LatestMain PostNationalTechUncategorized

ತಿಂಗಳಿಗೆ 160 ರೂ.ಗೆ 16 ಜಿಬಿ ಡೇಟಾ ಸಿಗುತ್ತಿರುವುದು ದುರಂತ – ಏರ್‌ಟೆಲ್‌ ಮುಖ್ಯಸ್ಥ

ನವದೆಹಲಿ: ವಿಶ್ವದಲ್ಲೇ ಕಡಿಮೆ ಬೆಲೆಗೆ ಸಿಗುತ್ತಿದ್ದ ಡೇಟಾ ಮುಂದಿನ ದಿನಗಳಲ್ಲಿ ದುಬಾರಿಯಾಗಲಿದೆ ಎಂಬುದನ್ನು ಏರ್‌ಟೆಲ್‌ ಮುಖ್ಯಸ್ಥ ಸುನಿಲ್‌ ಭಾರ್ತಿ ಮಿತ್ತಲ್‌ ಸೂಚ್ಯವಾಗಿ ಹೇಳಿದ್ದಾರೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಿಂಗಳಿಗೆ 160 ರೂ. ದರದಲ್ಲಿ 16 ಜಿಬಿ ಡೇಟಾ ಲಭ್ಯವಾಗುತ್ತಿರುವುದು ದುರಂತ ಎಂದು ನೇರವಾಗಿಯೇ ಹೇಳಿದ್ದಾರೆ.

ಈಗ ನೀವು ಪೂರ್ಣವಾಗಿ 1.6 ಜಿಬಿ ಡೇಟಾವನ್ನು ಬಳಕೆ ಮಾಡುತ್ತಿರೋ ಇಲ್ಲವೋ ಗೊತ್ತಿಲ್ಲ. ಆದರೆ ದರದ ಲೆಕ್ಕಾಚಾರ ಹಾಕಿದರೆ ನೀವು ಹೆಚ್ಚು ದರ ಪಾವತಿಸಲು ಸಿದ್ಧರಾಗಿ. ನಾವು ಅಮೆರಿಕ ಯುರೋಪ್‌ನಲ್ಲಿ ಇರುವಂತೆ 50-60 ಅಮೆರಿಕ ಡಾಲರ್‌ ಏರಿಕೆ ಆಗಬೇಕೆಂದು ಹೇಳುತ್ತಿಲ್ಲ. ಆದರೆ ತಿಂಗಳಿಗೆ 2 ಡಾಲರ್‌ ಬೆಲೆಯಲ್ಲಿ 16 ಜಿಬಿ ನೀಡುವುದು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

 

ಓರ್ವ ಗ್ರಾಹಕನಿಂದ ಕಂಪನಿಗೆ ಸಿಗುವ ಸರಾಸರಿ ಆದಾಯವನ್ನು ಎಆರ್‌ಪಿಯು ಎಂದು ಕರೆಯಲಾಗುತ್ತದೆ. ನಮಗೆ ಎಆರ್‌ಪಿಯುನಿಂದ 300 ರೂ. ಬಂದರೆ ಸಹಾಯವಾಗುತ್ತದೆ. ಟೆಲಿಕಾಂ ಒಂದೇ ಉದ್ಯಮವಲ್ಲ. ಡಿಜಿಟಲ್‌ ಕ್ಷೇತ್ರದಲ್ಲೂ ಹೂಡಿಕೆ ಮಾಡಬೇಕು. ಕಂಪನಿ ಉಳಿಯಬೇಕಾದರೆ ಡೇಟಾ ಬೆಲೆ ಏರಿಕೆ ಅನಿವಾರ್ಯ ಎಂದು ಎಂದು ಹೇಳಿದರು.

ಜೂನ್‌ 30ಕ್ಕೆ ಅಂತ್ಯಗೊಂಡ ಮೊದಲ ತ್ರೈಮಾಸಿಕದಲ್ಲಿ ಏರ್‌ಟೆಲ್‌ 157 ರೂ. ಎಆರ್‌ಪಿಯು ಗಳಿಸಿತ್ತು. ಬಹಳ ಕಠಿಣ ಸಮಯದಲ್ಲಿ ನಾವು ಸೇವೆ ನೀಡಿದ್ದೇವೆ. ಅಷ್ಟೇ ಅಲ್ಲದೇ 5ಜಿ, ಅಪ್ಟಿಕಲ್‌ ಕೇಬಲ್‌, ಸಬ್‌ಮರೀನ್‌ ಕೇಬಲ್‌ಗಳಿಗೆ ಹೂಡಿಕೆ ಮಾಡಲು ಎಆರ್‌ಪಿಯು ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು.

 

 

ಕೋವಿಡ್‌ 19 ನಿಂದಾಗಿ‌ ಕಳೆದ 6 ತಿಂಗಳಿನಲ್ಲಿ ಡಿಜಿಟಲ್‌ ಕಂಟೆಂಟ್‌ ಬಳಕೆ ಹೆಚ್ಚಾದ ಕಾರಣ ಎವರೆಜ್‌ ರೆವೆನ್ಯೂ ಪರ್‌ ಯೂಸರ್(ಎಆರ್‌ಪಿಯು) 200 ರೂ. ಗಿಂತಲೂ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಮಿತ್ತಲ್‌ ಹೇಳಿದ್ದಾರೆ.

ಏರ್‌ಟೆಲ್‌ ಅತೀ ಹೆಚ್ಚಿನ ಎಆರ್‌ಪಿಯು ಹೊಂದಿದ್ದು ಪ್ರತಿ ಗ್ರಾಹಕನಿಂದ ಪ್ರತಿ ತಿಂಗಳು ಸರಾಸರಿ 157 ರೂಪಾಯಿ ಆದಾಯ ಸಂಗ್ರಹಿಸುತ್ತಿದೆ. ಜಿಯೋ 140 ರೂ., ವೊಡಾಫೋನ್‌ 114 ರೂ. ಎಆರ್‌ಪಿಯು ಗಳಿಸುತ್ತಿದೆ.

ಎಜಿಆರ್‌ ಶುಲ್ಕ ವಿಚಾರವಾಗಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ನ ಎಜಿಆರ್‌ ಆದೇಶದಿಂದ ಏರ್‌ಟೆಲ್‌ಗೆ ಬಹಳ ಸಮಸ್ಯೆಯಾಗಿದೆ. ಆದರೂ ನಾವು ಸ್ವಲ್ಪ ಪ್ರಮಾಣ ಹಣ ಪಾವತಿಸಿ ಬಗೆ ಹರಿಸಲು ಯತ್ನಿಸಿದ್ದೇವೆ. ಈ ಹಣ ಪಾವತಿಯಿಂದಾಗಿ ನಮಗೆ 4ಜಿ, 5ಜಿ ನೆಟ್‌ವರ್ಕ್‌ ಹೂಡಿಕೆಗೆ ಸಮಸ್ಯೆಯಾಗಿದೆ ಎಂದು ತಿಳಿಸಿದರು.

ಭಾರತಿ ಏರ್‌ಟೆಲ್‌ ಎಜಿಆರ್‌ ಶುಲ್ಕವಾಗಿ 43,980 ಕೋಟಿ ರೂ.ಪಾವತಿಸಬೇಕಿದ್ದು, ಸದ್ಯ 18,004 ಕೋಟಿ ರೂ. ಪಾವತಿಸಿದೆ. ಈಗ ಕಂಪನಿ ಉಳಿದ ಮೊತ್ತವನ್ನು ಪಾವತಿಸಲು 15 ವರ್ಷ ಸಮಯವನ್ನು ಕೇಳಿದೆ.

ವೊಡಾಫೋನ್‌ ಐಡಿಯಾ 58,254 ಕೋಟಿ ರೂ. ಪಾವತಿಸಬೇಕಿದ್ದು, ಈಗ 7,854 ಕೋಟಿ ರೂ. ಎಜಿಆರ್‌ ಶುಲ್ಕ ಪಾವತಿಸಿದೆ. ಏರ್‌ಟೆಲ್‌ನಂತೆ ವೊಡಾಫೋನ್‌ ಉಳಿದ 50,400 ಕೋಟಿ ರೂ. ಪಾವತಿಸಲು 15 ವರ್ಷ ಸಮಯ ನೀಡುವಂತೆ ಕೇಳಿಕೊಂಡಿದೆ.

ಏನಿದು ಎಜಿಆರ್?
ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪ್ರಕರಣದಲ್ಲಿ ಕಳೆದ ವರ್ಷ ಕೇಂದ್ರ ಸರ್ಕಾರದ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.

ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

Leave a Reply

Your email address will not be published. Required fields are marked *

Back to top button