‘ಭಗವಂತ ಒಬ್ಬನೇ ನಮ್ಮನ್ನ ಕೊರೊನಾದಿಂದ ಕಾಪಾಡಬೇಕು’: ಸಚಿವ ಶ್ರೀರಾಮುಲು

ಚಿತ್ರದುರ್ಗ: ಇಂದು ಭಗವಂತ ಒಬ್ಬನೇ ಕೊರೊನಾ ಸೋಂಕಿನಿಂದ ನಮ್ಮನ್ನು ಕಾಪಾಡಬೇಕು. ಇಲ್ಲವಾದಲ್ಲಿ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಬರಬೇಕು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಶ್ರೀರಾಮುಲು, ಇಡೀ ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕೊರೊನಾ ಬಡವ, ಶ್ರೀಮಂತ, ಶಾಸಕರು, ಪೊಲೀಸರು, ವೈದ್ಯರು ಮತ್ತು ರಾಜಕಾರಣಿಗಳು ಎಂದು ಬರುತ್ತಿಲ್ಲ. ಇನ್ನೂ 2 ತಿಂಗಳಲ್ಲಿ ಇನ್ನಷ್ಟು ಸೋಂಕು ಹೆಚ್ಚುವ ಸಾಧ್ಯತೆ ಶೇ.100 ರಷ್ಟಿದೆ. ಸಚಿವರ, ಸರ್ಕಾರದ ನಿರ್ಲಕ್ಷ್ಯ ಅಥವಾ ಶಾಸಕರ ಹೊಂದಾಣಿಕೆ ಇಲ್ಲದೆ ಕೊರೊನಾ ಹೆಚ್ಚಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದ ಆರೋಪಗಳು ಎಂದರು.

- Advertisement -

ಕೊರೊನಾ ನಿಯಂತ್ರಣ ಯಾರ ಕೈಯಲ್ಲಿದೆ ಹೇಳಿ?, ಇಂದು ಭಗವಂತ ಒಬ್ಬನೇ ಕೊರೊನಾ ಸೋಂಕಿನಿಂದ ನಮ್ಮನ್ನು ಕಾಪಾಡಬೇಕು. ಇಲ್ಲವಾದಲ್ಲಿ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಬರಬೇಕು. ಕಾಂಗ್ರೆಸ್ ಪಕ್ಷದ ನಾಯಕರು ಕೆಳಮಟ್ಟದ ರಾಜಕಾರಣ ಬಿಡಬೇಕು. ನಾವೇನಾದರು ತಪ್ಪು ಮಾಡಿದ್ದರೆ ಶಿಕ್ಷೆಗೆ ಸಿದ್ಧವಾಗಿದ್ದೇವೆ. ಸಂದಿಗ್ಧ ಸಮಯದಲ್ಲಿ ಕಾಂಗ್ರೆಸ್ ನಾಯಕರು ಯಾವುದೇ ಮಾತಾಡುವ ವೇಳೆ ಎಲ್ಲವನ್ನೂ ಬಿಗಿಯಿಡಿದು ಮಾತಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಶ್ರೀರಾಮುಲು ವಾರ್ನಿಂಗ್ ನೀಡಿದರು.

- Advertisement -

ಕೋವಿಡ್‍ನಿಂದ ಸಾವಿಗೀಡಾದವರ ಅಂತ್ಯ ಸಂಸ್ಕಾರದ ಬಗ್ಗೆ ರಾಜ್ಯದಲ್ಲಿ ಗೊಂದಲ ಉಂಟಾಗಿದೆ. ಕೆಲವೆಡೆ ಊರ ಮಧ್ಯೆದಲ್ಲಿ ಸ್ಮಶಾನ ಭೂಮಿಗಳಿವೆ. ಹೀಗಾಗಿ ಅಲ್ಲಿ ಶವಸಂಸ್ಕಾರ ಮಾಡುವ ವೇಳೆ ಮನೆಗಳ ಮೇಲೆ ಪಿಪಿಇ ಕಿಟ್ ಹಾರಾಡುತ್ತವೆ ಎಂಬ ದೂರು ಬಂದಿವೆ. ಬೆಂಗಳೂರಲ್ಲಿ ಯಂತ್ರೋಪಕರಣದಿಂದ ಶವಸಂಸ್ಕಾರದ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಈಗಾಗಲೇ ಊರ ಮಧ್ಯೆದ ಸ್ಮಶಾನ ಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡದಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಅಂತ್ಯ ಸಂಸ್ಕಾರಕ್ಕೆ ಸರ್ಕಾರದಿಂದ 2 ಎಕರೆ ಭೂಮಿ ಕಾಯ್ದಿಡುವ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಶ್ರೀರಾಮುಲು ತಿಳಿಸಿದರು.

- Advertisement -