ಮಡಿಕೇರಿ: ನಗರದ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಸಂಕೀರ್ಣದಿಂದ ಸರ್ಕಾರಿ ಲ್ಯಾಪ್ ಟಾಪ್ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಚೈನ್ ಗೇಟ್ ನಿವಾಸಿ ಸುಮಂತ್(19) ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಆತನ ಬಳಿಯಿದ್ದ 40 ಸಾವಿರ ರೂ. ಮೌಲ್ಯದ ಲ್ಯಾಪ್ ಟಾಪ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಸುಮಂತ್ ನಗರದ ಅಂಗಡಿಯೊಂದರ ಕಳವು ಪ್ರಕರಣದಲ್ಲಿ ಸೆರೆಯಾಗಿ ಜೈಲು ಸೇರಿದ್ದು, ಕಳೆದ 2 ದಿನಗಳ ಹಿಂದೆ ಜಾಮೀನಿನ ಮೇಲೆ ಹೊರ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯ ವಿರುದ್ಧ ಮಡಿಕೇರಿ, ಕುಶಾಲನಗರ ಪೊಲೀಸ್ ಠಾಣೆಗಳಲ್ಲಿ ವಿವಿಧ ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement
Advertisement
ಘಟನೆ ಹಿನ್ನೆಲೆ:
ಮಂಗಳವಾರ ಸಂಜೆ 4 ಗಂಟೆಯ ಸಮಯದಲ್ಲಿ ಮಡಿಕೇರಿಯಲ್ಲಿನ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಲ್ಲಿ ಚಾರ್ಜ್ಗೆ ಹಾಕಿದ್ದ ಸರಕಾರಿ ಲ್ಯಾಪ್ ಟಾಪ್ ನಾಪತ್ತೆಯಾಗಿತ್ತು. ಈ ಸರ್ಕಾರಿ ಲ್ಯಾಪ್ ಟಾಪ್ ನಲ್ಲಿ ಕೋವಿಡ್ ಸಂಬಂಧಿತ ಡಾಟಾಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಮಾಸಿಕ ವೇತನ ಮಾಹಿತಿ ಸಹಿತ ಎಲ್ಲಾ ಡಾಟಾಗಳು ಇದ್ದವು. ಈ ಲ್ಯಾಪ್ ಟಾಪ್ ನಲ್ಲಿ ಅಮೂಲ್ಯ ದಾಖಲಾತಿಗಳು ಇದ್ದ ಹಿನ್ನೆಲೆಯಲ್ಲಿ ಕಚೇರಿ ಸಿಬ್ಬಂದಿ ಈ ಕುರಿತು ಎಲ್ಲೆಡೆ ಹುಡುಕಾಡಿದ್ದರು ಕೂಡ ಲ್ಯಾಪ್ ಟಾಪ್ ಪತ್ತೆಯಾಗಿರಲಿಲ್ಲ.
Advertisement
Advertisement
ವೈದಾಧಿಕಾರಿ ಡಾ. ಆನಂದ್ ನಗರ ಪೊಲೀಸ್ ಠಾಣೆಗೆ ಲ್ಯಾಪ್ ಟಾಪ್ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ನಗರ ಪೊಲೀಸರು ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಸಂಕೀರ್ಣಕ್ಕೆ ತೆರಳಿ ತಾಂತ್ರಿಕ ಮಾಹಿತಿಗಳನ್ನು ಕಲೆ ಹಾಕಿದ್ದರು. ಬಳಿಕ ನಗರದ ಚೈನ್ ಗೇಟ್ ನಿವಾಸಿ ಸುಮಂತ್ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ ಸಂದರ್ಭ ಕಳವು ಪ್ರಕರಣ ಪತ್ತೆಯಾಗಿದೆ. ಆತನ ಬಳಿಯಿದ್ದ ಸರಕಾರಿ ಲ್ಯಾಪ್ ಟಾಪ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.