ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಶಮಶೇರ ಗಂಜ್ ವ್ಯಾಪ್ತಿಯಲ್ಲಿ ಟಿಎಂಸಿ (ತೃಣಮೂಲ ಕಾಂಗ್ರೆಸ್) ಕಾರ್ಯಕರ್ತನೋರ್ವ ಬಾಂಬ್ ತಯಾರಿಕೆ ವೇಳೆ ಸಾವನ್ನಪ್ಪಿದ್ದಾನೆ. ಕಾರ್ಯಕರ್ತನ ಮನೆಯ ಮೇಲೆ ಬಾಂಬ್ ತಯಾರಿಸುವ ಸ್ಫೋಟಕ ವಸ್ತು ಸ್ಫೋಟಗೊಂಡಿದೆ.
40 ವರ್ಷದ ಕಬೀರ್ ಮೃತ ಟಿಎಂಸಿ ಕಾರ್ಯಕರ್ತ. ಈ ಘಟನೆಯಲ್ಲಿ ಕಾರ್ಯಕರ್ತನ 10 ವರ್ಷದ ಮಗ ಸಹ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಘಟನೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಟಿಎಂಸಿ ಸ್ಪಷ್ಟನೆ ನೀಡಿದೆ.
Advertisement
Advertisement
ಪ್ರಾಥಮಿಕ ತನಿಖೆಯಲ್ಲಿ ಮೃತ ಕಬೀರ್ ತನ್ನ ಮನೆಯ ಮೇಲೆ ದೇಶಿ ಬಾಂಬ್ ಗಳ ತಯಾರಿಕೆಯಲ್ಲಿ ತೊಡಗಿಕೊಂಡಿರೋದು ಖಚಿತವಾಗಿದೆ. ಈ ವೇಳೆ ಒಂದು ಬಾಂಬ್ ಕೆಳಗೆ ಬಿದ್ದು ಸ್ಫೋಟಗೊಂಡಿದ್ದರಿಂದ ಕಬೀರ್ ಗಂಭೀರವಾಗಿ ಗಾಯಗೊಂಡಿದ್ದನು. ಈ ವೇಳೆ ಅಲ್ಲಿಯೇ ಇದ್ದ ಆತನ ಮಗ ಸಹ ಗಾಯಗೊಂಡಿದ್ದಾನೆ. ಪ್ರಕರಣದ ತನಿಖೆ ಆರಂಭಿಸಲಾಗಿದ್ದು, ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಪ್ರಸನ್ಜೀತ್ ಬ್ಯಾನರ್ಜಿ ತಿಳಿಸಿದ್ದಾರೆ.
Advertisement
Advertisement
ಮೃತ ಕಬೀರ್ ಸ್ಥಳೀಯ ಬೀಡಿ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದನು. ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಸ್ಫೋಟದ ಸದ್ದು ಕೇಳಿಸಿದಾಗ ನಾವೆಲ್ಲ ಅವನ ಮನೆಗೆ ಹೋಗಿ ನೋಡಿದಾಗ ಕಬೀರ್ ರಕ್ತದ ಮಡುವಿನಲ್ಲಿ ಬಿದ್ದಿದ್ದನು ಎಂದು ಸ್ಥಳೀಯರು ಹೇಳಿದ್ದಾರೆ. ರಾತ್ರಿ ಊಟದ ಬಳಿಕ ಕಬೀರ್ ಮನೆಯ ಮೇಲೆ ಹೋದನು. ಆತ ಮೇಲೆ ಹೋದ ಕೆಲ ಸಮಯದಲ್ಲಿ ಸ್ಫೋಟವಾಯ್ತು ಎಂದು ಕಬೀರ್ ತಾಯಿ ಹೇಳಿದ್ದಾರೆ.
ಕಬೀರ್ ಈ ಹಿಂದೆ ಹಲವು ಬಾರಿ ಬಂಧನಕ್ಕೊಳಗಾಗಿದ್ದು, ಅಪರಾಧ ಹಿನ್ನೆಲೆಯುಳ್ಳಿ ವ್ಯಕ್ತಿ. ಸ್ಫೋಟದ ಬಳಿಕ ಕಬೀರ್ ಕುಟುಂಬಸ್ಥರು ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದಾರೆ. ಇನ್ನು ಮೃತ ಕಬೀರ್ ತಾಯಿ, ಮಗನ ಮೇಲಿನ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ನಮ್ಮ ಮನೆಯ ಮೇಲೆ ಯಾರೋ ಬಾಂಬ್ ಎಸೆದಿದ್ದಾರೆ ಎಂದು ಕಬೀರ್ ತಾಯಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ ವಕ್ತಾರ ಗೌತಮ್ ಘೋಷ್, ನಮ್ಮ ಪಕ್ಷಕ್ಕೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ. ನಿಷ್ಪಕ್ಷವಾಗಿ ತನಿಖೆ ನಡೆಸುವಂತೆ ಪೊಲೀಸರ ಬಳಿ ಮನವಿ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ. ಈ ಘಟನೆಗೂ ಮುನ್ನ ಜುಲೈ 3ರಂದು ಶಮಶೇರ್ ಗಂಜ್ ಬಳಿಯಲ್ಲಿ ಬಾಂಬ್ ತಯಾರಿಕೆ ವೇಳೆ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿದ್ದರು.