– ರಸ್ತೆಯಲ್ಲೇ ಪ್ರತಿಭಟನೆಗೆ ಕುಳಿತ ದಂಪತಿ
– ಮಗನಿಗೆ ಸೋಂಕು ಬಂದರೆ ನಮ್ಮ ತಪ್ಪು ಏನು?
ಕೋಲ್ಕತ್ತಾ: ಮಗನಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಸೋಂಕಿತನ ತಂದೆ-ತಾಯಿಯನ್ನು ಮನೆ ಮಾಲೀಕನೋರ್ವ ಬಾಡಿಗೆ ಮನೆ ನೀಡದ ಘಟನೆ ಪಶ್ಚಿಮ ಬಂಗಾಳದ ಹೌರ ಜಿಲ್ಲೆಯಲ್ಲಿ ನಡೆದಿದೆ.
ಹೌರದ ಡೆಮ್ಜೂರ್ ಪ್ರದೇಶದಲ್ಲಿ ವಾಸವಿದ್ದ ಕುಟುಂಬದಲ್ಲಿ ಆತನ ಮಗನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ವೇಳೆ ಆತನನ್ನು ಕರೆದುಕೊಂಡು ಹೋಗಲು ಮನೆಯ ಬಳಿ ಅಂಬುಲೆನ್ಸ್ ಬಂದಿದೆ. ಈ ವೇಳೆ ಈ ದಂಪತಿಯೂ ಕೂಡ ಮಗ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಹೋಗಿದ್ದಾರೆ. ಆತನ ಮಗನನ್ನು ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Advertisement
Advertisement
ಆಸ್ಪತ್ರೆಯಿಂದ ವಾಪಸ್ ಮನೆಗೆ ಬಂದ ದಂಪತಿಯನ್ನು ಮನೆಯ ಮಾಲೀಕ ತಡೆದಿದ್ದಾನೆ. ಜೊತೆಗೆ ನೀವು ನಮ್ಮ ಮನೆಯಲ್ಲಿ ಇರಬೇಡಿ, ನಿಮ್ಮನ್ನು ಇರಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾನೆ. ಈ ವಿಚಾರದಲ್ಲಿ ದಂಪತಿಯ ಪರ ನಿಲ್ಲಬೇಕಾದ ಸ್ಥಳೀಯರು ಮತ್ತು ನೆರೆಹೊರೆಯವರು ವೈರಸ್ ನಮಗೂ ಹರಡುತ್ತೆ ಎಂಬ ಭಯದಿಂದ ಮಾಲೀಕನ ಮಾತಿಗೆ ಧನಿಗೂಡಿಸಿದ್ದಾರೆ. ಇದರಿಂದ ದಂಪತಿ ಇನ್ನೂ ಭಯಭೀತರಾಗಿದ್ದಾರೆ.
Advertisement
Advertisement
ಇದಾದ ನಂತರ ದಂಪತಿ ಪೊಲೀಸರ ಮೊರೆ ಹೋಗಿದ್ದಾರೆ. ಆಗ ಸ್ಥಳಕ್ಕೆ ಬಂದ ಪೊಲೀಸರು ಅವರಿಗೇ ಕೊರೊನಾ ಲಕ್ಷಣ ಇಲ್ಲದೇ ಇದ್ದರೂ, ಕೊರೊನಾ ಪರೀಕ್ಷೆ ಮಾಡಿಸುವಂತೆ ಸಲಾಪ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದಾರೆ. ಪರೀಕ್ಷೆ ಮಾಡಿಸಿಕೊಂಡು ಬಂದರೂ ಮಾಲೀಕ ಮನೆಯಲ್ಲಿ ಉಳಿಯಲು ಅನುಮತಿ ಕೊಟ್ಟಿಲ್ಲ. ಇದರಿಂದ ನೊಂದು ದಂಪತಿ ಮುಖ್ಯ ರಸ್ತೆಯಲ್ಲಿ ಕುಳಿತು ವಾಹನ ತಡೆದು ಪ್ರತಿಭಟನೆ ಮಾಡಿದ್ದಾರೆ.
ನಮ್ಮ ಮಗನಿಗೆ ಕೊರೊನಾ ಸೋಂಕು ಬಂದರೆ ಅದರಲ್ಲಿ ನಮ್ಮ ತಪ್ಪು ಏನಿದೆ? ನಮ್ಮ ಮಗನಿಗೆ ಸೋಂಕು ತಗುಲಿದರೆ ಅದೂ ನಮ್ಮ ತಪ್ಪಾ? ಮನೆಯ ಮಾಲೀಕ ಒತ್ತಡ ಹಾಕುತ್ತಿದ್ದಾರೆ. ಜೊತೆಗೆ ನೀವು ಇಲ್ಲಯೇ ಇದ್ದರೆ ಸೋಂಕು ಹರಡುತ್ತದೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ನಾವು ನಡು ರಸ್ತೆಯಲ್ಲಿ ಕುಳಿತಿದ್ದೇವೆ. ನಮಗೆ ಬೇರೆ ಕಡೆ ಹೋಗಲು ಎಲ್ಲೂ ಜಾಗವಿಲ್ಲ ಎಂದು ಸೋಂಕಿತ ತಂದೆ ಬಸುಡೆಬ್ ಚಟರ್ಜಿ ನೋವನ್ನು ಹೊರಹಾಕಿದ್ದಾರೆ.
ಇದಾದ ನಂತರ ಸ್ಥಳಕ್ಕೆ ಪೊಲೀಸ್ ಮತ್ತು ಬಿಡಿಒ ಅಧಿಕಾರಿಗಳು ಬಂದು ದಂಪತಿಯನ್ನು ಮನವೊಲಿಸಿ ಕ್ವಾರಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ದಂಪತಿಗಳು ಚೆನ್ನಾಗಿದ್ದಾರೆ. ನಾವು ಅವರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಿದ್ದೇವೆ. ಅವರನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಬಿಡಿಒ ರಾಜಾ ಭೂಮಿಕ್ ತಿಳಿಸಿದ್ದಾರೆ.