KarnatakaLatestMain Post

ಬಿಎಸ್‍ವೈ, ಮೋದಿ ಅವರೇನು ಎಳೆ ಕಡಸುಗಳಾ?- ಸಿದ್ದರಾಮಯ್ಯ

Advertisements

ಬೆಂಗಳೂರು: ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಮುದಿ ಎತ್ತು ಎಂದು ಹೇಳಿದ್ದ ಬಿಜೆಪಿಯ ನಾಯಕರ ಹೇಳಿಕೆಗೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಟಿ.ಬಿ.ಜಯಚಂದ್ರ ಅವರಿಗೆ ವಯಸ್ಸಾಗಿದೆ ಅಂದ್ರೆ ಬಿ.ಎಸ್ ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಅವರೇನು ಎಳೆ ಕಡಸುಗಳಾ ಎಂದು ಪ್ರಶ್ನೆ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ನಮ್ಮ ಪಕ್ಷದ ಅಭ್ಯರ್ಥಿ ಜಯಚಂದ್ರ ಅವರನ್ನು ಬಿಜೆಪಿ ನಾಯಕರು ಮುದಿ ಎತ್ತು ಎಂದು ಹೀಗಳೆದಿದ್ದಾರೆ. ಹಾಗಾದರೆ ಬಿ.ಎಸ್ ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಅವರೇನು ಎಳೆ ಕಡಸುಗಳಾ?. ಚುನಾವಣೆಯನ್ನು ಸಾಧನೆ ಮತ್ತು ಸಿದ್ಧಾಂತದ ಮೂಲಕ ಎದುರಿಸಲಾಗದವರು ಮಾತ್ರ ಸೋಲಿನ ಭೀತಿಯಿಂದ ಈ ರೀತಿ ಚಾರಿತ್ರ್ಯಹರಣ, ಗೂಂಡಾಗಿರಿ, ಹಣ ಹಂಚುವುದು ಮೊದಲಾದ ಅಡ್ಡದಾರಿ ಹಿಡಿಯುವುದು ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದಾರೆ.

ಮಂಗಳವಾರ ಯಶವಂತಪುರ ಸಮೀಪ ಚುನಾವಣಾ ಪ್ರಚಾರ ಭಾಷಣ ಮಾಡುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಭಾಷಣಕ್ಕೆ ಅಡ್ಡಿಪಡಿಸಿದ್ದರಲ್ಲದೆ, ನಾನು ವಾಪಾಸು ತೆರಳುವಾಗ ವಾಹನ ಅಡ್ಡಗಟ್ಟಿ ಬೆದರಿಸುವ ಪ್ರಯತ್ನ ಮಾಡಿದ್ದರು. ಇದು ಬಿಜೆಪಿಯವರ ರಾಜಕಾರಣದ ಇನ್ನೊಂದು ಮುಖವನ್ನು ಅನಾವರಣಗೊಳಿಸಿದೆ ಎಂದು ಆರೋಪಿಸಿದ್ದಾರೆ.

ಆರ್.ಆರ್ ನಗರದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಹೇಳಿದ್ದ ಮುನಿರತ್ನ ಅವರೆ ಅಲ್ಲಿನ ಕಾನೂನು ಬಾಹಿರ ಚಟುವಟಿಕೆಗಳಿಗೆ, ಗೂಂಡಾಗಿರಿಗೆ ಮೂಲ ಕಾರಣ. ಸೋಲಿನ ಭಯದಿಂದ ಜಿ.ಕೆ ವೆಂಕಟೇಶ್ ಅಂಥವರನ್ನು ಮುಂದೆ ಬಿಟ್ಟು ಮುನಿರತ್ನ ಅವರೆ ಗಲಭೆ ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯನವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಣ್ಣೀರಿಟ್ಟ ಬಿಜೆಪಿ ಅಭ್ಯರ್ಥಿ ಮುನಿರತ್ನ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದು ಹೈಕಮಾಂಡ್ ಹಾಗೂ ಶಾಸಕರು ನಿರ್ಧರಿಸುತ್ತಾರೆ. ಕೆಲವರು ಅಭಿಮಾನದಿಂದ ಇವ್ರೆ ನಮ್ಮ ಮುಂದಿನ ಮುಖ್ಯಮಂತ್ರಿ ಅಂತ ಹೇಳ್ತಾರೆ, ಅವರಿಗೆಲ್ಲ ಮಾತಾಡ್ಬೇಡಿ ಅಂತ ಹೇಳೋಕಾಗುತ್ತಾ ಎಂದು ತಮ್ಮ ಆಪ್ತರ ಹೇಳಿಕೆಯನ್ನ ಸಿದ್ದರಾಮಯ್ಯನವರು ಸಮರ್ಥಿಸಿಕೊಂಡರು.

ಬಿ.ಜೆ.ಪುಟ್ಟಸ್ವಾಮಿ ಹೇಳಿದ್ದೇನು?: ಯುವ ಎತ್ತಿಗೆ ಶಿರಾ ಜನತೆ ಮತ ನೀಡಿದ್ರೆ ಪ್ರಯೋಜನೆ. ಏಳು ಬಾರಿ ಗೆದ್ದಿರುವ ಟಿ.ಬಿ.ಜಯಚಂದ್ರ ಮುದಿ ಎತ್ತು. ನಮ್ಮ ಅಭ್ಯರ್ಥಿಯಾಗಿರುವ ರಾಜೇಶ್ ಗೌಡ ಯುವಕರು. ಹಾಗಾಗಿ ಯುವ ಎತ್ತಿಗೆ ಮತ ನೀಡಿದ್ರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರ ವೈಯಕ್ತಿಕ ದ್ವೇಷದಿಂದಾಗಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನವಾಯ್ತು. ಸರ್ಕಾರ ಬಿದ್ದು ಒಂದು ವರ್ಷ ಕಳೆದರೂ ಇಬ್ಬರ ಅಸಮಾಧಾನ ಇನ್ನೂ ಕಡಿಮೆಯಾಗಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಬಳಿ ಅಭಿವೃದ್ಧಿ ಮಂತ್ರ ಇಲ್ಲ. ಎರಡೂ ಪಕ್ಷಗಳು ಅಭ್ಯರ್ಥಿಗಳನ್ನು ನಿಲ್ಲಿಸಿದ್ಯಾಕೆ ಅಂತ ಗೊತ್ತಾಗುತ್ತಿಲ್ಲ ಎಂದು ಬಿ.ಜೆ.ಪುಟ್ಟಸ್ವಾಮಿ ಹೇಳಿದ್ದರು.

Leave a Reply

Your email address will not be published.

Back to top button