Connect with us

Corona

ಕ್ವಾರಂಟೈನ್‍ನಲ್ಲಿದ್ದ ಇಬ್ಬರು ಸೇರಿ 6 ಮಂದಿಯಿಂದ ಹುಡುಗಿ ಮೇಲೆ ಗ್ಯಾಂಗ್‍ರೇಪ್

Published

on

– ರಾತ್ರಿ ತೋಟಕ್ಕೆ ಶೌಚಾಲಯಕ್ಕೆ ಹೋದಾಗ ಘಟನೆ
– ಫೋನ್ ಮಾಡಿ ನಾಲ್ವರನ್ನು ಕರೆಸಿಕೊಂಡು ಸಾಮೂಹಿಕ ಅತ್ಯಾಚಾರ

ಪಾಟ್ನಾ: 18 ವರ್ಷದ ಹುಡುಗಿಯ ಮೇಲೆ ಇಬ್ಬರು ವಲಸೆ ಕಾರ್ಮಿಕರು ಸೇರಿದಂತ ಆರು ಮಂದಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ದಾವತ್ ಪೊಲೀಸ್ ಠಾಣೆಯ ಪ್ರಾದೇಶಿಕ ವ್ಯಾಪ್ತಿಯಲ್ಲಿ ಬುಧವಾರ ನಡೆದಿದ್ದು, ರಾಜಕೀಯ ಒತ್ತಡದಿಂದಾಗಿ ಪೊಲೀಸರು ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದರು. ಆದರೆ ಸಂತ್ರಸ್ತೆಯ ಕುಟುಂಬದವರು ಪ್ರತಿಭಟನೆ ಮಾಡಿದ ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ದೂರಿನಲ್ಲಿ ಆರೋಪಿಗಳನ್ನು ವಿಜಯ್ ಯಾದವ್ (20), ಸುರೇಶ್ ಯಾದವ್ (22), ಮುಖೇಶ್ ಯಾದವ್ (21), ಚಂಚಲ್ ಯಾದವ್ (22), ಅಮಿತ್ ಪಾಸ್ವಾನ್ (18) ಮತ್ತು ಚುಲ್ಲಿ ಪಾಸ್ವಾನ್ (18) ಎಂದು ಉಲ್ಲೇಖಿಸಲಾಗಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ರೋಹ್ತಾಸ್ ಪೊಲೀಸ್ ವರಿಷ್ಠಾಧಿಕಾರಿ ಸತ್ಯವೀರ್ ಸಿಂಗ್ ಹೇಳಿದ್ದಾರೆ.

ಆರು ಆರೋಪಿಗಳಲ್ಲಿ ಚಂಚಲ್ ಮತ್ತು ಸುರೇಶ್ ಇಬ್ಬರನ್ನು ಬಂಧಿಸಲಾಗಿದೆ. ಇವರಿಬ್ಬರು ಕ್ವಾರಂಟೈನ್ ಕೇಂದ್ರದಲ್ಲಿ ತಂಗಿದ್ದರು. ಬುಧವಾರ ರಾತ್ರಿ ಸುಮಾರು 9.30ಕ್ಕೆ ಸಂತ್ರಸ್ತೆ ತಮ್ಮ ಮನೆಯಲ್ಲಿ ಶೌಚಾಲಯವಿಲ್ಲದ ಕಾರಣ ತೋಟಕ್ಕೆ ಹೋಗಿದ್ದಾಳೆ. ಆಗ ಇಬ್ಬರು ವಲಸೆ ಕಾರ್ಮಿಕರು ಹುಡುಗಿಯನ್ನು ನೋಡಿದ್ದು, ತಕ್ಷಣ ಬಂದು ಸಂತ್ರಸ್ತೆಯನ್ನು ಬಲವಂತವಾಗಿ ಹಿಡಿದುಕೊಂಡಿದ್ದಾರೆ. ಬಳಿಕ ಗ್ರಾಮದಲ್ಲಿದ್ದ ನಾಲ್ವರಿಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.

ಆರು ಮಂದಿ ಸೇರಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಘಟನೆಯ ನಂತರ ಸಂತ್ರಸ್ತೆ ಮನೆಗೆ ಹೋಗಿ ನಡೆದ ಘಟನೆಯನ್ನು ಕುಟುಂಬದವರ ಬಳಿ ವಿವರಿಸಿದ್ದಾಳೆ. ಆಗ ಕುಟುಂಬವು ಕ್ವಾರಂಟೈನ್ ಕೇಂದ್ರಕ್ಕೆ ಹೋಗಿ ಆರೋಪಿಗಳ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನೆ ಮಾಡಿದ್ದಾರೆ.

ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಕ್ವಾರಂಟೈನ್‍ನಲ್ಲಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳಿಂದ ಮಾದರಿಗಳನ್ನು ಸಂಗ್ರಹಿಸಿ ಕೋವಿಡ್-19 ಪರೀಕ್ಷೆಗೆ ಕಳುಹಿಸಲಾಗಿದೆ.

Click to comment

Leave a Reply

Your email address will not be published. Required fields are marked *