ಶಿವಮೊಗ್ಗ: ಭದ್ರಾ ಜಲಾಶಯದ ಮುಂಗಾರು ಹಂಗಾಮಿನ ಬೆಳೆಗಳಿಗೆ ಬಲದಂಡೆ ಮತ್ತು ಎಡದಂಡೆ ಕಾಲುವೆಗಳು ಹಾಗೂ ಶಾಖಾ ನಾಲೆಗಳಿಗೆ ಜು.24 ರಿಂದ 120 ದಿನಗಳ ಕಾಲ ನೀರು ಹರಿಸಲಾಗುವುದು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ತಿಳಿಸಿದ್ದಾರೆ.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೀರಾವರಿ ಸಲಹಾ ಸಮಿತಿಯ ಸರ್ವ ಸದಸ್ಯರು ಹಾಗೂ ರೈತರೊಂದಿಗೆ ಚರ್ಚೆ ನಡೆಸಿ ಒಮ್ಮತದಿಂದ ಜುಲೈ 24 ರಿಂದ ಭದ್ರಾ ಬಲದಂಡೆ, ಎಡದಂಡೆ ನಾಲೆ, ಆನವೇರಿ, ದಾವಣಗೆರೆ, ಮಲೆಬೆನ್ನೂರು ಮತ್ತು ಹರಿಹರ ಶಾಖಾ ನಾಲೆಗಳಲ್ಲಿ ನೀರು ಹರಿಸಲು ನಿರ್ಧಾರ ಕೈಗೊಂಡಿದ್ದೇವೆ ಎಂದಿದ್ದಾರೆ.
Advertisement
Advertisement
ಜುಲೈ 15 ರಂದು ಜಲಾಶಯದಲ್ಲಿ 157 ಅಡಿ 4 ಇಂಚುಗಳಷ್ಟು ನೀರು ಸಂಗ್ರಹವಿದ್ದು, ಈ ಮಟ್ಟಕ್ಕೆ ನೀರಿನ ಸಂಗ್ರಹಣೆ 40.484 ಟಿಎಂಸಿ ಇದೆ. ಇದರಲ್ಲಿ 8.50 ಟಿ.ಎಂ.ಸಿ ಬಳಕೆಗೆ ಬಾರದ(ಡೆಡ್ ಸ್ಟೋರೇಜ್) ಪ್ರಮಾಣವಾಗಿದ್ದು, 26.652 ಟಿಎಂಸಿ ಬಳಕೆಗೆ ಬರುವ ನೀರಿನ ಪ್ರಮಾಣವಾಗಿದೆ. ಭದ್ರಾ ಬಲದಂಡೆ ಕಾಲುವೆಗೆ ಪ್ರತಿದಿನ ಸರಾಸರಿ 3,050 ಕ್ಯೂಸೆಕ್ ಮತ್ತು ಭದ್ರಾ ಎಡದಂಡೆ ಕಾಲುವೆಗೆ 490 ಒಟ್ಟು 3.540 ಕ್ಯೂಸೆಕ್ ಬೇಡಿಕೆ ಇದೆ ಎಂದು ತಿಳಿಸಿದ್ದಾರೆ.
Advertisement
ಮುಂಗಾರು ಹಂಗಾಮಿಗೆ ಅವಶ್ಯವಿರುವ ನೀರಿನ ವಿವರಣೆ: ಪ್ರಸ್ತುತ ಜಲಾಶಯದಲ್ಲಿ ಬಳಕೆಗೆ 26.652 ಟಿಎಂಸಿ ನೀರು ಲಭ್ಯವಿದ್ದು ಮುಂಗಾರು ಅವಧಿಗೆ 49.13 ಟಿಎಂಸಿ ನೀರು ಅವಶ್ಯಕತೆ ಇದೆ. ಜುಲೈ ತಿಂಗಳಿನಲ್ಲಿ ಕೊರತೆಯಿರುವ ನೀರಿನ ಪ್ರಮಾಣ 22.478 ಟಿಎಂಸಿ, ಆಗಿದ್ದು ಈ ಪ್ರಮಾಣದ ಆಧಾರದಲ್ಲಿ ಸದಸ್ಯರೆಲ್ಲ ಚರ್ಚಿಸಿ ಜು.24 ರಿಂದ ನೀರು ಹರಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
Advertisement
ಸಭೆಯಲ್ಲಿ ನೀರಾವರಿ ಸಲಹಾ ಸಮಿತಿ ಸದಸ್ಯರಾದ ರುದ್ರಮೂರ್ತಿ, ಸದಾಶಿವಪ್ಪಗೌಡ, ರಾಜಪ್ಪ, ರೈತ ಮುಖಂಡ ಹೆಚ್.ಆರ್.ಬಸವರಾಜಪ್ಪ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಯತೀಶ್ಚಂದ್ರ, ಮುಖ್ಯ ಆಡಳಿತಾಧಿಕಾರಿ ಕೃಷ್ಣಮೂರ್ತಿ. ಬಿ.ಕುಲಕರ್ಣಿ, ಸೇರಿದಂತೆ ಇತರೆ ಸದಸ್ಯರು, ರೈತರು, ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಮಳೆರಾಯನ ಅಬ್ಬರ- ಕೃಷ್ಣಾ ನದಿ ನೀರಿನಲ್ಲಿ ಏರಿಕೆ, ಸೇತುವೆ ಜಲಾವೃತ