ಪೊಲೀಸ್ ಜೀಪ್ ನೋಡಿ ಓಡ್ತಿದ್ದ ಯುವಕ ಸಾವು

ಚಾಮರಾಜನಗರ: ಪೊಲೀಸರಿಗೆ ಹೆದರಿ ಓಡುತ್ತಿದ್ದ ಯುವಕ ಪ್ರಜ್ಞೆ ತಪ್ಪಿ ಬಿದ್ದು ಸಾವಿಗೀಡಾಗಿರುವ ಘಟನೆ ಚಾಮರಾಜನಗರ ತಾಲೂಕು ಯಾಲಕ್ಕೂರು ಗ್ರಾಮದಲ್ಲಿ ನಡೆದಿದೆ.

ಶಂಕರ್ (22) ಮೃತ ಯುವಕ. ಕೋವಿಡ್-19 ಹಿನ್ನೆಲೆಯಲ್ಲಿ ಗುಂಪುಗೂಡದಂತೆ ನಿಷೇದಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಗಸ್ತು ತಿರುಗಲು ಕುದೇರು ಠಾಣೆ ಪೊಲೀಸರು ಹೋಗಿದ್ದರು. ಈ ವೇಳೆ ಯಾಲಕ್ಕೂರು ಗ್ರಾಮದ ಪಡಸಾಲೆಯೊಂದರಲ್ಲಿ ಯುವಕರ ಗುಂಪು ಕುಳಿತಿದ್ದರು.

- Advertisement -

ಆಗ ಪೊಲೀಸ್ ಜೀಪ್ ನೋಡಿದ ತಕ್ಷಣ ದಿಕ್ಕಾಪಾಲಾಗಿ ಯುವಕರು ಓಡಿದ್ದಾರೆ. ಓಡುತ್ತಾ ಜಮೀನೊಂದರಲ್ಲಿ ಎಡವಿ ಬಿದ್ದು ಶಂಕರ್ ಪ್ರಜ್ಞೆ ಕಳೆದುಕೊಂಡಿದ್ದ. ಚಿಕಿತ್ಸೆಗೆಂದು ಸಂತೇಮರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗ್ರಾಮಸ್ಥರು ಕರೆದುಕೊಂಡು ಹೋಗಿ ದಾಖಲಿಸಿದ್ದರು. ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸಲಹೆ ನೀಡಿದ್ದರು.

- Advertisement -

ವೈದ್ಯರ ಸಲಹೆಯಂತೆ ಶಂಕರನನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ಜಿಲ್ಲಾಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಬಳಿಕ ಅಂಬುಲೆನ್ಸ್ ಮೂಲಕ ಯುವಕನ ಶವವನ್ನು ಗ್ರಾಮಕ್ಕೆ ತರಲಾಗಿದೆ. ಆದರೆ ಪೊಲೀಸರಿಂದ ಯುವಕ ಮೃತಪಟ್ಟಿದ್ದಾನೆ ಎಂದು ಕುದೇರು ಠಾಣಾ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -