Connect with us

Corona

ಚೀನಾಗೆ ಹೊಡೆತ ನೀಡಲು ಭಾರತದ ನಡೆಯನ್ನು ಫಾಲೋ ಮಾಡಿದ ಅಮೆರಿಕ

Published

on

ವಾಷಿಂಗ್ಟನ್‌: ಆನ್‌ಲೈನ್‌ ಶಾಪಿಂಗ್‌ ವಿಚಾರದಲ್ಲಿ ಭಾರತ ಕೈಗೊಂಡ ನಿರ್ಧಾರವನ್ನು ಅಮೆರಿಕ ಈಗ ಅನುಸರಿಸಲು ಮುಂದಾಗುತ್ತಿದೆ. ಇ–ಕಾಮರ್ಸ್‌ ತಾಣಗಳ ಮೂಲಕ ಮಾರಾಟವಾಗುವ ಚೀನಾ ಉತ್ಪನ್ನಗಳು  ‌‌ಗ್ರಾಹಕರಿಗೆ ತಿಳಿಯಲು ಉತ್ಪಾದಕ ರಾಷ್ಟ್ರದ ಹೆಸರನ್ನು ಪ್ರದರ್ಶಿಸುವಂತೆ ಕಾಯ್ದೆಗೆ ತಿದ್ದುಪಡಿ ತರಲು ಅಮೆರಿಕ ಮುಂದಾಗುತ್ತಿದೆ.

ಉತ್ಪನ್ನಗಳು ಚೀನಾದಲ್ಲಿ ತಯಾರಾಗಿದ್ದರೆ ಆನ್‌ಲೈನ್‌ ಶಾಪಿಂಗ್‌ ತಾಣಗಳು ಆ ವಿವರವನ್ನು ಪ್ರದರ್ಶಿಸಬೇಕೆಂದು ಸೂಚಿಸುವ ಮಸೂದೆಯನ್ನು ರಿಪಬ್ಲಿಕನ್‌ ಪಕ್ಷದ ಮಹಿಳಾ ಸೆನೆಟರ್‌ ಮಾರ್ಥಾ ಮೆಕ್ಸಾಲಿ ಸಂಸತ್ತಿನಲ್ಲಿ ಮಂಡಿಸಿದ್ದಾರೆ.

ಉತ್ಪಾದಕ ರಾಷ್ಟ್ರದ ಹೆಸರನ್ನು ತಿಳಿಸುವ ಸಂಬಂಧ 1930ರ ಸುಂಕ ಕಾಯ್ದೆಗೆ ತಿದ್ದುಪಡಿ ಮಾಡಲು ಈ ಮಸೂದೆಯನ್ನು ಮಂಡಿಸಲಾಗಿದೆ.

ಒಂದು ಉತ್ಪನ್ನದ ಬಹುದೊಡ್ಡ ಭಾಗ ಚೀನಾದಲ್ಲಿ ತಯಾರಾಗಿದ್ದಲ್ಲಿ ಇ–ಕಾಮರ್ಸ್‌ ತಾಣಗಳು ವಿವರ ನೀಡಬೇಕು. ಅಷ್ಟೇ ಅಲ್ಲದಚೀನಾದಿಂದ ತಯಾರಿಸಲ್ಪಟ್ಟ ಉತ್ಪನ್ನ ಮತ್ತು ಅಲ್ಲಿ ಜೋಡಿಸಲ್ಪಟ್ಟ ಉತ್ಪನ್ನದ ಭಾಗಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಬೇಕು ಎಂಬ ಅಂಶ ಮಸೂದೆಯಲ್ಲಿದೆ.

ಅಮೆರಿಕದ ಗ್ರಾಹಕರು ನಾವು ಯಾವ ದೇಶದಿಂದ ವಸ್ತುಗಳನ್ನು ಖರೀದಿಸುತ್ತಿದ್ದೇವೆ ಎಂಬುದನ್ನು ತಿಳಿಯಬೇಕು. ವಿಶೇಷವಾಗಿ ಚೀನಾದಿಂದ ಕೊರೊನಾ ಹರಡಿದ್ದು ಎಲ್ಲರಿಗೂ ಸಮಸ್ಯೆಯಾಗಿದೆ. ಹೀಗಾಗಿ ನಮ್ಮ ಪ್ರಜೆಗಳು ಖರೀದಿಸುವ ಉತ್ಪನ್ನ ಎಲ್ಲಿ ತಯಾರಾಗುತ್ತದೆ ಎಂಬುದನ್ನು ತಿಳಿಯಲು ಅರ್ಹರಾಗಿದ್ದಾರೆ ಎಂದು ಮಾರ್ಥಾ ಮೆಕ್ಸಾಲಿ ಮಸೂದೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಅಮೆರಿಕ ಮತ್ತು ಚೀನಾ ನಡುವೆ ಈಗಾಗಲೇ ವಾಣಿಜ್ಯ ಸಮರ ಆರಂಭಗೊಂಡಿದೆ. ಈಗ ಈ ನಿರ್ಧಾರ ಕೈಗೊಳ್ಳುವ ಮೂಲಕ ಸಮರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.

ಭಾರತ ಏನು ಮಾಡಿದೆ?
ಗಲ್ವಾನ್‌ ಘರ್ಷಣೆಯ ಬಳಿಕ ಭಾರತ ಸರ್ಕಾರ ಒಂದೊಂದೆ ಮಹತ್ವವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಚೀನಾಗೆ ಶಾಕ್‌ ನೀಡುತ್ತಿದೆ. ಚೀನಿ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ gem.gov.in ವೆಬ್‌ಸೈಟಿನಲ್ಲಿ ಕಡ್ಡಾಯವಾಗಿ ಉತ್ಪನ್ನ ತಯಾರದ ಮೂಲ ದೇಶದ ಹೆಸರನ್ನು ಪ್ರದರ್ಶಿಸಬೇಕೆಂದು ಸೂಚಿಸಿತ್ತು. ಅಷ್ಟೇ ಅಲ್ಲದೇ ಜನರಿಗೆ ಸುಲಭವಾಗಿ ತಿಳಿಯಲು ʻಮೇಕ್‌ ಇನ್‌ ಇಂಡಿಯಾʼ ವಿಭಾಗವನ್ನು ಸೇರಿಸಬೇಕು ಎಂದು ತಿಳಿಸಿದೆ. ʻಆತ್ಮನಿರ್ಭರ್‌ ಭಾರತ್‌ʼ ಮತ್ತು ʻಮೇಕ್‌ ಇನ್‌ ಇಂಡಿಯಾʼವನ್ನು ಉತ್ತೇಜಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿತ್ತು.

 

ಈ ನಿರ್ಧಾರದ ಬಳಿಕ ಕೇಂದ್ರ ವಾಣಿಜ್ಯ ಸಚಿವಾಲಯ, ಇ–ಕಾಮರ್ಸ್‌ ಜಾಲತಾಣಗಳು ತಮ್ಮ ಮೂಲಕ ಮಾರಾಟವಾಗುವ ವಸ್ತುಗಳು ಯಾವ ದೇಶದವು ಎಂಬುದನ್ನು ತಿಳಿಸುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಅಮೆಜಾನ್‌ ಕಂಪನಿಯ ಭಾರತದ ಘಟಕವು ಮಾರಾಟಕ್ಕೆ ಇಟ್ಟಿರುವ ವಸ್ತುಗಳು ಯಾವ ದೇಶದಿಂದ ಬಂದಿದೆ ಎನ್ನುವ ಮಾಹಿತಿ ನೀಡುವ ವ್ಯವಸ್ಥೆಯು ಆಗಸ್ಟ್‌ 10ರೊಳಗೆ ಜಾರಿಗೆ ಬರಬೇಕು ಎಂದು ತನ್ನ ಇ–ಮಾರುಕಟ್ಟೆ ಮೂಲಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ಸೂಚನೆಯನ್ನು ನೀಡಿದೆ.

Click to comment

Leave a Reply

Your email address will not be published. Required fields are marked *