ಪಿ.ನಗರದ ಬಳ್ಳಾರಿ ರಸ್ತೆಯಲ್ಲಿ ಮರ ಬಿದ್ದಿತ್ತು. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ಬಸ್ ಡಿಪೋ ಹಿಂಭಾಗದ ಬುಡ್ಗ ಜಂಗಮ ಕಾಲೊನಿಯ ಗುಡಿಸಲಿಗಳಿಗೆ ಮಳೆಯ ನೀರು ನುಗ್ಗಿದ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ.

ರಾರಾವಿ ನದಿ ಸೇತುವೆ ಮೇಲೆಲ್ಲಾ ಮಳೆಯ ನೀರು:
ಜಿಲ್ಲೆಯ ಸಿರುಗುಪ್ಪ ತಾಲೂಕಿನಿಂದ ನೆರೆಯ ಆಂಧ್ರಪ್ರದೇಶದ ಅದೋನಿ ಸಂಪರ್ಕ ಕಲ್ಪಿ ಸುವ ಪ್ರಮುಖ ಹೆದ್ದಾರಿ (ಕರ್ನೂಲು-ಕುಷ್ಠಗಿ)ಯ ರಾರಾವಿ ಬಳಿಯ (ವೇದಾವತಿ) ಹಗರಿ ನದಿಯ ಮೇಲ್ಭಾಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಈ ಮಳೆ ನೀರು ಹರಿಯುತ್ತಿರೋದರಿಂದ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಹೀಗಾಗಿ, ಸಂಪರ್ಕ ಕಲ್ಪಿಸುವ ಕೆಳಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ.

- Advertisement -