KarnatakaLatestMain PostNational

ಜಮೀರ್ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ: ಡಿ.ಕೆ.ಸುರೇಶ್

ನವದೆಹಲಿ: ಎರಡು ವರ್ಷಗಳ ಹಿಂದಿನ ಐಎಂಎ ಪ್ರಕರಣವನ್ನು ನೆಪವಾಗಿಟ್ಟುಕೊಂಡು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮನೆ, ಕಚೇರಿ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ನಡೆಸಿರುವ ದಾಳಿ ರಾಜಕೀಯ ಪ್ರೇರಿತ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.

ನವದೆಹಲಿಯಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ಬಹಳ ಹಿಂದೆಯೇ ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಆದರೆ ಎರಡು ವರ್ಷಗಳ ನಂತರ ದೆಹಲಿ ಕಚೇರಿಯ ಇಡಿ ಅಧಿಕಾರಿಗಳು ಮತ್ತೆ ದಾಳಿ ನಡೆಸಿರುವುದು ಆಶ್ಚರ್ಯ ಮೂಡಿಸಿದೆ. ಇದೊಂದು ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಬೆಂಗಳೂರಿನಲ್ಲೇ ಇಡಿ ಕಚೇರಿ ಇದೆ. ರಾಜಕೀಯ ಪ್ರೇರಿತ ಹಾಗೂ ರಾಜಕೀಯ ಹಿತಾಸಕ್ತಿ ಪ್ರೇರಿತ ಪ್ರಕರಣವನ್ನು ದೆಹಲಿಗೆ ವರ್ಗಾವಣೆ ಮಾಡಿಕೊಂಡು, ಸಂಬಂಧಪಟ್ಟವರಿಗೆ ರಾಜಕೀಯ ತೊಂದರೆ ನೀಡುವ ಪರಿಪಾಠವನ್ನು ಕೇಂದ್ರ ಸರ್ಕಾರ ಪಾಲಿಸುತ್ತಾ ಬಂದಿದೆ. ಇದನ್ನು ನಾವು ಬಹಳ ಹತ್ತಿರದಿಂದ ಗಮನಿಸುತ್ತಿದ್ದೇವೆ. ಇದು ದ್ವೇಷದ ರಾಜಕಾರಣ ಎಂದರು. ಇದನ್ನೂ ಓದಿ: ಜಮೀರ್ ಆದಾಯ 10 ವರ್ಷದ ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 41 ವರ್ಷಗಳ ನಂತರ ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದಿದೆ. ಇದು ನಮ್ಮೆಲ್ಲರಿಗೂ ಸಂತೋಷದ ವಿಚಾರವಾಗಿದ್ದು, ಇಡೀ ತಂಡಕ್ಕೆ ನಾವು ವಿಶೇಷ ಅಭಿನಂದನೆ ಸಲ್ಲಿಸುತ್ತೇವೆ. ಹಲವು ಕ್ರೀಡಾಪಟುಗಳು ಸೆಮಿಫೈನಲ್ ಹಾಗೂ ಫೈನಲ್ ಪ್ರವೇಶಿಸಿದ್ದು, ಅವರಿಗೂ ಯಶಸ್ಸು ಸಿಗಲಿ, ಭಾರತದ ಪತಾಕೆ ಹಾರಲಿ ಎಂದು ಶುಭ ಹಾರೈಸುತ್ತೇನೆ ಎಂದು ಸುರೇಶ್ ತಿಳಿಸಿದರು. ಇದನ್ನೂ ಓದಿ: ಐಎಂಎ ಗೋಲ್ಡ್‌ನಿಂದ 5 ಕೋಟಿ ಮೌಲ್ಯದ ಚಿನ್ನಾಭರಣ ಪಡೆದಿದ್ದ ಶಾಸಕ ಜಮೀರ್!

Leave a Reply

Your email address will not be published. Required fields are marked *

Back to top button