Connect with us

Latest

ಚೀನಾ ಸಂಘರ್ಷದ ನಂತ್ರ ಲಡಾಕ್‍ಗೆ ಪ್ರಧಾನಿ ಮೋದಿ ದಿಢೀರ್ ಭೇಟಿ

Published

on

ಶ್ರೀನಗರ: ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತದ ಸೇನೆ ಮತ್ತು ಚೀನಾ ನಡುವೆ ನಡೆದ ಸಂಘರ್ಷದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಲಡಾಕ್‍ನ ಲೇಹ್‍ಗೆ ಭೇಟಿ ಕೊಟ್ಟಿದ್ದಾರೆ.

ಪ್ರಧಾನಿ ಮೋದಿ ಅವರು ಪ್ರಸ್ತುತ ಲಡಾಕ್‍ನ ನಿಮುನಲ್ಲಿರುವ ಫಾರ್ವರ್ಡ್ ಲೊಕೇಶನ್‍ನಲ್ಲಿದ್ದಾರೆ. ಅಲ್ಲಿಗೆ ಮೋದಿ ಅವರು ಮುಂಜಾನೆ ತಲುಪಿದ್ದು, ಅವರು ಸೈನ್ಯ, ವಾಯುಪಡೆ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ)ಯ ಸಿಬ್ಬಂದಿಯೊಂದಿಗೆ ಸಂವಹನ ನಡೆಸುತ್ತಿದ್ದಾರೆ. ಈ ಪ್ರದೇಶದ 11,000 ಅಡಿ ಎತ್ತರದಲ್ಲಿದ್ದು, ನಿಮು ಕಠಿಣ ಭೂಪ್ರದೇಶಗಳಲ್ಲಿ ಒಂದಾಗಿದೆ. ಇದು ಜನ್ಸ್ಕರ್ ಶ್ರೇಣಿಯಿಂದ ಆವೃತವಾಗಿದೆ ಮತ್ತು ಸಿಂಧೂ ತೀರದಲ್ಲಿದೆ. ಇದನ್ನೂ ಓದಿ: ಸುದೀರ್ಘ 11 ಗಂಟೆಗಳ ಸಭೆ ಯಶಸ್ವಿ- ಗಡಿಯಿಂದ ಹಿಂದೆ ಸರಿಯಲು ಚೀನಾ ಸೇನೆ ಒಪ್ಪಿಗೆ

ಪ್ರಧಾನ ಮಂತ್ರಿ ಸದ್ಯಕ್ಕೆ ಸೈನಿಕರೊಂದಿಗೆ ಸಂವಹನ ನಡೆಸುತ್ತಾರೆ. ನಂತರ ಗಾಯಗೊಂಡ ಸೈನಿಕರನ್ನು ಮಿಲಿಟರಿ ಆಸ್ಪತ್ರೆಯಲ್ಲಿ ಭೇಟಿಯಾಗಲಿದ್ದು, ಅವರಿಗೆ ಮನೋಸ್ಥೈರ್ಯ ತುಂಬಲಿದ್ದಾರೆ. ಮೋದಿ ಜೊತೆ ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಇದ್ದಾರೆ.

ಜೂನ್ 15 ದಂದು ಭಾರತದ ಸೇನೆ ಮತ್ತು ಚೀನಾ ನಡುವೆ ಸಂಘರ್ಷ ನಡೆದಿದ್ದು, ಈ ಸಂಘರ್ಷದಲ್ಲಿ 20 ಮಂದಿ ಭಾರತದ ಸೈನಿಕರು ಹುತಾತ್ಮರಾಗಿದ್ದರು. ಸಂಘರ್ಷದ ಬಳಿಕ ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ದೇಶಗಳ ನಡುವೆ ಸುಧೀರ್ಘ ಮಾತುಕತೆ ನಡೆಯುತ್ತಲೇ ಇವೆ.

ಮಂಗಳವಾರ ಲಡಾಕ್‍ನ ಚುಶುಲ್ ಪ್ರದೇಶದಲ್ಲಿ ಮೂರನೇ ಹಂತದ ಮಿಲಿಟರಿ ಮಾತುಕತೆ ನಡೆದಿದೆ. ಬೆಳಗ್ಗೆ 10.30ಕ್ಕೆ ಆರಂಭವಾಗಿದ್ದ ಸಭೆ ರಾತ್ರಿ ಹನ್ನೊಂದು ಗಂಟೆವರೆಗೂ ನಡೆದಿತ್ತು. ಸುಧೀರ್ಘ 11 ಗಂಟೆಗಳ ಬಳಿಕ ಭಾರತದ ಆಕ್ರಮಿತ ಪ್ರದೇಶ ಹಾಗೂ ವಾಸ್ತವ ಗಡಿ ರೇಖೆಯಿಂದ ಹಿಂದೆ ಸರಿಯಲು ಚೀನಾ ಸೇನೆ ಒಪ್ಪಿಕೊಂಡಿದೆ ಎಂದು ಮೂಲಗಳ ಹೇಳಿವೆ.

ಗಲ್ವಾನ್ ಕಣಿವೆಯಲ್ಲಿರುವ ಪಾಯಿಂಟ್ ನಂಬರ್ 14,15 ಹಾಗೂ 17ರಿಂದ ಸೇನೆ ಹಿಂದೆ ಪಡೆಯಲು ಹಾಗೂ ಗಡಿ ಪ್ರದೇಶ ಎಂದು ವಾದಿಸುತ್ತಿರುವ ಭಾರತದ ವಿವಾದಿತ ಪ್ರದೇಶದಿಂದಲೂ ಹಿಂದೆ ಸರಿಯಲು ಮೇಜರ್ ಜನರಲ್ ಲಿಯು ಲೀನ್ ಸಮ್ಮತಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಭಾರತ ಅಥವಾ ಚೀನಾ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

Click to comment

Leave a Reply

Your email address will not be published. Required fields are marked *