– ಜೂನ್ 21ರಿಂದ ಉಚಿತ ಲಸಿಕೆ ನೀಡಿಕೆ ಆರಂಭ
– ಒಂದೇ ದಿನ 7 ಲಕ್ಷ ಲಸಿಕೆ
ಬೆಂಗಳೂರು: ಜೂನ್ 21 ರಂದು ಜಗತ್ತಿನಾದ್ಯಂತ ಯೋಗ ದಿನ ಆಚರಿಸುತ್ತಿದ್ದು, ಈ ಬಾರಿ ಎಲ್ಲರೂ ಮನೆಯಲ್ಲೇ ಇದ್ದು ಆಚರಣೆ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಎಂದು ಮನವಿ ಮಾಡಿದರು.
Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಜೂನ್ 21 ರಂದು ಯೋಗ ದಿನವನ್ನು ಆನ್ ಲೈನ್ ನಲ್ಲೇ ಆಚರಿಸಲಾಗುತ್ತಿದೆ. ‘ಬಿ ವಿತ್ ಯೋಗ ಬಿ ಅಟ್ ಹೋಮ್’ ಮತ್ತು ‘ಯೋಗ ಫಾರ್ ವೆಲ್ ನೆಸ್’ ಎಂಬ ಘೋಷವಾಕ್ಯದಡಿ ಯೋಗ ದಿನ ಆಚರಿಸಲಾಗುತ್ತಿದೆ. ಆದರೆ ಈ ಬಾರಿ ಗುಂಪುಗೂಡಿ ಆಚರಿಸಬಾರದು. ಮುಖ್ಯಮಂತ್ರಿಗಳು ಅಧಿಕೃತ ನಿವಾಸದಲ್ಲೇ ಯೋಗ ಮಾಡಲಿದ್ದು, ನಾನು ಕೂಡ ಪಾಲ್ಗೊಳ್ಳುತ್ತೇನೆ. ಎಲ್ಲರೂ ಮುಂಜಾನೆ 6 ಗಂಟೆಗೆ ಮನೆಯಲ್ಲೇ ಯೋಗ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ ಎಂದು ಕೋರಿದರು.
Advertisement
Advertisement
ಎಸ್-ವ್ಯಾಸ ಸಂಸ್ಥೆಯ ಗೌರವಾಧ್ಯಕ್ಷ ನಾಗೇಂದ್ರ, ಜಗ್ಗಿ ವಾಸುದೇವ್, ರವಿಶಂಕರ್ ಗುರೂಜಿ, ವಚನಾನಂದ ಸ್ವಾಮೀಜಿಗಳ ಯೋಗಾಭ್ಯಾಸದ ವೀಡಿಯೋ ಹಂಚಿಕೊಳ್ಳಲಾಗುವುದು. ಆಯುಷ್ ನ ಎಲ್ಲ ಸಂಸ್ಥೆಗಳ ವಿದ್ಯಾರ್ಥಿಗಳು ಯೋಗ ಮಾಡಲು ಕೋರಲಾಗಿದೆ ಎಂದು ತಿಳಿಸಿದರು.
Advertisement
ಲಸಿಕಾ ಮೇಳಕ್ಕೆ 7 ಲಕ್ಷ ಗುರಿ:
ಜೂನ್ 21 ರಂದು ಕೋವಿಡ್ ಲಸಿಕೆ ಮೇಳಕ್ಕೆ ಚಾಲನೆ ದೊರೆಯಲಿದೆ. 18-44 ವರ್ಷದವರಿಗೆ, 45 ವರ್ಷ ಮೇಲ್ಪಟ್ಟವರಿಗೆ, ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು. 14 ಲಕ್ಷ ಕೋವಿಶೀಲ್ಡ್ ಡೋಸ್ ದಾಸ್ತಾನು ಇದ್ದು, ಸೋಮವಾರ 5 ರಿಂದ 7 ಲಕ್ಷ ಡೋಸ್ ನೀಡುವ ಗುರಿ ಇರಿಸಲಾಗಿದೆ. ಇದಕ್ಕೆ ಜನರ ಸಹಕಾರ ಬೇಕಿದೆ. ಈವರೆಗೆ 1.80 ಕೋಟಿ ಲಸಿಕೆ ನೀಡಲಾಗಿದೆ. ಅಂದರೆ ದೇಶದಲ್ಲಿ ನೀಡಿದ 15 ಲಸಿಕೆಯಲ್ಲಿ ಒಂದು ರಾಜ್ಯದ್ದು ಎಂದರು.
ಹೊಸ ವೈರಾಣು ಅಧ್ಯಯನಕ್ಕೆ ಜಿನೋಮಿಕ್ಸ್ ಸಮಿತಿ ರಚಿಸಲಾಗಿದೆ. ಪ್ರತಿ ಜಿಲ್ಲಾಮಟ್ಟದಲ್ಲಿ ತಜ್ಞರ ಸಮಿತಿ ರಚಿಸಲಾಗುವುದು. ಈ ಸಮಿತಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಿದೆ. ಈ ಮೂಲಕ 3 ನೇ ಅಲೆ ನಿಯಂತ್ರಿಸಲಾಗುವುದು. ಡಾ.ದೇವಿಪ್ರಸಾದ್ ಶೆಟ್ಟಿ ಸಮಿತಿ 3 ನೇ ಅಲೆ ಸಿದ್ಧತೆ ಕುರಿತು ಪ್ರಾಥಮಿಕ ವರದಿ ನೀಡಿದೆ. ಅದನ್ನು ಮುಖ್ಯಮಂತ್ರಿಗಳಿಗೆ ನೀಡಲಾಗುವುದು. ಅಂತಿಮ ವರದಿ ಬಂದ ಬಳಿಕ 45 ದಿನಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು. ಡೆಲ್ಟಾ ವೈರಾಣು ವೇಗವಾಗಿ ಹರಡುತ್ತಿದೆ. ಇದಕ್ಕಾಗಿ ಡಿಸೆಂಬರ್ ವರೆಗೂ ನಿತ್ಯ ಒಂದೂವರೆ ಲಕ್ಷ ಪರೀಕ್ಷೆ ಮಾಡಲು ಸೂಚಿಸಲಾಗಿದೆ. ಕೋವಿಡ್ ಎರಡು ಡೋಸ್ ಲಸಿಕೆ ಪಡೆದ 99.9 ರಷ್ಟು ಸೋಂಕು ತಗುಲಿಲ್ಲ. ಸೋಂಕು ಬಂದರೂ ತೀವ್ರ ಸಮಸ್ಯೆಯಾಗಿಲ್ಲ ಎಮದು ಸಚಿವರು ತಿಳಿಸಿದರು.