-ವೈದ್ಯನಿಂದ ಕಿರುಕುಳ, ಬೆದರಿಕೆ ಆರೋಪ
-ವಿದ್ಯಾರ್ಥಿನಿ ಪೋಷಕರಿಂದ ದೂರು ದಾಖಲು
ಲಕ್ನೋ: ಉತ್ತರ ಪ್ರದೇಶದ ಆಗ್ರಾದಲ್ಲಿ ಬುಧವಾರ ಬೆಳಗ್ಗೆ 25 ವರ್ಷದ ಮೆಡಿಕಲ್ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ. ಕಾಲೇಜಿನ ಅನತಿ ದೂರದಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ.
ವಿದ್ಯಾರ್ಥಿನಿ ಯೋಗಿತಾ ಗೌತಮ್ ದೆಹಲಿಯ ಶಿವಪುರಿಯ ನಿವಾಸಿಯಾಗಿದ್ದು, ಆಗ್ರಾದಲ್ಲಿ ವಾಸವಾಗಿದ್ದರು. ಯುವತಿಯ ದೇಹದ ಮೇಲೆ ಗಾಯದ ಗುರುತುಗಳು ಕಂಡು ಬಂದಿದ್ದು, ಕೊಲೆ ಎಂದು ಶಂಕಿಸಲಾಗಿದೆ. ಮಂಗಳವಾರ ರಾತ್ರಿ ಯುವತಿ ಪೋಷಕರು ಮಗಳು ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೋಷಕರು ದೂರು ದಾಖಲಿಸಿದ ಕೆಲ ಗಂಟೆಯಲ್ಲಿ ಯುವತಿ ಶವ ಪತ್ತೆಯಾಗಿದೆ.
Advertisement
Advertisement
ಕಾಲೇಜಿನ ಓರ್ವ ವೈದ್ಯ ಪುತ್ರಿಗೆ ಕಿರುಕುಳ ನೀಡುತ್ತಿದ್ದ. ಬೆದರಿಕೆ ಸಹ ಹಾಕಿದ್ದನು ಎಂದು ಯುವತಿ ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೋಷಕರ ದೂರನಿನ್ವಯ ಪೊಲೀಸರು ವೈದ್ಯನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
Advertisement
Advertisement
ಪ್ರಕರಣದ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಬಬಲೂ ಕುಮಾರ್, ಪೋಷಕರ ಪ್ರಕಾರ ಜಾಲೌನ್ ನಗರದ ವೈದ್ಯನೋರ್ವ ಮಗಳಿಗೆ ಕಿರುಕುಳ ನೀಡುತ್ತಿದ್ದ ಹಾಗೂ ಧಮ್ಕಿ ಸಹ ಹಾಕಿದ್ದನು. ಬುಧವಾರ ಬೆಳಗ್ಗೆ ದೊರೆತ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಯುವತಿಯ ಕತ್ತು ಮತ್ತು ತಲೆಯ ಭಾಗಗಳಲ್ಲಿ ಗಾಯಗಳು ಕಂಡು ಬಂದಿವೆ. ಘಟನೆಗೂ ಮುನ್ನ ಯುವತಿ ಜೊತೆ ಗಲಾಟೆ ನಡೆದಿರೋದು ಬೆಳಕಿಗೆ ಬಂದಿದೆ. ಘಟನಾ ಸ್ಥಳದ ವ್ಯಾಪ್ತಿಯ ಸಿಸಿಟಿವಿ ಫೂಟೇಜ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.