ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವದ ಬಗ್ಗೆ ನಿನ್ನೆ ಹೇಳಿಕೆ ನೀಡಿದ್ದ ಅರಣ್ಯ ಸಚಿವ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಆನಂದ್ ಸಿಂಗ್, ಇಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ನನ್ನ ಕ್ಷೇತ್ರದಲ್ಲಿ ಆಯೋಜನೆಯಾದ ನನ್ನ ಇಲಾಖೆಯ ಮೊದಲ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾನು ನನ್ನ ಭಾಷಣದಲ್ಲಿ ಈ ಸರ್ಕಾರ ಯಾವಾಗ ಇರುತ್ತೋ, ಯಾವಾಗ ಹೋಗುತ್ತೋ ಎಂದು ಹೇಳಿಲ್ಲ. ಮಾಧ್ಯಮಗಳಲ್ಲಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂಬ ಸಮರ್ಥನೆಯನ್ನು ಮುಂದಿಟ್ಟಿದ್ದಾರೆ.
Advertisement
Advertisement
ನಾನು ಹೇಳಿಕೆ ನೀಡಿದ್ದು, ನಾನು ಈ ಇಲಾಖೆಯಲ್ಲಿ ಎಷ್ಟು ದಿವಸ ಇರುತ್ತೇನೋ, ಇಲ್ಲವೋ? ಎಂಬುದು ನನಗೆ ತಿಳಿದಿಲ್ಲ, ಕ್ಷೇತ್ರದಲ್ಲಿ ಆಯೋಜನೆಯಾದ ಇಲಾಖೆಯ ಮೊದಲ ಕಾರ್ಯಕ್ರಮವಾಗಿದ್ದರಿಂದ ಬೆಂಗಳೂರಿನ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇಲ್ಲಿ ತಪ್ಪದೇ ಭಾಗವಹಿಸಿದ್ದೇನೆ ಎಂದು ಹೇಳಿದ್ದೆ.
Advertisement
ಸರ್ಕಾರಗಳು ಬರುತ್ತವೆ, ಹೋಗುತ್ತವೆ ಆದರೆ ಇಲಾಖೆಯ ಅಭಿವೃದ್ಧಿಯ ಜೊತೆಗೆ ಕ್ಷೇತ್ರ ಹಾಗೂ ಕ್ಷೇತ್ರದ ಜನರ ಹಿತಾಸಕ್ತಿಗಳನ್ನು ಯಾವಾಗಲೂ ಜನಪ್ರತಿನಿಧಿಗಳಾದ ನಾವು ಕಾಪಾಡಬೇಕು ಎಂಬರ್ಥದಲ್ಲಿ ಹೇಳಿದ್ದು, ನಮ್ಮ ಸರ್ಕಾರ ಪೂರ್ಣ ಅವಧಿ ಮುಗಿಸಿ, ಮುಂದಿನ ಬಾರಿಯೂ ಸಹ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬುದನ್ನು ನಾನು ಮಾಧ್ಯಮ ಮಿತ್ರರಿಗೆ ಹಾಗೂ ರಾಜ್ಯದ ಜನತೆಗೆ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದಾರೆ.
Advertisement
ಸಚಿವರು ಏನು ಹೇಳಿದ್ದರು?
ಸಚಿವನಾಗಿ ನಾನು ನನ್ನ ಕ್ಷೇತ್ರದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂಬ ಸಲಹೆ ಕೊಟ್ಟಾಗ ನಾನು ಇಲ್ಲೇ ಮಾಡಬೇಕು ಎಂದು ಹೇಳಿದ್ದೆ. ಕಾರ್ಯಕ್ರಮ ಸಣ್ಣದಾಗಿರಲಿ, ದೊಡ್ಡದಾಗಿರಲಿ ನಮ್ಮ ಕ್ಷೇತ್ರದಲ್ಲಿ ನಡೆಯಬೇಕು ಎಂದಿದ್ದೆ. ಏಕೆಂದರೆ ಸರ್ಕಾರಗಳು ಯಾವಾಗ ಇರುತ್ತೋ, ಯಾವಾಗ ಹೋಗುತ್ತೋ ಗೊತ್ತಾಗುವುದಿಲ್ಲ. ಈ ಒಂದು ಅವಕಾಶ ಇಲ್ಲೇ ಮಾಡೋಣ. ನನಗೆ ಸಿಕ್ಕಿರುವ ಅಧಿಕಾರ ಮೊದಲ ಅವಕಾಶವಾಗಿದ್ದು, ನಮ್ಮ ಕ್ಷೇತ್ರದಲ್ಲೇ ಕಾರ್ಯಕ್ರಮ ಆಗಲಿ ಎಂಬ ಉದ್ದೇಶದಿಂದ ಇಲ್ಲಿ ಆಯ್ಕೆ ಮಾಡಿಕೊಂಡೇ ಎಂದು ಹೇಳಿದ್ದರು.
ಡಿಕೆಶಿ ವ್ಯಂಗ್ಯ?
ಸಚಿವ ಆನಂದ್ ಸಿಂಗ್ ಹೇಳಿಕೆ ವಿಚಾರವಾಗಿ ಇಂದು ಪ್ರತಿಕ್ರಿಯೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸರ್ಕಾರದ ಒಂದೊಂದೇ ಹುಳುಕುಗಳು ಈಗ ಹೊರಬರುತ್ತಿವೆ. ಸರ್ಕಾರ ಇರುತ್ತೋ, ಇಲ್ಲವೋ ಅಂತಾ ಅವರ ಸಚಿವರೆ ಬಹಿರಂಗವಾಗಿ ಹೇಳುತ್ತಿದ್ದಾರೆ. ಹುಳುಕು ಹೊರ ಬರುತ್ತಿದ್ದಂತೆಯೇ ಏನಾಗುತ್ತದೆಯೋ ಕಾದು ನೋಡಬೇಕು ಎಂದಿದ್ದರು.