CoronaDistrictsKarnatakaLatestMain PostTumakuru

ದೇಶದ ಜನ ಕೊರೊನಾ ಸಂಕಷ್ಟ ಎದುರಿಸಲು ಬಿಜೆಪಿ ಕಾರಣ: ಡಾ.ಜಿ ಪರಮೇಶ್ವರ್

ತುಮಕೂರು: ಕೊರೊನಾ ಎರಡನೇ ಅಲೆ ಬರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‍ಓ) ಎಚ್ಚರಿಕೆ ನೀಡಿತ್ತು. ಆದರೂ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರ ನಿರ್ಲಕ್ಷಿಸಿದರ ಪರಿಣಾಮ ಇದೀಗ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಜನರ ಈ ಸ್ಥಿತಿಗೆ ಬಿಜೆಪಿ ಸರ್ಕಾರ ನೇರ ಹೊಣೆ ಎಂದು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ.ಜಿ ಪರಮೇಶ್ವರ್, ಕೊರೊನಾ ಮೊದಲನೇ ಅಲೆಯಲ್ಲಿ ಸ್ವಲ್ಪಮಟ್ಟಿಗೆ ಸಾವು ನೋವು ಆಯ್ತು. ಜನರು ಅದನ್ನು ಹೇಗೋ ತಡೆದುಕೊಂಡರು. ಆದರೆ ಎರಡನೇ ಅಲೆ ಗಂಭೀರವಾಗಿ ಅಪ್ಪಳಿಸುತ್ತದೆ ಎಂದು ಡಬ್ಲ್ಯೂಎಚ್‍ಓ ಎಚ್ಚರಿಕೆ ನೀಡಿತ್ತು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅವರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗಿ ರಾಜ್ಯ ಹಾಗೂ ದೇಶದ ಜನ ಈಗ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ:ಆಸ್ಪತ್ರೆಯಲ್ಲಿ ಕುಡುಕನ ರಂಪಾಟ- ಅಮಲಿನಲ್ಲಿ ಶರ್ಟ್ ಬಿಚ್ಚಿದ

ಭಾರತ ಔಷಧ ತಯಾರಿಕೆಯಲ್ಲಿ ಉಳಿದ ದೇಶಕ್ಕಿಂತ ಅಗ್ರ ಸ್ಥಾನದಲ್ಲಿದೆ. ಹಾಗಾಗಿ ಎಲ್ಲಾ ಔಷಧಾ ತಾಯಾರಿಕಾ ಕಂಪನಿಗಳೂ ಚೆನ್ನಾಗಿ ಸಪೋರ್ಟ್ ಮಾಡಿದ್ದರಿಂದ ಫಾರ್ಮುಲಾ ಪಡೆದು ಕೋಟಿಗಟ್ಟಲೆ ಲಸಿಕೆಯನ್ನು ತಯಾರು ಮಾಡಿತ್ತು. ಆದರೆ ನಮ್ಮ ಪ್ರಧಾನಿ ಮೊದಲು ದೇಶದ ಪ್ರಜೆಗಳಿಗೆ ಲಸಿಕೆ ಕೊಡುವುದನ್ನು ಬಿಟ್ಟು ವಿದೇಶಕ್ಕೆ 6.63 ಕೋಟಿ ಲಸಿಕೆ ರವಾನೆ ಮಾಡಿದರು. ಈಗ ನಮ್ಮಲ್ಲಿ ವ್ಯಾಕ್ಸಿನ್ ಗಾಗಿ ಹಾಹಾಕಾರ ಶುರುವಾಗಿದೆ ಎಂದು ಕಿಡಿಕಾರಿದರು.

ವಿದೇಶಕ್ಕೆ ಕಳುಹಿಸಿದ ವ್ಯಾಕ್ಸಿನ್ ನಮ್ಮ ದೇಶದ ಪ್ರಜೆಗಳಿಗೆ ಕೊಟ್ಟರೆ ಕೋವಿಡ್ ಚೈನ್ ಬ್ರೇಕ್ ಆಗುತಿತ್ತು. ಆದರೆ ಪ್ರಧಾನಿ ಲಸಿಕೆ ರಫ್ತು ಮಾಡಿದ್ದರಿಂದಾಗಿ ನಮ್ಮ ಪ್ರಜೆಗಳಿಗೆ ಫಸ್ಟ್ ಡೋಸ್ ಸಿಕ್ಕಲ್ಲ. ಸೆಕೆಂಡ್ ಡೋಸ್ ಕೂಡ ಸಿಗಲಿಲ್ಲ. ಇಲ್ಲಿಯವರೆಗೆ ದೇಶದ 21 ಕೋಟಿ ಜನರಿಗೆ ಮಾತ್ರ ವ್ಯಾಕ್ಸಿನೇಷನ್ ಕೊಡಲಾಗಿದೆ. ಈ ಮೂಲಕ ನಮ್ಮ ದೇಶದ ಒಟ್ಟು ಜನಸಂಖ್ಯೆಯ ಕೇವಲ ಶೇ.3.2 ರಷ್ಟು ಮಾತ್ರ ಲಸಿಕೆ ನೀಡಲಾಗಿದೆ. ಹಾಗೆ ಕೇಂದ್ರ ರಾಜ್ಯಕ್ಕೆ ಸಾಕಷ್ಟು ವೆಂಟಿಲೇಟರ್ ಕೊಟ್ಟಿದೆ ಎಂದು ಹೇಳುತ್ತಿದೆ ಆದರೆ ಇಲ್ಲಿ ಮಾತ್ರ ವೆಂಟಿಲೇಟರ್ ಇಲ್ಲ ಎಂದು ಕೂಗು ಕೇಳಿಸುತ್ತಿದೆ. ಹಾಗಾದರೆ ಕೇಂದ್ರ, ರಾಜ್ಯಕ್ಕೆ ಕೊಟ್ಟಿರುವ ವೆಂಟಿಲೇಟರ್ ಏನಾಯ್ತು ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

Leave a Reply

Your email address will not be published.

Back to top button