– ಪಬ್ಲಿಕ್ ಹೀರೋ ಮುರಲಿ ಮಾನವೀಯತೆ
ಉಡುಪಿ: ನಿವೃತ್ತಿ ಹಣ ಬಂದ್ರೆ ಒಂದು ಕಾರು ತಗೋಬೇಕು. ಬ್ಯಾಂಕಲ್ಲಿ ಫಿಕ್ಸೆಡ್ ಡೆಪೋಸಿಟ್ ಇಟ್ಟು ಬಡ್ಡಿಯಲ್ಲೇ ಜೀವನ ಮಾಡಬೇಕು. ಸುಂದರ ಮನೆ ಕಟ್ಟಿ ಆರಾಮಾಗಿ ಇರಬೇಕು ಅಂತ ಸರ್ಕಾರಿ ಉದ್ಯೋಗಿಗಳು ಲೆಕ್ಕಾ ಹಾಕ್ತಾರೆ. ಆದ್ರೆ ಉಡುಪಿಯ ನಮ್ಮ ಪಬ್ಲಿಕ್ ಹೀರೋ ಎಲ್ಲರಂತಲ್ಲ. ಇವರು ಮಾಡಿರೋ ಕೆಲಸ ದೇಶಕ್ಕೆ ಮಾದರಿ.
Advertisement
ಶಿಕ್ಷಕ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಉಡುಪಿಯ ನಿಟ್ಟೂರು ಹೈಸ್ಕೂಲಿನ ಹೆಡ್ ಮಾಸ್ಟರ್ ಮುರಲಿ ಕಡೆಕಾರು ಉದಾಹರಣೆ. ಮುರಲಿ ಸರ್ ನವೆಂಬರ್ 1 ಕ್ಕೆ ನಿವೃತ್ತಿ ಆಗಿದ್ದು ಸುದೀರ್ಘ 37 ವರ್ಷ ಶಿಕ್ಷಣ ಸೇವೆ ಮಾಡಿ ರಿಟೈರ್ಡ್ ಆಗಿದ್ದಾರೆ. ಸರ್ಕಾರದಿಂದ ಬಂದ ಮೊತ್ತದಲ್ಲಿ ತನ್ನದೇ ಶಾಲೆಯ ಕೊರಗ ಸಮುದಾಯದ ಬಡ ವಿದ್ಯಾರ್ಥಿನಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ. ಮಳೆಗಾಲದಲ್ಲಿ ಸೋರುತ್ತಿದ್ದ, ಬೇಸಿಗೆಯಲ್ಲಿ ಸುಡುತ್ತಿದ್ದ ಮನೆಗೆ ಮುಕ್ತಿ ಸಿಕ್ಕಿದ್ದು, ಸುಂದರ ಸೂರು ನಯನಾ ಕುಟುಂಬಕ್ಕೆ ಸಿಕ್ಕಿದೆ.
Advertisement
Advertisement
ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿದೆ ತಮ್ಮ ಶಾಲೆಯಲ್ಲಿರುವ 170 ವಿದ್ಯಾರ್ಥಿಗಳ ಹಿನ್ನೆಲೆಯನ್ನು ತಿಳಿದುಕೊಳ್ಳುತ್ತಾರೆ. ಕುಟುಂಬದ ಆರ್ಥಿಕ ಸ್ಥಿತಿ ಮನೆಯ ಸಮಸ್ಯೆಗಳನ್ನು ಅರಿತು ಅದಕ್ಕೆ ಪರಿಹಾರ ಕೊಡಿಸುತ್ತಾರೆ. ಗುಡಿಸಲು ಮಾದರಿಯ ಮನೆಯಲ್ಲಿದ್ದ ನಯನಾಳಿಗೆ ತನ್ನ ಸ್ವಂತ ಹಣದಲ್ಲಿ ಮನೆ ಕಟ್ಟಿ ಕೊಡಬೇಕು ಎಂಬ ಅಭಿಲಾಷೆ ಕೈಗೂಡಿದೆ ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ಸ್ವಾಮೀಜಿ ನಯನಾಳ ಮನೆಯಲ್ಲಿ ದೀಪ ಬೆಳಗಿದರು.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿದ್ಯಾರ್ಥಿನಿ ನಯನ, ನಮ್ಮ ಮನೆ ಮಳೆಗಾಲದಲ್ಲಿ ಐದಾರು ಕಡೆ ಸೋರುತ್ತಿತ್ತು. ಮನೆಯಲ್ಲಿ ಏಳು ಜನ ಇರುವುದು ಬಹಳ ಕಷ್ಟವಾಗಿತ್ತು. ಮುರಲಿ ಸರ್ ನಮ್ಮ ಕಷ್ಟ ಅರಿತು ಮನೆ ಕಟ್ಟಿಕೊಟ್ಟಿದ್ದಾರೆ. ನಾನು ಚೆನ್ನಾಗಿ ಕಲಿತು ಶಾಲೆಗೂ ಮುರಲಿ ಸರ್ ಗೂ ಹೆಸರು ತಂದು ಕೊಡುತ್ತೇನೆ ಎಂದಾಗ ಅಳು ಮಾತನ್ನು ತಡೆಯಿತು.
ಮುರಲಿ ಕಡೆಕಾರು ನಮ್ಮ ಪಬ್ಲಿಕ್ ಹೀರೋ ಎಂಬೂದು ಮತ್ತೊಂದು ಹೆಮ್ಮೆ. ಮೂವತ್ತೇಳು ವರ್ಷದಲ್ಲಿ ಮುರಲಿ ಹಲವಾರು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ರಾಜ್ಯದಲ್ಲೇ ಶಾಲೆಯಲ್ಲಿ ಮೊದಲು ಬಿಸಿಯೂಟ, ಉಚಿತ ಗ್ಯಾಸ್, ವಿದ್ಯುತ್, ಸ್ಕಾಲರ್ಶಿಪ್, ಉಳಿತಾಯ ಖಾತೆಮನೆ, ವಿದ್ಯೆ, ಉದ್ಯೋಗ ಹೀಗೆ ಸೇವೆಯೆಂಬ ಯಜ್ಞವನ್ನೇ ಕೈಗೊಂಡಿದ್ದರು. ಶಿಕ್ಷಕನ ಕೆಲಸಕ್ಕೆ ಚೌಕಟ್ಟು ಪರಿಧಿ, ಮಿತಿಯೇ ಇಲ್ಲ ಎಂಬೂದು ಮುರಲಿ ಪಾಲಿಸಿಕೊಂಡು ಬಂದಿರುವ ನಿಯಮ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮುರಲಿ, ನನ್ನದು ನೆಮ್ಮದಿಯ ನಿವೃತ್ತಿ. ಅನುದಾನಿತ ಶಾಲೆಯ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ ಎಂಬುವುದು ನನಗೆ ಹೆಮ್ಮೆ. ಬಡಮಕ್ಕಳ ಕಷ್ಟ ಏನು ಎಂದು ಅರಿಯಲು, ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಸಾಧ್ಯವಾಗಿದೆ. ಬಡ ಮಕ್ಕಳ ಕಣ್ಣಲ್ಲಿ ಪ್ರೀತಿಯ ಮಿಂಚು ಕಾಣಲು ನನಗೆ ಸಾಧ್ಯವಾಗಿದೆ. ಶಿಕ್ಷಕನಿಗೆ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡುವ ಅವಕಾಶ ಇದೆ. ಮಕ್ಕಳ ಪೋಷಕರ ಊರವರ ಪ್ರೀತಿ ಗಳಿಸುವ ಅವಕಾಶ ಒಂದಿದ್ದರೆ ಅದು ಶಿಕ್ಷಕರಿಗೆ ಮಾತ್ರ ಎಂದರು.
ಈ ಮೂಲಕ ವೃತ್ತಿ ಜೀವನವನ್ನು ಸಾರ್ಥಕ ಕಾರ್ಯದ ಮೂಲಕ ಮುರಲಿ ಮುಗಿಸಿದ್ದಾರೆ. ರಿಟೈರ್ಡ್ ಮೆಂಟ್ ಆದ ಮುರಲಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಭಿನಂದಿಸಿದ್ದಾರೆ. ತನ್ನ ಕರ್ತವ್ಯದ ಜೊತೆ ಏನೆಲ್ಲಾ ಮಾಡುವ ಅವಕಾಶ ಇದೆ ಎಂಬೂದು ರಾಜ್ಯದ ಎಲ್ಲಾ ಶಿಕ್ಷಕರಿಗೆ ಮುರಲಿ ಮಾದರಿ.