ಬೆಂಗಳೂರು: ಕೊರೊನಾ ಸೋಂಕಿನ ನಿಯಂತ್ರಣಕ್ಕೆ ತರಲು ಸರ್ಕಾರ ಹೆಣಗಾಡುತ್ತಿದೆ. ಇದರ ನಡುವೆಯೇ ಆರ್ಥಿಕ ಸಂಕಷ್ಟ ಸುಧಾರಣೆ ಮಾಡಲು ಸಾಲವನ್ನು ಪಡೆಯಲು ಮುಂದಾಗಿದೆ. ಇದೇ ವೇಳೆ ರಾಜ್ಯ ಸರ್ಕಾರಕ್ಕೆ ಮತ್ತೊಂದು ಕೋವಿಡ್ ಆರ್ಥಿಕ ಹೊರೆ ಎದುರಾಗಿದ್ದು, ಕೋವಿಡ್ ಸೋಂಕಿಗೆ ತುತ್ತಾಗಿ ಗುಣಮುಖರಾಗಿರುವ ಜನಪ್ರತಿನಿಧಿಗಳ ಮತ್ತು ಕುಟುಂಬಸ್ಥರ ಆಸ್ಪತ್ರೆ ಬಿಲ್ ವೆಚ್ಚದ ಹೊರೆಯೂ ಸರ್ಕಾರ ಮೇಲೆ ಬಿದ್ದಿದೆ.
Advertisement
ಕೊರೊನಾ ಸೋಂಕಿಗೆ ತುತ್ತಾಗಿರುವ ರಾಜ್ಯದ ಹಲವು ಜನ ಪ್ರತಿನಿಧಿಗಳು, ಅವರ ಕುಟುಂಬಸ್ಥರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈ ವೇಳೆ ಚಿಕಿತ್ಸೆ ಪಡೆದ ಆಸ್ಪತ್ರೆಯ ವೆಚ್ಚದ ಬಿಲ್ ಮರುಪಾವತಿಗೆ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳು ಮತ್ತು ಕುಟುಂಬಸ್ಥರ ಕೋವಿಡ್ ಬಿಲ್ ಲಕ್ಷ ಲಕ್ಷ ಆಗಿದ್ದು, ಆಸ್ಪತ್ರೆ ವೆಚ್ಚದ ಬಿಲ್ ಗಳನ್ನು ವಿಧಾನಸಭೆ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಈ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಅದರ ಮಾಹಿತಿ ಇಂತಿದೆ.
Advertisement
Advertisement
1) ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕರ ಅನಿಲ್ ಬೆನಕೆ ಅವರು ಸರ್ಕಾರಕ್ಕೆ ತಮ್ಮ ಹಾಗೂ ಕುಟುಂಬ ಚಿಕಿತ್ಸೆ ಪಡೆದ 8,55,856 ರೂ.ಗಳ ಬಿಲ್ ಅನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಇದರಲ್ಲಿ ಅನಿಲ್ ಬೆನಕೆ ಅವರ ಚಿಕಿತ್ಸಾ ವೆಚ್ಚ 1,92,000 ರೂ., ಅವರ ಪತ್ನಿ ಮನಿಷಾ ಎಸ್ 1,35,500 ರೂ., ಬೆನಕೆ ಅವರ ಪುತ್ರಿಯರಾದ ಅಂಜಲಿ ಅನಿಲ್ ಬೆನಕೆ ಮತ್ತು ಲೀಲಾ ಅನಿಲ್ ಬೆನಕೆ ಅವರ ಚಿಕಿತ್ಸಾ ವೆಚ್ಚ ತಲಾ 1,35,500 ರೂ., ಅನಿಲ್ ಬೆನಕೆ ಅವರ ತಂದೆ ಶೆಟ್ಟುಪ್ಪಾ ಸುಬ್ಬರಾವ್ ಬೆನಕೆ ಮತ್ತು ತಾಯಿ ಪಾರ್ವತಿ ಕಟ್ಟುಪ್ಪಾ ಬೆನಕೆ ಅವರ ಚಿಕಿತ್ಸಾ ವೆಚ್ಚ ಕ್ರಮವಾಗಿ 1,27,824 ರೂ., 1,29,532 ರೂ. ಸೇರಿದೆ.
Advertisement
2)ಕೊಪ್ಪಳ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು 2,36,021 ರೂ. ಮೊತ್ತದ ಬಿಲ್ಅನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ರಾಘವೇಂದ್ರ ಹಿಟ್ನಾಳ್ ಅವರದ್ದು 1,01,141 ರೂ,. ಶಾಸಕರ ಮಗ ಸುದರ್ಶನ ಮತ್ತು ಪುತ್ರಿ ವಿಜಯಶ್ರೀ ಅವರ ಚಿಕಿತ್ಸಾ ವೆಚ್ಚ ಕ್ರಮವಾಗಿ 73,301 ರೂ., 61,579 ರೂ. ಸೇರಿದೆ.
3)ರಾಯಭಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅವರು 3,07,113 ರೂ., ಮೊತ್ತದ ಬಿಲ್ಅನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಶಾಸಕರ ಚಿಕಿತ್ಸಾ ವೆಚ್ಚ 1,52,959 ರೂ., ಶಾಸಕರ ಪತ್ನಿ ಸುಶೀಲಾ ಡಿ.ಐಹೊಳೆ ಅವರ ಚಿಕಿತ್ಸಾ ವೆಚ್ಚ 1,54,154 ರೂ. ಸೇರಿದೆ.
4)ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಅವರ ಚಿಕಿತ್ಸಾ ವೆಚ್ಚ 2,29,654 ರೂ. ಮೊತ್ತದ ಬಿಲ್ಅನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.
5)ಕಲಘಟ್ಟಗಿ ಬಿಜೆಪಿ ಶಾಸಕ ಸಿಎಂ ನಿಂಬಣ್ಣನವರ್ ಅವರು 2,91,045 ರೂ. ಮೊತ್ತದ ಆಸ್ಪತ್ರೆಯ ಚಿಕಿತ್ಸಾ ಬಿಲ್ಅನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ.
6)ಭದ್ರಾವತಿ ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್ವರ್ ಮತ್ತು ಕುಟುಂಬದ ಚಿಕಿತ್ಸಾ ವೆಚ್ಚ 5,11,172 ರೂ. ಮೊತ್ತದ ಬಿಲ್ಅನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಇದರಲ್ಲಿ ಅವರ ಚಿಕಿತ್ಸಾ ವೆಚ್ಚ 2,99,336 ರೂ., ಪತ್ನಿ ಕಾವ್ಯ ಕೊನೆರಿರಾ ಅವರ ಚಿಕಿತ್ಸಾ ವೆಚ್ಚ 2,12,376 ರೂ. ಸೇರಿದೆ.
7)ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಅವರು ತಮ್ಮ ಚಿಕಿತ್ಸೆಯ 1,07,112 ರೂ. ಮೊತ್ತದ ಆಸ್ಪತ್ರೆಯ ಬಿಲ್ಅನ್ನು ಮರುಪಾವತಿ ಮಾಡುವಂತೆ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ.
8)ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಅವರ ಪತ್ನಿ ಗೀತಾ ಜೆಆರ್ ಅವರ ಒಟ್ಟು 2,24,279 ರೂ. ಮೊತ್ತದ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಬಿಲ್ಅನ್ನು ಮರುಪಾವತಿ ಮಾಡುವಂತೆ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ.
9)ಗುರುಮಿಠ್ಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ್ ಅವರು ಒಟ್ಟು 5,52,242 ರೂ. ಮೊತ್ತದ ಬಿಲ್ಅನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಶಾಸಕರ ಚಿಕಿತ್ಸೆ 3,29,359 ರೂ. ಮತ್ತು ಶಾಸಕ ಪತ್ನಿ ಕಾಂತಮ್ಮ ಅವರ ಚಿಕಿತ್ಸೆಯ 2,22,883 ರೂ. ಸೇರಿದೆ.
10)ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ಒಟ್ಟು 2,29,247 ರೂ. ಮೊತ್ತದ ಬಿಲ್ಅನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ.
ನಿಯಮಗಳ ಅನ್ವಯ ಶಾಸಕರು ಹಾಗೂ ಅವರ ಕುಟುಂಬಸ್ಥರು ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆದರೇ ಸರ್ಕಾರ ಆ ಚಿಕಿತ್ಸಾ ಮೊತ್ತವನ್ನು ಮರುಪಾವತಿ ಮಾಡಲು ಅವಕಾಶವಿದೆ. ಆದರೆ ಕೊರೊನಾ ಸೋಂಕಿನ ವಿಚಾರದಲ್ಲಿ ಸರ್ಕಾರ ಕೆಲ ನಿಯಮಗಳನ್ನು ಮಾಡಿದ್ದು, ಸೋಂಕಿಗೆ ತುತ್ತಾದ ವ್ಯಕ್ತಿಗೆ ಚಿಕಿತ್ಸೆ ಬೆಂಗಳೂರು ನಗರದಲ್ಲಿ ಬಿಬಿಎಂಪಿ ಹಾಗೂ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಗಮನಿಸಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೇ ಮಾತ್ರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಈ ಮೊತ್ತವನ್ನು ಸರ್ಕಾರವೇ ಬರಿಸುತ್ತದೆ. ಆದರೆ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಸೂಚನೆ ನೀಡಿದರೆ ಉಚಿತ ಚಿಕಿತ್ಸೆಯನ್ನು ನೀಡುತ್ತದೆ. ಈ ನಿಯಮಗಳ ಅನ್ವಯ ಜನಪ್ರತಿನಿಧಿಗಳು ಸ್ವತಃ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ಸರ್ಕಾರವನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಿಲ್ ಮೊತ್ತವನ್ನು ಮರುಪಾವತಿ ಮಾಡುವಂತೆ ಸೂಚಿಸುವುದು ಎಷ್ಟು ಸರಿ ಎಂಬುವುದು ಪ್ರಶ್ನೆಯಾಗಿದೆ.
ಸದ್ಯ ಶಾಸಕರಾದ ದುರ್ಯೋಧನ ಐಹೊಳೆ, ಟಿ.ಡಿ.ರಾಜೇಗೌಡ, ರಾಘವೇಂದ್ರ ಹಿಟ್ನಾಳ್, ಸುರೇಶ್ಗೌಡ, ಸಿ.ಎಂ. ನಿಂಬಣ್ಣನವರ್, ನಾಗನಗೌಡ ಕಂದಕೂರ್, ಕೆ.ಪೂರ್ಣಿಮಾ ಶ್ರೀನಿವಾಸ್, ಬೆಳ್ಳಿ ಪ್ರಕಾಶ್, ಅನಿಲ್ ಬೆನಕೆ, ಬಿ.ಕೆ.ಸಂಗಮೇಶ್ವರ್ ರ ಕೋವಿಡ್ ಚಿಕಿತ್ಸಾ ಬಿಲ್ ಗಳನ್ನು ಕೊರೊನಾ ಚಿಕಿತ್ಸಾ ವೆಚ್ಚದ ಮರುಪಾವತಿಗಾಗಿ ವಿಧಾನಸಭೆ ಸಚಿವಾಲಯದ ಮುಂದೆ ಅರ್ಜಿ ಸಲ್ಲಿಸಲಾಗಿದೆ. ಒಟ್ಟು 35,44,281 ರೂಪಾಯಿ ಚಿಕಿತ್ಸಾ ವೆಚ್ಚದ ಮೊತ್ತವನ್ನು ಮರುಪಾವತಿಸುವಂತೆ ಮನವಿ ಮಾಡಲಾಗಿದೆ. 10 ಶಾಸಕರು ಸಲ್ಲಿಸಿರುವ ಚಿಕಿತ್ಸಾ ವೆಚ್ಚದ ಬಿಲ್ನ್ನು ವಿಧಾನಸಭೆ ಸಚಿವಾಲಯವೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ನಿರ್ದೇಶನಾಲಯಕ್ಕೆ ಕಳುಹಿಸಿದೆ.