ಬೆಂಗಳೂರು: ಬಿಎಂಟಿಸಿ ಸಿಬ್ಬಂದಿಗೆ ಕೊರೊನಾ ಆತಂಕ ಎದುರಾಗಿದ್ದು, ಭಯ ಪಟ್ಟುಕೊಂಡೇ ಬಸ್ ಹತ್ತುವ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಬಿಎಂಟಿಸಿಯ 9 ಜನ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇದು ಬಿಎಂಟಿಸಿ ಸಿಬ್ಬಂದಿ ಹಾಗೂ ಪ್ರಯಾಣಿಕರಲ್ಲಿ ಆತಂಕವನ್ನುಂಟು ಮಾಡಿದೆ.
ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಬಿಎಂಟಿಸಿ ಆರಂಭದಲ್ಲಿ ಪಾಸ್ ಖರೀದಿಸಿ ಪ್ರಯಾಣಿಸಲು ಮಾತ್ರ ಅನುಮತಿ ನೀಡಿತ್ತು. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ ಫ್ಲಾಟ್ ದರ ನಿಗದಿಪಡಿಸಿ, ಟಿಕೆಟ್ ವಿತರಿಸಲು ಮುಂದಾಗಿದೆ. ಜೊತೆಗೆ ನಗದು ವಹಿವಾಟು ಕಡಿಮೆ ಮಾಡಲು ಡಿಜಿಟಲ್ ಟಿಕೆಟಿಂಗ್(ಕ್ಯೂಆರ್ ಕೋಡ್) ವ್ಯವಸ್ಥೆಯನ್ನು ಸಹ ಬಿಎಂಟಿಸಿ ಜಾರಿಗೆ ತಂದಿದೆ. ಇದನ್ನು ಪ್ರಯಾಣಿಕರು ಬಳಸುತ್ತಿಲ್ಲ. ನಗದು ವ್ಯವಹಾರದಿಂದಾಗಿ ಸಿಬ್ಬಂದಿಗೆ ಸೋಂಕು ಹರಡುವ ಪ್ರಮಾಣ ಹೆಚ್ಚಾಗುತ್ತಿದೆ ಎನ್ನಲಾಗಿದೆ.
Advertisement
Advertisement
ಡಿಜಿಟಲ್ ಟಿಕೆಟಿಂಗ್ ವ್ಯವಸ್ಥೆಯಲ್ಲಿ ಪ್ರಯಾಣಿಕರು ಮೊಬೈಲ್ನಲ್ಲಿಯೇ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ, ಫೋನ್ ಪೇ, ಗೂಗಲ್ ಪೇ ಮೂಲಕ ನಿಗದಿತ ಟಿಕೆಟ್ ದರ ಪಾವತಿಸಿ ಪ್ರಯಾಣಿಸಬಹುದು. ಆದರೆ ಈ ಡಿಜಿಟಲ್ ವ್ಯವಸ್ಥೆಯನ್ನು ಬಹುತೇಕ ಪ್ರಯಾಣಿಕರು ಬಳಸುತ್ತಿಲ್ಲ, ದುಡ್ಡು ಕೊಟ್ಟು ಟಿಕೆಟ್ ಪಡೆಯುತ್ತಿದ್ದಾರೆ. ಹೀಗಾಗಿ ಒಬ್ಬರ ಸ್ಪರ್ಶದಿಂದ ಮತ್ತೊಬ್ಬರಿಗೆ ಕೊರೊನಾ ಹರಡುವ ಸಾಧ್ಯತೆ ಹೆಚ್ಚಿದೆ. ಬಿಎಂಟಿಸಿ ಪ್ರಯಾಣಿಕರು, ಸಿಬ್ಬಂದಿ ಎಚ್ಚರಿಕೆಯಿಂದ ಇರಬೇಕಾಗಿದೆ. ಅಲ್ಲದೆ ಡಿಜಿಟಲ್ ವಹಿವಾಟಿಗೆ ಒತ್ತು ನೀಡುವುದು ಉತ್ತಮ.