– ಕೆಲವೇ ದಿನಗಳಲ್ಲಿ ಯುವರಾಜನದ್ದೂ ಹೊರ ಬರಲಿದೆ
ಹಾವೇರಿ: ಕಾಂಗ್ರೆಸ್ ನ ಮಹಾನಾಯಕ ಮತ್ತು ಬಿಜೆಪಿಯ ಯುವರಾಜರದ್ದು ಸಿಡಿ ಉತ್ಪನ್ನ ಮಾಡುವ ಎರಡು ಫ್ಯಾಕ್ಟರಿಗಳಿವೆ. ಇದೀಗ ಹೆಸರು ಬಂದಿರುವ ಕಾಂಗ್ರೆಸ್ ನಾಯಕ ಇಂತಹ ಸಿಡಿಗಳನ್ನು ಖರೀದಿ ಮಾಡುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
Advertisement
ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ಮಾತನಾಡಿದ ಅವರು, ಕೆಲ ಹೆಣ್ಣು ಮಕ್ಕಳನ್ನು ಬಿಟ್ಟು ಬ್ಲ್ಯಾಕ್ ಮೇಲ್ ಮಾಡಿ, ಸಿಡಿ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ಸಪೋರ್ಟ್ ಮಾಡದಿದ್ದರೆ, ತೊಂದರೆ ಕೊಟ್ಟರೆ ಸಿಡಿ ಬಿಡುತ್ತೇವೆಂದು ಭಯಪಡಿಸುತ್ತಾರೆ. ಎಷ್ಟೋ ಜನ ಶಾಸಕರು ಈ ಭಯದ ವಾತಾವರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿದ್ದಾರೆ. ನಿನ್ನೆ ಸಿಡಿ ಯುವತಿ ಹೆಸರು ಹೇಳಿದವರ ಡ್ರೈವರ್ ಅವರ ಜೊತೆ ಓಡಾಡಿರೋ ಬಗ್ಗೆ ಚರ್ಚೆ ಆಗುತ್ತಿದೆ. ಈ ಬಗ್ಗೆ ನಾನು ಮೊದಲೇ ಭವಿಷ್ಯ ನುಡಿದಿದ್ದೆ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದರು.
Advertisement
Advertisement
ಬಿಜೆಪಿಯಲ್ಲೊಬ್ಬ ಯುವರಾಜ ಮತ್ತು ಕಾಂಗ್ರೆಸ್ ಮಹಾನಾಯಕ ಇಬ್ಬರೂ ಇದ್ದಾರೆಂದು ಹೇಳಿದ್ದೆ. ಈಗ ಕಾಂಗ್ರೆಸ್ ಮಹಾನಾಯಕನದ್ದು ಹೊರಬಂದಿದೆ. ಕೆಲವೇ ದಿನಗಳಲ್ಲಿ ಬಿಜೆಪಿಯ ಯುವರಾಜನದ್ದೂ ಹೊರಬರಲಿದೆ. ಈ ಸಿಡಿ ಯುವರಾಜನ ರಕ್ಷಣೆ ಮಾಡಲು ಸಿಸಿಬಿಗೆ ಕೊಟ್ಟಿದ್ದು, ಸಿಬಿಐಗೆ ಕೊಟ್ಟರೆ ಎಲ್ಲ ಕಳ್ಳರನ್ನು ಒದ್ದು ಒಳಗೆ ಹಾಕುತ್ತಾರೆ. ಇಂತಹ ಬಹಳ ಮಂದಿಯ ಸಿಡಿ ಮಾಡಿದ್ದಾರೆ. ಐಪಿಎಸ್, ಐಎಎಸ್ ಅಧಿಕಾರಿಗಳು, ವ್ಯಾಪಾರಸ್ಥರು, ಶಾಸಕರು, ಸಂಸದರ ಸಿಡಿಗಳಿವೆ. ಇವರಿಬ್ಬರೂ ಸಿಡಿ ಖರೀದಿದಾರರು. ಮೆಕ್ಕೆಜೋಳ, ಮೆಣಸಿನಕಾಯಿ ಖರೀದಿ ಮಾಡೋರ ರೀತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲೊಬ್ಬಬ್ಬರು ಸಿಡಿ ಖರೀದಿ ಮಾಡೋರಿದ್ದಾರೆ. ಬಿಜೆಪಿಯ ಉನ್ನತ ನಾಯಕನ ಸಿಡಿ ಕಾಂಗ್ರೆಸ್ ನ ಮಹಾನಾಯಕನ ಬಳಿ ಇದೆ. ಅವನನ್ನ ನೋಡಿದರೆ ಬಿಜೆಪಿ ನಾಯಕರು ಭಯಪಡ್ತಾರೆ. ಹಿಂದೆ ಆ ಮಹಾನಾಯಕನೇ ಸಿಡಿ ಇರೋ ಬಗ್ಗೆ ಹೇಳಿದ್ದಾನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
Advertisement
ರಾಜ್ಯದಲ್ಲಿ ಭ್ರಷ್ಟರದ್ದೊಂದು ಗುಂಪು, ಪ್ರಾಮಾಣಿಕ ರಾಜಕಾರಣಿಗಳದ್ದೊಂದು ಗುಂಪಿದೆ. ಎಲ್ಲ ಪಕ್ಷಗಳಲ್ಲೂ ಈ ಗುಂಪು ಇವೆ. ಸಿಎಂ ಬದಲಾವಣೆ ಆಗಲೇಬೇಕು, ಇದರ ಬಗ್ಗೆ ಬೇರೆ ಅಭಿಪ್ರಾಯವಿಲ್ಲ. ಮೇ 2 ನಂತರ ಪ್ರಧಾನಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ರಾಜ್ಯದಲ್ಲಿನ ಎಲ್ಲ ಬೆಳವಣಿಗೆಗಳನ್ನು ಪ್ರಧಾನಿ ನರೇಂದ್ರ ಮೋದಿ ಗಮನಿಸುತ್ತಿದ್ದಾರೆ. ಎಲ್ಲ ಮಾಹಿತಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರಿಗೆ ಇದೆ. ದೇಶಕ್ಕೆ, ಧರ್ಮಕ್ಕೆ ಕಷ್ಟ ಬಂದಾಗ ಭಗವಂತ ಹುಟ್ಟಿ ಬಂದಂತೆ ಮೇ 2ರ ನಂತರ ನರೇಂದ್ರ ಮೋದಿಯವರು ಕರ್ನಾಟಕದ ಬೆಳವಣಿಗೆ ನೋಡಿ ಗಟ್ಟಿಯಾದ ನಿರ್ಧಾರ ತಗೋತಾರೆ ಎಂದರು.
ಸಿಎಂ ಯಡಿಯೂರಪ್ಪ ಬಿಜೆಪಿ ಶಾಸಕರಿಗೆ ಅನುದಾನ ಕೊಡುತ್ತಿಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿ, ಜಮೀರ ಅಹ್ಮದ್ ಅವರಿಗೆ ಅನುದಾನ ಕೊಡುತ್ತಾರೆ. ನಾವು ಅನುದಾನ ಕೇಳಿದರೆ ನಮಗೆ ವಿಷ ಕುಡಿಯೋಕೆ ಹಣ ಇಲ್ಲ ಅಂತಾರೆ. ಜಮೀರ್ ಅಹ್ಮದ್ ಹಿಂದೂಗಳನ್ನ ಬೈಯ್ಯುತ್ತಾ ಓಡಾಡ್ತಾರೆ, ಅವರಿಗೆ ಅನುದಾನ ಕೊಡ್ತಾರೆ. ಯಡಿಯೂರಪ್ಪ ಅವರ ಬೀಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮರೀಸ್ವಾಮಿಗೆ ಅನುದಾನ ಕೊಡುತ್ತಾರೆ ಎಂದು ಆರೋಪಿಸಿದರು.
ಬಿಜೆಪಿಯ ಕೆಲವು ಶಾಸಕರಿಗೆ ಮಾತ್ರ ಅನುದಾನ ಕೊಡುತ್ತಾರೆ. ಬಿಜೆಪಿಯ ಒಂದೇ ಒಂದು ಶಾಸಕಾಂಗ ಪಕ್ಷದ ಸಭೆ ನಡೆದಿಲ್ಲ. ಸಿದ್ದರಾಮಯ್ಯ ಆಗಾಗ ಶಾಸಕಾಂಗ ಪಕ್ಷದ ಸಭೆ ಮಾಡುತ್ತಿದ್ದರು. ನಾವೆಲ್ಲ ಕೈ ಎತ್ತಿದ್ದಕ್ಕೆ ನೀವು ಸಿಎಂ ಆಗಿದ್ದೀರಿ, ಕಾಂಗ್ರೆಸ್, ಜೆಡಿಎಸ್ ನವರು ಕೈ ಎತ್ತಿದ್ದಕ್ಕಲ್ಲ. ಅವರ ಜೊತೆ ಇವರದು ಹೊಂದಾಣಿಕೆ ರಾಜಕಾರಣ ಇದೆ. ಶಾಸಕರು ನನ್ನ ವಿರುದ್ಧ ತಿರುಗಿ ಬಿದ್ದಿಲ್ಲ. ಒಬ್ಬ ಶಾಸಕರೂ ನನ್ನ ವಿರುದ್ಧ ಸಹಿ ಮಾಡಿಲ್ಲ. ಸಭೆಗೆ ತೆರಳಿದ ಒಬ್ಬ ಶಾಸಕರು ನನಗೆ ಹೇಳಿದ್ದಾರೆ. ಯತ್ನಾಳರು ನಮ್ಮ ಪರವಾಗಿದ್ದಾರೆ, ಅವರ ವಿರುದ್ಧ ಸಹಿ ಮಾಡೋದಿಲ್ಲ ಎಂದಿದ್ದಾರೆ. 31ರ ವರೆಗೆ ಅಧಿವೇಶವಿತ್ತು. ಸಿಡಿ ನೆಪದಲ್ಲಿ ಅಧಿವೇಶನ ಮೊಟಕು ಮಾಡಿದರು. ಇದೇನು ಒಂದು ಕುಟುಂಬದ ಸರ್ಕಾರವೇ? ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ ಮತ್ತು ಅವರ ಹೆಣ್ಣು ಮಕ್ಕಳ ಸರ್ಕಾರವೇ? ಹೀಗಾದರೆ ಪಕ್ಷ ಹೇಗೆ ಉಳಿಯಬೇಕು ಎಂದು ಖಾರವಾಗಿ ಪ್ರಶ್ನಿಸಿದರು.