– ಪಡುಕೆರೆ ಕಡಲಲ್ಲಿ ಈಜಿ ರಾಷ್ಟ್ರದಾಖಲೆ
ಉಡುಪಿ: ಜಿಲ್ಲೆ ಪಡುಕೆರೆ ಕಡಲ ತೀರ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಕ್ಷಿಯಾಗಿದೆ. ಗಂಗಾಧರ ಜಿ ಕಡೆಕಾರು ಹೆಸರು ದಾಖಲೆ ಪುಸ್ತಕದಲ್ಲಿ ಆಚ್ಚಾಗಿದೆ. 65 ವರ್ಷದ ಗಂಗಾಧರ್ ಮಾಡಿರುವ ಸಾಧನೆ ಅಸಾಧಾರಣವಾದದ್ದು.
ಪಡುಕೆರೆಯಲ್ಲಿ ಗಂಗಾಧರ ಜಿ. ಕಡೆಕಾರ್ ಭೋರ್ಗರೆವ ಅರಬ್ಬಿ ಸಮುದ್ರಕ್ಕೆ ಪದ್ಮಾಸನ ಹಾಕಿ ಎರಡು ಕಾಲುಗಳನ್ನು ಸರಪಳಿಯಲ್ಲಿ ಬಿಗಿದು ಬೀಗ ಜಡಿದುಕೊಂಡು ಧುಮುಕಿ ದಾಖಲೆ ನಿರ್ಮಿಸಿದ್ದಾರೆ. ಒಂದು ಗಂಟೆ 13 ನಿಮಿಷ 7 ಸೆಕೆಂಡುಗಳ ಕಾಲ ನಿರಂತರವಾಗಿ ಈಜಿ ದಡ ಸೇರುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುಸ್ತಕ ಸೇರಿದ್ದಾರೆ. ಸಾಧನೆ ಮಾಡುವುದಕ್ಕೆ ವಯಸ್ಸು ಮುಖ್ಯ ಅಲ್ಲ, ಛಲ ಮುಖ್ಯ ಎಂದು ಸಾಬೀತುಪಡಿಸಿದ್ದಾರೆ.
Advertisement
Advertisement
ತಮ್ಮ ನಲವತ್ತನೇ ವಯಸ್ಸಿನಲ್ಲಿ ಈಜಿನ ಬಗ್ಗೆ ಹೆಚ್ಚು ಗಮನ ಹರಿಸಿದ ಗಂಗಾಧರ್, ಇದೀಗ ತನ್ನ 65ನೇ ವಯಸ್ಸಿನಲ್ಲಿ ಯಾರೂ ಮಾಡದ ದಾಖಲೆ ಮಾಡಿದ್ದಾರೆ. ಸಂಸ್ಥೆ ಪ್ರಮುಖರು, ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಜನ ಪ್ರತಿನಿಧಿಗಳು ದಾಖಲೆಗೆ ಸಾಕ್ಷಿಯಾದರು. ಅಪಾಯಕಾರಿ ಜೆಲ್ ಫಿಶ್ ಗಳನ್ನು, ಅಬ್ಬರಿಸುವ ಕಡಲಿನ ಅಲೆಗಳನ್ನು ಹಿಮ್ಮೆಟ್ಟಿಸಿ ಗಂಗಾಧರ್ ಸಮುದ್ರ ತೀರ ಸೇರಿದಾಗ ಸಂಭ್ರಮ ಮನೆ ಮಾಡಿತು. ಹೂಹಾರ, ಶಾಲು ಹಾಕಿ, ಪಟಾಕಿ ಸಿಡಿಸಿ ಜನ ಸಂಭ್ರಮಿಸಿದರು.
Advertisement
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗಂಗಾಧರ್:
ನಾನು ಬಾಲ್ಯದಲ್ಲೇ ಈಜು ಕಲಿತಿದ್ದೇನೆ. 60 ನೇ ವಯಸ್ಸಿನಲ್ಲಿ ಸ್ಪರ್ಧೆಗೆ ಬೇಕಾದ ಶೈಲಿಗಳನ್ನು ಮೈಗೂಡಿಸಿಕೊಂಡೆ. ನಾಲ್ಕು ವಿಧದ ಈಜು ನಾನು ಬಲ್ಲೆ. ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ನಾನು ಈಜಿ ಪ್ರಶಸ್ತಿ ಗೆದ್ದಿದ್ದೇನೆ. ಸಮುದ್ರದಲ್ಲಿ ಈಜುವದು ಸುಲಭವಲ್ಲ, ಕಳೆದ ಇಪ್ಪತ್ತು ದಿವಸಗಳಿಂದ ಕಾಲಿಗೆ ಸರಪಳಿ ಕಟ್ಟಿ ತರಬೇತಿ ಮಾಡುತ್ತಿದ್ದೇನೆ. ಜೆಲ್ ಮೀನುಗಳು ನನ್ನ ಮೇಲೆ ಅಟ್ಯಾಕ್ ಮಾಡುತ್ತಿದ್ದವು. ಇಂದು ಸಾಗರದ ಅಡಿಭಾಗದಲ್ಲಿ ಭಯಾನಕ ಮೀನುಗಳನ್ನು ಕಂಡೆ. ಇವತ್ತು ಸಹಕರಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಅಧಿಕಾರಿಗಳಿಗೆ, ಸಿಬ್ಬಂದಿಗೆ, ಸ್ಥಳೀಯ ಜನಪ್ರತಿನಿಧಿಗಳಿಗೆ, ನನ್ನ ಜೊತೆಗೆ ಇದ್ದ ಎಲ್ಲಾ ನನ್ನ ಸಾವಿರಾರು ಹಿತೈಷಿಗಳಿಗೆ ಧನ್ಯವಾದ ಎಂದು ಹೇಳಿದರು.
ಶಾಸಕ ರಘುಪತಿ ಭಟ್ ಮಾತನಾಡಿ, ಗಂಗಾಧರ ಮಾಡಿರುವ ಸಾಧನೆ ರಾಜ್ಯವೇ ಹೆಮ್ಮೆ ಪಡುವಂಥದ್ದು. 65 ವರ್ಷದ ವ್ಯಕ್ತಿಯ ಈ ಸಾಧನೆ, ಗಿನ್ನೆಸ್ ರೆಕಾರ್ಡ್ ಆಗಬೇಕು. ರಫ್ ಸಮುದ್ರದಲ್ಲಿ ಈಜುವುದು ಸುಲಭದ ಮಾತಲ್ಲ. ಮುಂದೆ ಗಿನ್ನಿಸ್ ದಾಖಲೆಗೂ ಗಂಗಾಧರ್ ಸೇರ್ಪಡೆ ಆಗಬೇಕು. ಉಡುಪಿ ಕ್ಷೇತ್ರದ ಪರವಾಗಿ ಕರ್ನಾಟಕದ ಜನತೆಯ ಪರವಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹಾರೈಸಿದರು.
ಇಂಡಿಯಾ ಬುಕ್ ಆಫ್ ರೆಕಾರ್ಡ್ ಜ್ಯೂರೇಟರ್ ಹರೀಶ್ ಮಾತನಾಡಿ, ಗಂಗಾಧರ್ ಅವರು ಉಡುಪಿಯಲ್ಲಿ ಒಂದು ಇತಿಹಾಸವನ್ನು ಸೃಷ್ಟಿ ಮಾಡಿದ್ದಾರೆ. ಒಂದು ಗಂಟೆ 13 ನಿಮಿಷದಲ್ಲಿ 7 ಸೆಕೆಂಡ್ ನಲ್ಲಿ 1400 ಮೀಟರ್ ಕ್ರಮಿಸಿದ್ದಾರೆ. ಲೋಟಸ್ ಫ್ಲೋಟ್ ವಿಭಾಗದಲ್ಲಿ ಈ ಸಾಧನೆಯನ್ನು ಮಾಡಿರುವ ಪ್ರಥಮರು ಇವರು. 65ನೇ ವಯಸ್ಸಿನಲ್ಲಿ ಈ ವಿಭಾಗದಲ್ಲಿ ಈವರೆಗೆ ಯಾರು ದಾಖಲೆ ಮಾಡಿಲ್ಲ. ಸದ್ಯಕ್ಕೆ ಗಂಗಾಧರ್ ಅವರಿಗೆ ಯಾವುದೇ ಪ್ರತಿಸ್ಪರ್ಧಿ ಇಲ್ಲ. ಜಿಪಿಎಸ್ ಮೂಲಕ ನಾವು ಕ್ರಮಿಸಿದ ದೂರವನ್ನು ಅಳತೆ ಮಾಡಿದ್ದೇವೆ. ನಾಲ್ಕು ಕ್ಯಾಮೆರಾದಲ್ಲಿ ಗಂಗಾಧರ ಸಾಧನೆ ದಾಖಲಾಗಿದೆ. ಇದೊಂದು ದಾಖಲೆ ಎಂದು ಈಗಲೇ ನಾವು ಪರಿಗಣಿಸಿದ್ದೇವೆ. ಪ್ರಾವಿಷನರಿ ಸರ್ಟಿಫಿಕೇಟನ್ನು ಕೊಟ್ಟಿದ್ದೇವೆ. ಕೆಲ ದಿನಗಳ ನಂತರ ಒರಿಜಿನಲ್ ಸರ್ಟಿಫಿಕೇಟ್ ಗಂಗಾಧರ್ ಅವರ ಕೈ ಸೇರುತ್ತದೆ ಎಂದರು.