ಚಿತ್ರದುರ್ಗದಲ್ಲಿ ಕೊರೊನಾದಿಂದ ಗುಣಮುಖರಾದ 96ರ ವೃದ್ಧೆ- ಕೋವಿಡ್‍ಗೆ ಹೆದರದಂತೆ ಸಲಹೆ

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ಪಟ್ಟಣದ ವೇದಾವತಿ ನಗರದ 96 ವರ್ಷದ ವಯೋವೃದ್ಧೆ ಕೊರೊನಾ ಸೋಂಕಿನಿಂದ ಗೆದ್ದು ಬಂದ ಕರ್ನಾಟಕದ ಎರಡನೇ ಅತಿ ಹೆಚ್ಚು ವಯಸ್ಸಿನ ಮಹಿಳೆ ಎನಿಸಿದ್ದಾರೆ.

ಕೋವಿಡ್ ಎಂದರೆ ಮಾರುದೂರ ನಿಲ್ಲುವ ಈ ಸಮಯದಲ್ಲಿ ಮುನ್ನೆಚ್ಚರಿಕೆಯ ಅರಿವಿಲ್ಲದೆ ತಮ್ಮ ಮೊಮ್ಮಗನ ಪ್ರಾಥಮಿಕ ಸಂಪರ್ಕದಿಂದ ಗೋವಿಂದಮ್ಮನವರು ಕೋವಿಡ್ ಸೊಂಕಿಗೆ ತುತ್ತಾಗಿದ್ರು. ಆಗ ಚಿತ್ರದುರ್ಗ ಜಿಲ್ಲೆಯ ಆರೋಗ್ಯ ಇಲಾಖೆ ಸಿಬ್ಬಂದಿ ಆಕೆಯನ್ನು ಪರೀಕ್ಷೆಗೊಳಪಡಿಸಿ, ಪಾಸಿಟಿವ್ ದೃಢವಾದ ಬೆನ್ನಲ್ಲೇ ಚಿತ್ರದುರ್ಗದ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ಆ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ಚಿತ್ರದುರ್ಗದ ಜನರೆಲ್ಲರು ಸಹ ಕೋಟೆನಾಡಲ್ಲೂ ಕೋವಿಡ್‍ಗೆ ಮೊದಲ ಬಲಿಯೇ ಈ ಅಜ್ಜಿಯಾಗಬಹುದೆಂಬ ಆತಂಕ ಎಲ್ಲರಲ್ಲೂ ಮನೆ ಮಾಡಿತ್ತು.

- Advertisement -

ಆದರೆ ಆಸ್ಪತ್ರೆಗೆ ಬಂದಾಗಲೂ ಸಹ ಎದೆಗುಂದದ ಗೋವಿಂದಮ್ಮ, ನನಗೆ ಯಾವ ರೋಗವಿಲ್ಲ. ಆದರೂ ಯಾಕೆ ಸರ್ಕಾರದ ದುಡ್ಡು ಖರ್ಚು ಮಾಡುತ್ತಾರಪ್ಪೋ..? ಇವತ್ತೋ, ನಾಳೆ ಹೋಗೋ ಜೀವಕ್ಕೆ ಅಂತ ಹೇಳಿದ್ರು. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳೆಲ್ಲರೂ ಈ ಅಜ್ಜಿ ಮಾತುಗಳನ್ನ ಕೇಳಿ ತುಸು ನಕ್ಕು ಸುಮ್ಮನಾಗಿದ್ರು. ಆಗ ವೈದ್ಯರ ಸಲಹೆ ಮತ್ತು ವಾಸ್ತವ ಪರಿಸ್ಥಿತಿಯನ್ನು ಅರ್ಥೈಸಿಕೊಂಡ ಈ ಅಜ್ಜಿ, ನಿರಂತರವಾಗಿ ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಈ ವೃದ್ಧಾಪ್ಯದಲ್ಲೂ ಹರೆಯದ ಯುವತಿಯರಂತೆ ಪಟಪಟ ಮಾತನಾಡ್ತಾ, ಯುವಪಡೆ ನಾಚುವಂತೆ ಓಡಾಡ್ತಾ ಎಲ್ಲರ ಮನ ಗೆದ್ದಿದ್ದರು. ಹೀಗಾಗಿ ಕೋವಿಡ್ ಆಸ್ಪತ್ರೆಯಲ್ಲಿ ಸಿಬ್ಬಂದಿಗೆ ಗೋವಿಂದಮ್ಮ ಅಚ್ಚುಮೆಚ್ಚೆನಿಸಿದ್ರು.

- Advertisement -

ಮನೆಯಿಂದ ಕೋವಿಡ್ ಆಸ್ಪತ್ರೆಗೆ ಬರುವಾಗ ಸಹ ನಿರ್ಭಯವಾಗಿ ಧಾವಿಸಿದ್ದ ಗೋವಿಂದಮ್ಮ, ಚಿಕಿತ್ಸೆಗೆ ಸ್ಪಂದಿಸಿದ್ರು. ಪಕ್ಕಾ ನಾಗರೀಕಳಂತೆ ವರ್ತಿಸಿತ್ತಾ, ವೈದ್ಯರು, ದಾದಿಯರ ಮೆಚ್ಚಿನ ರೋಗಿ ಎನಿಸಿದ್ರು. ಹೀಗಾಗಿ ಆಸ್ಪತ್ರೆ ಸಿಬ್ಬಂದಿ ಸಹ ಇವರನ್ನು ಚೆನ್ನಾಗಿ ಆರೈಕೆ ಮಾಡಿದ್ದರು. ಹೀಗಾಗಿ 96 ವರ್ಷದ ವಯಸ್ಸಲ್ಲೂ ಕೋವಿಡ್ ಸೋಂಕಿನಿಂದ ಕೇವಲ ಒಂದು ವಾರದಲ್ಲೇ ಗುಣಮುಖರಾಗಿ ಗೆದ್ದು ಬಂದಿದ್ದಾರೆ. ಗೋವಿಂದಮ್ಮಗೆ 96 ವರ್ಷ ವಯಸ್ಸಾದರು ಕೂಡ ಸ್ವಲ್ಪ ನಡುಕ, ಅಸ್ವಸ್ಥತೆ, ಬಿಪಿ, ಶುಗರ್ ಸೇರಿದಂತೆ ಯಾವುದೇ ವಯೋಸಹಜ ಕಾಯಿಲೆ ಸಹ ಇಲ್ಲ. ಹೀಗಾಗಿ ಈ ಮಹಾತಾಯಿ ಇಂದಿನ ಸಮಾಜದ ನಾರಿಮಣಿಯರಿಗೆ ಮಾಡೆಲ್ ಎನಿಸಿದ್ದಾರೆ.

ಇವರ ಬಗ್ಗೆ ಚಿತ್ರದುರ್ಗ ಜಿಲ್ಲೆಯ ಡಿಹೆಚ್ ಓ ಡಾ, ಪಾಲಾಕ್ಷ ಹಾಗೂ ಜಿಲ್ಲಾ ಸರ್ಜನ್ ಡಾ. ಬಸವರಾಜ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೋವಿಡ್ ಬಂದಂತಹ ಎಷ್ಟೋ ಜನ ಯುವಕರು ಹಾಗೂ ಯುವತಿಯರು ಅವರ ರೋಗ ನಿರೋಧಕ ಶಕ್ತಿ ಬಗ್ಗೆ ಅನುಮಾನ ಹೊಂದಿರುತ್ತಾರೆ. ಆದರೆ ಈ ಮಹಾತಾಯಿ ಗೋವಿಂದಮ್ಮನವರಲ್ಲಿ ಮಾತ್ರ ಈ ವೃದ್ಧಾಪ್ಯದಲ್ಲೂ ಕೂಡ ಸ್ವಲ್ಪವೂ ಭಯ, ಆತಂಕ ಹಾಗೂ ಗಾಬರಿಯನ್ನ ನಾವು ಕಂಡಿಲ್ಲ ಅಂತಾರೆ. ಅಲ್ಲದೆ ಈ ಆಹಾರ ಪದ್ಧತಿ ಹಾಗೂ ಹವಾಮಾನಕ್ಕೆ ಅನುಗುಣವಾಗಿ ಹಲವರು ವಿವಿಧ ರೋಗಗಳಿಗೆ ತುತ್ತಾಗೋದು ಸಾಮಾನ್ಯವಾಗಿದೆ. ಆದರೆ ಈ ಮಹಿಳೆ ಮಾತ್ರ ನೂರರ ಗಡಿಯ ಸಮೀಪದಲ್ಲಿದ್ದರು ಸಹ ಚಿಕ್ಕ ಮಕ್ಕಳಂತೆ ಲವಲವಿಕೆಯಿಂದ ಇರೋದು ಸೋಂಕಿತರ ಆತ್ಮಬಲ ಹೆಚ್ಚಿಸಿದೆ.

ಈ ವೃದ್ದೆಯಷ್ಟೇ ಅಲ್ಲದೇ ಇವರ ಮನೆಯಲ್ಲೇ ಒಂಬತ್ತು ಜನರಿಗೆ ಸೋಂಕು ತಗುಲಿದೆ. ಆದರೆ ಎಲ್ಲರಿಗೂ ಮುನ್ನ ಗುಣಮುಖವಾದ ಗೋವಿಂದಮ್ಮ ಜುಲೈ 6 ಸೋಮವಾರ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅವರೊಂದಿಗೆ ಸೊಸೆಯಾದ ನಾಗರತ್ನಮ್ಮ ಸಹ ಬಿಡುಗಡೆಯಾಗಿದ್ದಾರೆ. ಇನ್ನುಳಿದವರ ವರದಿ ಸಹ ನೆಗೆಟಿವ್ ಬಂದಿದೆ. ಬಿಡುಗಡೆಯಾದ ವೇಳೆ ಅಂಬುಲೆನ್ಸ್ ನಲ್ಲಿ ಖುಷಿಯಿಂದ ಮನೆಗೆ ಹೊರಟ ಗೋವಿಂದಮ್ಮಜ್ಜಿನ ಮಾತನಾಡಿಸಿದಾಗ, ಕೊರೊನಾ ಬಂತು ಅಂತ ಭಯ ಪಡಬೇಡಿ. ಯಾಕೆಂದರೆ ನನಗಂತೂ ಭಯವಿರಲಿಲ್ಲ. ಈ ಭೂಮಿ ಬಿಟ್ಟು ಎಂದಾದರು ಒಂದು ದಿನ ಹೋಗುವ ಜೀವದ ಮೇಲೆ ಭಯವೇಕೆ ಅಂತ ಪ್ರಶ್ನಿಸಿದರು. ಜೊತೆಗೆ ಕೊರೊನಾ ಸೋಂಕು ದೃಢವಾಗಿದೆ ಅಂತ ಭಯಪಡಬೇಡಿ. ಇದೇನು ಅಂತ ವಾಸಿಯಾಗದ ರೋಗವಲ್ಲ. ಹೀಗಾಗಿ ಮುಂಬರುವ ಸೋಂಕಿತರು ಯಾರು ಕೂಡ ಭಯಪಡಬೇಡಿ ಎಂದು ಕಿವಿ ಮಾತು ಹೇಳಿದರು.

ಇಹಲೋಕದ ಅಂಚಿನಲ್ಲಿರುವ ನನ್ನಂತವಳೇ ಕೊರೊನಾ ಗೆದ್ದಿರುವಾಗ ನಿಮಗ್ಯಾಕೆ ಆತಂಕ ಅಂತ ಜಾಗೃತಿ ಮೂಡಿಸುವ ಮಾದರಿಯಲ್ಲಿ ಮಾತನಾಡಿ, ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದರು. ಒಟ್ಟಾರೆ 96 ವರ್ಷ ವಯಸ್ಸಾದರು ಮಗುವಿನಂತೆ ಮುಗ್ಧ ಮನಸುಳ್ಳ ಗೋವಿಂದಮ್ಮ ಕೊರೊನಾ ಬಂದಿದೆಯೆಂದು ಚಿಂತಿಸದೇ ನಿರ್ಭಯವಾಗಿ, ವೈದ್ಯರ ಸಲಹೆ, ಸೂಚನೆ ಹಾಗೂ ಚಿಕಿತ್ಸೆ ಪಡೆದಿದ್ದಾರೆ. ಈ ಮೂಲಕ ವಯಸ್ಸಾದವರಿಗೆ ಕೊರೊನಾ ಬಂದರೆ ಗುಣಮುಖರಾಗಲ್ಲ ಎಂಬ ಭಾವಕ್ಕೆ ಇತಿಶ್ರೀ ಹಾಡಿದ್ದಾರೆ.

ಹಾಗೆಯೇ ಸೋಂಕು ತಗುಲಿದೆ ಅಂತವರ ಮನಸಲ್ಲೇ ಕೊರಗಿ ಅರ್ಧ ಜೀವ ಬಿಡುವ ಸಣ್ಣಹೃದಯದವರಿಗೆ ಈ ಗೋವಿಂದಮ್ಮ ತನ್ನ 96 ನೇವಯಸ್ಸಲ್ಲೂ ಕೊರೊನಾ ಸೋಂಕನ್ನು ಗೆದ್ದು ಬಂದು ಅವರ ಆತಂಕ ಶಮನಗೊಳಿಸುವಲ್ಲಿ ಪ್ರಥಮರೆನಿಸಿದ್ದಾರೆ. ಜೊತೆಗೆ ಕೊರೊನಾ ಬರುವಾಗ ವಯಸ್ಸು, ಜಾತಿ ಮತ್ತು ಜನರ ಅಂತಸ್ತು ಯಾವುದನ್ನು ಲೆಕ್ಕಿಸಲ್ಲ. ಕೊರೊನಾದಿಂದ ಪಾರಾಗಲು ರೋಗ ನಿರೋಧಕ ಶಕ್ತಿಯೊಂದಷ್ಟೇ ಮುಖ್ಯ ಎಂಬುದನ್ನು ಸಾಬೀತು ಮಾಡಿದ್ದಾರೆ.

- Advertisement -