ನವದೆಹಲಿ: ನ್ಯಾಯಂಗ ನಿಂದನೆ ಪ್ರಕರಣದಲ್ಲಿ ದೋಷಿಯಾಗಿರುವ ವಕೀಲ ಪ್ರಶಾಂತ್ ಭೂಷಣ್ಗೆ ಶಿಕ್ಷೆಯ ಪ್ರಮಾಣ ಪ್ರಕಟಿಸುವ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪೂರ್ಣಗೊಳಿಸಿದ್ದು, ಪ್ರಕರಣವನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಿದೆ.
Advertisement
ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾದ ಹಿನ್ನೆಲೆ ಶಿಕ್ಷೆ ಪ್ರಮಾಣ ಪ್ರಕಟಿಸುವ ಕುರಿತು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಾಂಗದ ವಿರುದ್ಧ ಟ್ವೀಟ್ ಮಾಡಿರುವ ಪ್ರಶಾಂತ್ ಭೂಷಣ್ ಸರ್ವೋಚ್ಛ ನ್ಯಾಯಾಲಯದ ಕ್ಷಮೆಯಾಚಿಸಲು ಯಾಕೆ ಹಿಂಜರಿಯುತ್ತಿದ್ದಾರೆ ಎಂದು ಕೋರ್ಟ್ ಪ್ರಶ್ನಿಸಿದೆ.
Advertisement
ಕ್ಷಮೆ ಕೇಳುವುದರಲ್ಲಿ ತಪ್ಪೇನಿದೆ? ಈ ಪದ ತುಂಬಾ ಕೆಟ್ಟದಾಗಿದೆಯೇ? ಎಂದು ನ್ಯಾಯಾಧೀಶರಾದ ಅರುಣ್ ಮಿಶ್ರಾ, ಬಿ.ಆರ್.ಗವಾಯಿ ಹಾಗೂ ಕೃಷ್ಣ ಮುರಾರಿ ಅವರಿದ್ದ ತ್ರಿ ಸದಸ್ಯ ಪೀಠ ಪ್ರಶಾಂತ್ ಭೂಷಣ್ ಅವರನ್ನು ಪ್ರಶ್ನಿಸಿದೆ. ತಾವು ಮಾಡಿದ ನ್ಯಾಯಾಂಗ ನಿಂದನೆ ಟ್ವೀಟ್ ಕುರಿತು ಕೋರ್ಟ್ ಯಾವುದೇ ಶಿಕ್ಷೆ ನೀಡಲಿ, ಅನುಭವಿಸುತ್ತೇನೆ. ಆದರೆ ಕ್ಷಮೆಯಾಚಿಸುವುದಿಲ್ಲ ಎಂದು ಪ್ರಶಾಂತ್ ಭೂಷಣ್ ಹೇಳಿದ್ದರು. ಈ ಹಿನ್ನೆಲೆ ಕೋರ್ಟ್ ಅವರಿಗೆ ಈ ಪ್ರಶ್ನೆ ಕೇಳಿದೆ.
Advertisement
Advertisement
ಊಟದ ಅವಧಿ ಮುಗಿದ ಬಳಿಕ ಸುಪ್ರೀಂ ಕೋರ್ಟ್ನ ಪೀಠವು ಪ್ರಶಾಂತ್ ಭೂಷಣ್ ಪರ ವಾದ ಮಂಡಿಸುತ್ತಿದ್ದ ಹಿರಿಯ ವಕೀಲ ರಾಜೀವ್ ಧವನ್ ಅವರ ವಾದವನ್ನು ಆಲಿಸಿತು. ಈ ವೇಳೆ ವಾದ ಮಂಡಿಸಿದ ಹಿರಿಯ ವಕೀಲ ಧವನ್, ಪ್ರಶಾಂತ್ ಭೂಷಣ್ ಅವರನ್ನು ಶಿಕ್ಷೆಗೊಳಪಡಿಸುವ ತೀರ್ಪನ್ನು ಮರುಪರಿಶೀಲಿಸಬೇಕು ಹಾಗೂ ಅವರಿಗೆ ಯಾವುದೇ ಶಿಕ್ಷೆ ವಿಧಿಸಬಾರದು. ಭೂಷಣ್ ಅವರ ಪ್ರಕರಣವನ್ನು ಮುಚ್ಚುವುದು ಮಾತ್ರವಲ್ಲ, ವಿವಾದವನ್ನೇ ಅಂತ್ಯಗೊಳಿಸುವ ಮೂಲಕ ಉತ್ತಮ ಸಂದೇಶವನ್ನು ರವಾನಿಸಬೇಕು ಎಂದು ಮನವಿ ಮಾಡಿದರು.
ಪ್ರಶಾಂತ್ ಭೂಷಣ್ ಅವರನ್ನು ಹುತಾತ್ನರನ್ನಾಗಿ ಮಾಡಬಾರದು, ಅವರು ಕೊಲೆ ಅಥವಾ ಕಳ್ಳತನದಲ್ಲಿ ದೋಷಿಯಾಗಿಲ್ಲ ಎಂದು ಧವನ್ ವಾದ ಮಂಡಿಸಿದರು. ಅಲ್ಲದೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರ ವಾದವನ್ನು ಖಂಡಿಸಿದ ಧವನ್, ಇದು ಅತಿಯಾಯಿತು ಎಂದು ಉತ್ತರಿಸಿದರು.
ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಭೂಷಣ್ ಕ್ಷಮೆಯಾಚಿಸಲು ನಿರಾಕರಿಸಿದ ನಂತರವೂ ತಮ್ಮ ಅಫಿಡೆವಿಟ್ನಲ್ಲಿ ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬುದು ಸುಪ್ರೀಂ ಕೋರ್ಟ್ ಗಮನಿಸಿದೆ. ನ್ಯಾಯಾಂಗ ನಿಂದನೆ ಕುರಿತು ಮಾಡಿದ ಟ್ವೀಟ್ಗಳಿಗೆ ಸಂಬಂಧಿಸಿದಂತೆ ಕ್ಷಮೆಯಾಚಿಸುವ ನಿಲುವಿನ ಕುರಿತು ಯೋಚಿಸುವಂತೆ ಭೂಷಣ್ ಅವರಿಗೆ ಕೋರ್ಟ್ 30 ನಿಮಿಷಗಳ ಕಾಲಾವಕಾಶ ನೀಡಿತು.
ಇದಾದ ಬಳಿಕವೂ ಧವನ್ ವಾದ ಮುಂದುವರಿಸಿ, ಭೂಷಣ್ ಅವರಿಗೆ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಖಾರವಾಗಿ ಪ್ರಶ್ನಿಸಿದ ನ್ಯಾಯಪೀಠ, ಸುಪ್ರೀಂ ಕೋರ್ಟ್ ಕುಸಿದಿದೆ ಎಂದು ಪ್ರಶಾಂತ್ ಭೂಷಣ್ ಹೇಳುತ್ತಾರೆ. ಇದು ಆಕ್ಷೇಪಾರ್ಹವಲ್ಲವೇ ಎಂದು ಪ್ರಶ್ನಿಸಿತು.
Supreme Court defers to September 10. the 2009 contempt case against lawyer Prashant Bhushan for his tweets against former SC judges. SC requests Chief Justice to place it before appropriate bench pic.twitter.com/a9SBcy4CyK
— ANI (@ANI) August 25, 2020
ಅದಾಗ್ಯೂ ವಾದ ಮುಂದುವರಿಸಿದ ಭೂಷಣ್ ಪರ ವಕೀಲ ಧವನ್, ಪ್ರಶಾಂತ್ ಭೂಷಣ್ ಅವರನ್ನು ಕ್ಷಮಿಸಬೇಕು. ಎಚ್ಚರಿಕೆ ನೀಡಿ ಕಳುಹಿಸಬೇಕು. ಕೋರ್ಟ್ ಇದನ್ನು ಸಹಾನುಭೂತಿ ದೃಷ್ಟಿಕೋನದಿಂದ ತೆಗೆದುಕೊಳ್ಳಬೇಕು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಆದರೆ ನ್ಯಾಯಾಲಯ ಪ್ರಶಾಂತ್ ಭೂಷಣ್ ಕ್ಷಮೆಯಾಚಿಸಬೇಕು ಎಂದು ಹೇಳಿತು. ಬಳಿಕ ಪ್ರಕರಣವನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಿತು.