– ಉಡುಪಿಯಲ್ಲಿ 24 ಗಂಟೆ ಆರೆಂಜ್ ಅಲರ್ಟ್
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಕಳೆದೆರಡು ದಿನಗಳಿಂದ ಕರಾವಳಿಯಲ್ಲಿ ಆಗ್ಗಾಗೆ ಬರುತ್ತಿದ್ದ ಮಳೆ ಇಂದು ಬಿಟ್ಟು ಬಿಡದೆ ಸುರಿಯುತ್ತಿದೆ.
ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲೂ ಮಳೆ ಎಡೆಬಿಡದೆ ಸುರಿಯುತ್ತಿದೆ. ಪರಿಣಾಮ ನದಿ, ಹೊಳೆಗಳೆಲ್ಲಾ ಮೈತುಂಬಿ ಹರಿಯುತ್ತಿದೆ. ಮುಂಗಾರು ಆರಂಭವಾಗಿ ತಿಂಗಳುಗಳೇ ಕಳೆದರೂ ಈ ಬಾರಿ ಮಳೆ ಮಾತ್ರ ಬಿರುಸಾಗಿರಲಿಲ್ಲ. ಆದರೆ ಇಂದಿನಿಂದ ಮುಂಗಾರು ಅಬ್ಬರಿಸುತ್ತಿದೆ.
Advertisement
Advertisement
ಮಂಗಳೂರು ನಗರದಲ್ಲೂ ಭಾರೀ ಮಳೆಯಾಗುತ್ತಿದ್ದು, ದ್ವಿ ಚಕ್ರ ವಾಹನ ಸವಾರರು ಮಳೆಗೆ ಹೈರಾಣಾಗಿದ್ದಾರೆ. ಭಾರೀ ಮಳೆಯಿಂದ ರಸ್ತೆ ತುಂಬೆಲ್ಲಾ ನೀರು ತುಂಬಿ ವಾಹನ ಸಂಚಾರಕ್ಕೆ ಪರದಾಡುವಂತಾಯಿತು. ಪಶ್ಚಿಮ ಘಟ್ಟ ಪ್ರದೇಶದಲ್ಲೂ ಭಾರೀ ಮಳೆ ಸುರಿಯುತ್ತಿರುವ ಕಾರಣ, ನೇತ್ರಾವತಿ, ಕುಮಾರಾಧಾರಾ, ಮಂಗಳೂರಿನ ಫಲ್ಗುಣಿ ನದಿಯಲ್ಲೂ ನೀರಿನ ಹರಿವು ಜಾಸ್ತಿಯಾಗಿದೆ. ಇನ್ನೂ ಎರಡು ದಿನ ಭಾರೀ ಗಾಳಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಜನರಿಗೆ ಸೂಚಿಸಿದೆ.
Advertisement
Advertisement
ಇನ್ನೂ ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ ರಾತ್ರಿಯೂ ಜಿಲ್ಲೆಯ ಕಾರ್ಕಳ, ಕುಂದಾಪುರ ತಾಲೂಕಿನಲ್ಲಿ ಭಾರೀ ಮಳೆ ಬಿದ್ದಿದೆ. ಹವಾಮಾನ ಇಲಾಖೆ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುವ ಮುನ್ಸೂಚನೆ ಕೊಟ್ಟಿದೆ. ಮುಂದಿನ 24 ಗಂಟೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಉಡುಪಿ ನಗರದಾದ್ಯಂತ ಭಾರೀ ಮಳೆ ಬಿದ್ದಿದ್ದು, ಮಳೆ ನೀರಿನ ರಭಸಕ್ಕೆ ಕಾಲುವೆಗಳೆಲ್ಲಾ ತುಂಬಿಕೊಂಡಿದೆ. ರಸ್ತೆಯಲ್ಲೆಲ್ಲಾ ಮಳೆ ನೀರು ತುಂಬಿ ಹರಿಯುತ್ತಿದೆ. ಗ್ರಾಮೀಣ ಭಾಗದಲ್ಲೂ ವಿಪರೀತ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿದೆ. ನಾಡದೋಣಿ ಮೀನುಗಾರರಿಗೆ ಎಚ್ಚರಿಕೆ ನೀಡಿರುವ ಜಿಲ್ಲಾಡಳಿತ, ನದಿ ಪಾತ್ರದ ಜನ ಮುಂಜಾಗ್ರತಾ ಕ್ರಮ ಕೈಗೊಂಡಿರಬೇಕು ಎಂದು ಸೂಚಿಸಿದೆ.