CricketLatestMain PostSports

ತನ್ನ ದಾಖಲೆ ಮುರಿದ ಆಂಗ್ಲ ವೇಗಿಗೆ ಶುಭ ಹಾರೈಸಿದ ಕುಂಬ್ಳೆ

ಬೆಂಗಳೂರು: ಭಾರತ ತಂಡದ ಮಾಜಿ ದಿಗ್ಗಜ ಆಟಗಾರ ಕನ್ನಡಿಗ ಅನಿಲ್ ಕುಂಬ್ಳೆ ಅವರ ದೀರ್ಘ ಕಾಲದ ದಾಖಲೆಯೊಂದನ್ನು ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಮುರಿದಿದ್ದಾರೆ. ತನ್ನ ದಾಖಲೆ ಮುರಿದ ಜೇಮಿಗೆ ಕುಂಬ್ಳೆ ಶುಭಾಶಯವನ್ನು ಕೋರಿದ್ದಾರೆ.

ಇಂಗ್ಲೆಂಡ್‍ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಅವರ ವಿಕೆಟ್ ಕಬಳಿಸುವುದರೊಂದಿಗೆ ಜೇಮ್ಸ್ ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್‍ನಲ್ಲಿ 620 ವಿಕೆಟ್ ಕಿತ್ತರು. ಈ ವೇಳೆ ಕುಂಬ್ಳೆ ಅವರ 619 ವಿಕೆಟ್‍ಗಳ ಈ ಹಿಂದಿನ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ. ಕುಂಬ್ಳೆ ತನ್ನ ದಾಖಲೆಯನ್ನು ಮುರಿದ ಆ್ಯಂಡರ್ಸನ್ ಅವರಿಗೆ ಧನ್ಯವಾದಗಳು ಒಬ್ಬ ವೇಗದ ಬೌಲರ್ ಈ ಸಾಧನೆ ಮಾಡಿರುವುದಕ್ಕೆ ಅಭಿನಂದನೆಗಳು ಎಂದು ಟ್ಟಿಟ್ಟರ್‍ ನಲ್ಲಿ ಪೋಸ್ಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.  ಇದನ್ನೂ ಓದಿ: ಕುಂಬ್ಳೆ 10 ವಿಕೆಟ್ ವಿಶ್ವದಾಖಲೆ ನೆನಪಿಸಿದ ಬಿಸಿಸಿಐ

ಆ್ಯಂಡರ್ಸನ್ 163 ಪಂದ್ಯಗಳಿಂದ 620 ವಿಕೆಟ್ ಕಬಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೊದಲು ಅನಿಲ್ ಕುಂಬ್ಳೆ 132 ಪಂದ್ಯಗಳಿಂದ 619 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದರು ಇದೀಗ ಒಂದು ಸ್ಥಾನ ಕೆಳಗಿಳಿದು ನಾಲ್ಕನೇ ಸ್ಥಾನಕ್ಕೆ ಜಾರಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲಂಕಾದ ಮುತ್ತಯ್ಯ ಮುರುಳೀಧರನ್ 133 ಪಂದ್ಯಗಳಿಂದ 800 ವಿಕೆಟ್ ಪಡೆದು ಮೊದಲನೇ ಸ್ಥಾನವನ್ನು ಅಲಂಕರಿಸಿದ್ರೆ, ಆಸ್ಟ್ರೇಲಿಯಾದ ಶೇನ್ ವಾರ್ನ್ 145 ಪಂದ್ಯಗಳಿಂದ 708 ವಿಕೆಟ್ ಕಿತ್ತು ಎರಡನೇ ಸ್ಥಾನದಲ್ಲಿದ್ದಾರೆ.

Leave a Reply

Your email address will not be published. Required fields are marked *

Back to top button