– ಕೊರೊನಾ ಮಧ್ಯೆ ರಾಜ್ಯ ಬಿಜೆಪಿಯಲ್ಲಿ ಬಂಡಾಯದ ವೈರಸ್
– ಗುರುವಾರ ರಾತ್ರಿ ಶಾಸಕರ ಸಭೆ
ಬೆಂಗಳೂರು: ಕೊರೊನಾ ವೈರಸ್ ಹೊಡೆತಕ್ಕೆ ಸಿಲುಕಿ ಇಡೀ ರಾಜ್ಯದ ಜನ ಒದ್ದಾಡ್ತಿದ್ದಾರೆ. ಇಂತಹ ಸಂಕಷ್ಟದ ಹೊತ್ತಲ್ಲಿ ಜನತೆಯ ನೆರವಿಗೆ ನಿಲ್ಲಬೇಕಾದ ನಮ್ಮನ್ನಾಳುವ ಜನಪ್ರತಿಧಿಗಳು ಬೇರೆಯದ್ದೇ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. 77ರ ಹರೆಯದ ಸಿಎಂ ಯಡಿಯೂರಪ್ಪ ರಾಜ್ಯವನ್ನು ಕೊರೊನಾದಿಂದ ಕಾಪಾಡುವ ಕೆಲಸವನ್ನು ದಣಿವರಿಯದೇ ಮಾಡುತ್ತಿದ್ದರೆ ಬಿಜೆಪಿ ಬಣವೊಂದು ಬಂಡಾಯದ ಬಾವುಟ ಹಾರಿಸಿದೆ.
ಸಿಎಂ ಯಡಿಯೂರಪ್ಪರನ್ನು ಮಾಜಿ ಮಾಡಲು ಒಂದು ಕಾಲದಲ್ಲಿ ಅವರ ಆಪ್ತರಾಗಿದ್ದವರೇ ಮಸಲತ್ತು ಮಾಡುತ್ತಿದ್ದಾರೆ. ಕಳೆದ 15 ದಿನಗಳಿಂದ ತೆರೆಮರೆಯಲ್ಲೇ ನಡೆಯುತ್ತಿದ್ದ ಬಂಡಾಯ ಚಟುವಟಿಕೆ ಗುರುವಾರ ಬಹಿರಂಗವಾಗಿದೆ. ಮಂತ್ರಿ ಸ್ಥಾನ ಸಿಗದೇ ಕುದಿಯುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ ನೇತೃತ್ವದಲ್ಲಿ ಸಭೆಗಳ ಮೇಲೆ ಸಭೆಗಳು ನಡೆದಿವೆ.
Advertisement
Advertisement
ಉತ್ತರ ಕರ್ನಾಟಕದ ಅತೃಪ್ತ ಶಾಸಕರನ್ನು ಗುಡ್ಡೆ ಹಾಕಿ, ಹೈಕಮಾಂಡ್ಗೆ ದೂರು ಸಲ್ಲಿಸಿ ಯಡಿಯೂರಪ್ಪರನ್ನು ಸಿಎಂ ಪಟ್ಟದಿಂದ ಕೆಳಗಿಳಿಸಲು ಸ್ಕೆಚ್ ಹಾಕಿದ್ದಾರೆ ಎನ್ನಲಾಗುತ್ತಿದೆ. ಭಿನ್ನಮತೀಯ ಚಟುವಟಿಕೆಗಳು ಸಿಎಂ ಗಮನಕ್ಕೂ ಬಂದಿದ್ದು, ಬಂಡಾಯ ಶಮನ ಕಸರತ್ತನ್ನು ಒಂದು ವಾರದಿಂದ ಸೈಲೆಂಟಾಗಿ ಮಾಡುತ್ತಾ ಬಂದಿದ್ದಾರೆ.
Advertisement
ಒಬ್ಬೊಬ್ಬರನ್ನೇ ಕರೆಯಿಸಿ ಸಿಎಂ ಸಮಾಧಾನ ಮಾಡುವ ಪ್ರಯತ್ನ ಮಾಡ್ತಿದ್ದಾರೆ. ಆದ್ರೆ ಇದು ಅಷ್ಟು ಸುಲಭವಾಗಿ ಫಲ ಕೊಡುವಂತೆ ಕಾಣುತ್ತಿಲ್ಲ. ಈ ಮಧ್ಯೆಯೂ ಬಂಡಾಯದ ಕಹಳೆ ಮೊಳಗಿಸಿರುವ ಅತೃಪ್ತರು ನಿನ್ನೆ ಯಲಹಂಕ ಮತ್ತು ಯಶವಂತಪುರದ ಅಪಾರ್ಟ್ಮೆಂಟ್ಗಳಲ್ಲಿ ಎರಡು ಪ್ರತ್ಯೇಕ ಸಭೆ ನಡೆಸಿದ್ದಾರೆ. ಹೆಚ್ಡಿಕೆ ಸರ್ಕಾರ ಪತನಕ್ಕೆ ಕಾರಣವಾದ ಗುಂಪಿನಲ್ಲಿದ್ದ ಮಹೇಶ್ ಕುಮಟಳ್ಳಿ ಕೂಡ ಈ ಸಭೆಯಲ್ಲಿದ್ದಿದ್ದು ಅಚ್ಚರಿಗೆ ಕಾರಣವಾಗಿದೆ.
Advertisement
‘ರೆಬೆಲ್’ ಮೀಟಿಂಗ್ನಲ್ಲಿ ಇದ್ದವರು ಯಾರು?
* ಉಮೇಶ್ ಕತ್ತಿ, ಹುಕ್ಕೇರಿ ಶಾಸಕ
* ಬಸನಗೌಡ ಪಾಟೀಲ್ ಯತ್ನಾಳ್, ವಿಜಯಪುರ ಶಾಸಕ
* ಮುರುಗೇಶ್ ನಿರಾಣಿ, ಬೀಳಗಿ ಶಾಸಕ
* ಬಾಲಚಂದ್ರ ಜಾರಕಿಹೊಳಿ, ಅರಭಾವಿ ಶಾಸಕ
* ಶಿವರಾಜ್ ಪಾಟೀಲ್, ರಾಯಚೂರು ನಗರ
* ರಾಜುಗೌಡ, ಸುರಪುರ ಶಾಸಕ
* ದತ್ತಾತ್ರೆಯ ಪಾಟೀಲ್ ರೇವೂರ, ಕಲಬುರಗಿ ದಕ್ಷಿಣ ಶಾಸಕ
* ರಾಜಕುಮಾರ್ ಪಾಟೀಲ್, ಸೇಡಂ ಶಾಸಕ
* ಬಸವರಾಜ ಮತ್ತಿಮಾಡ, ಕಲಬುರಗಿ ಗ್ರಾಮೀಣ ಶಾಸಕ
* ಪರಣ್ಣ ಮುನವಳ್ಳಿ, ಗಂಗಾವತಿ ಶಾಸಕ
* ಹಾಲಪ್ಪ ಆಚಾರ್, ಯಲಬುರ್ಗಾ ಶಾಸಕ
* ಸೋಮಲಿಂಗಪ್ಪ, ಸಿರಗುಪ್ಪ ಶಾಸಕ
* ಗೂಳಿಹಟ್ಟಿ ಶೇಖರ್, ಹೊಸದುರ್ಗ ಶಾಸಕ
* ಸಿದ್ದು ಸವದಿ, ತೇರದಾಳ ಶಾಸಕ
* ಮಹಾದೇವಪ್ಪ ಯಾದವಾಡ, ರಾಮದುರ್ಗ ಶಾಸಕ
* ಸುಭಾಷ್ ಗುತ್ತೇದಾರ್ – ಅಳಂದ ಶಾಸಕ
* ಮಹೇಶ್ ಕುಟಮಳ್ಳಿ – ಅಥಣಿ ಶಾಸಕ
* ಸೋಮನಗೌಡ ಪಾಟೀಲ್ ಸಾಸನೂರ, ದೇವರಹಿಪ್ಪರಗಿ ಶಾಸಕ
ಬಂಡಾಯ ಸ್ಫೋಟಕ್ಕೆ ಕಾರಣ ಏನು?
– ಪರಿಷತ್ ಚುನಾವಣೆಯಲ್ಲಿ ತಾವು ಹೇಳಿದವರೊಬ್ಬರಿಗೆ ಟಿಕೆಟ್ ಕೊಡಿಸುವುದು
– ಪ್ರಭಾಕರ್ ಕೋರೆ ಬದಲು ರಮೇಶ್ ಕತ್ತಿಗೆ ರಾಜ್ಯಸಭೆ ಟಿಕೆಟ್ ಕೊಡಿಸುವುದು
– ಉಮೇಶ್ ಕತ್ತಿ, ನಿರಾಣಿ ಸೇರಿ ಹಲವರಿಗೆ ಸಂಪುಟದಲ್ಲಿ ಸ್ಥಾನಮಾನ ಕೊಡಿಸುವುದು
– ತಮ್ಮ ಬೆಂಬಲಿಗ ಶಾಸಕರ ಕ್ಷೇತ್ರಗಳಿಗೆ ಕೋಟಿ ಕೋಟಿ ಅನುದಾನ ಕೊಡಿಸುವುದು
– ಮೇಲಿನ ನಾಲ್ಕು ಕೆಲಸ ಆಗದಿದ್ದರೆ, ಶಾಸಕರ ಜೊತೆ ಮಾತಾಡ್ತಿಲ್ಲ ಎಂದು `ಹೈ’ಗೆ ದೂರು ನೀಡುವುದು.