Dakshina Kannada
ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತರ ದಂಡು

ಮಂಗಳೂರು: ಲಾಕ್ಡೌನ್ ಬಳಿಕ ಇಂದಿನಿಂದ ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇಂದು ಮುಂಜಾನೆಯಿಂದಲೇ ಭಕ್ತರು ದೇವಸ್ಥಾನಗಳಿಗೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಇಂದಿನಿಂದ ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ದೇವರ ದರ್ಶನಕ್ಕೆ ಪಡೆಯಲು ಅವಕಾಶ ನೀಡಿದೆ.
ಕುಕ್ಕೆ ಸುಬ್ರಹ್ಮಣ್ಯ: ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರಿಗೆ ಇಂದಿನಿಂದ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಗಾರಾಧನೆಗೆ ಪ್ರಸಿದ್ದಿ ಪಡೆದ ಕುಕ್ಕೆ ದೇಗುಲಕ್ಕೆ ಭಕ್ತರು ದರ್ಶನಕ್ಕೆ ಆಗಮಿಸುತ್ತಿದ್ದು, ಪ್ರವೇಶ ದ್ವಾರದಲ್ಲಿ ದೇಗುಲ ಸಿಬ್ಬಂದಿ ಭಕ್ತರನ್ನು ಸಾಮಾಜಿಕ ಅಂತರದ ಮೂಲಕ ಒಳ ಬಿಡುತ್ತಿದ್ದಾರೆ. ಪ್ರವೇಶಕ್ಕೂ ಮುನ್ನ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ನೀಡಲಾಗುತ್ತಿದೆ. ವಿಶೇಷ ಸೇವೆಗಳಾದ ಸರ್ಪ ಸಂಸ್ಕಾರ, ಅಶ್ಲೇಷ ಪೂಜೆ ಮತ್ತು ಛತ್ರದ ವ್ಯವಸ್ಥೆ ಇಲ್ಲ. ಮುಖ್ಯ ದ್ವಾರದಲ್ಲಿ ಗುರುತಿಸಿದಂತೆ ಅಗಮಿಸಿ ಹಿಂದಿನಿಂದ ಹೊರ ತೆರಳಲು ಈಗಾಗಲೇ ಸಿದ್ಧತೆ ಮಾಡಲಾಗಿದೆ.
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರ: ಲಾಕ್ಡೌನ್ ಬಳಿಕ ಸ್ಥಗಿತವಾಗಿದ್ದ ನಾಡಿನ ಪ್ರಸಿದ್ಧ ದೇಗುಲ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿ ಮತ್ತೆ ಭಕ್ತರಿಗಾಗಿ ತೆರದಿದೆ. ದೇವಸ್ಥಾನದ ಒಳ ಪ್ರವೇಶ ಮಾಡುವವರು ಮುಖಕ್ಕೆ ಮಾಸ್ಕ್ ಧರಿಸಿರಬೇಕು. ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಕೈಗೆ ಸ್ಯಾನಿಟೈಸರ್ ಹಾಕಿಸಿಕೊಳ್ಳಬೇಕು ಎಂಬ ಷರತುಗಳನ್ನು ಭಕ್ತರಿಗೆ ವಿಧಿಸಲಾಗಿದೆ. ಅದೇ ರೀತಿ ಅನ್ನಪೂರ್ಣ ಭೋಜನಾಲಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಅನ್ನ ಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಭಕ್ತರು ಮುಡಿ ನೀಡಲು ಹಾಗೂ ನೇತ್ರಾವತಿ ನದಿಯಲ್ಲಿ ತೀರ್ಥಸ್ನಾನಕ್ಕೂ ಅವಕಾಶ ಕಲ್ಪಿಸಲಾಗಿದೆ.
ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ: ಮಂಗಳೂರಿನ ಪುರಾಣ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ರಾಜ್ಯ ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಮುಜರಾಯಿ ಸಚಿವರು, ಬಹಳಷ್ಟು ದಿನಗಳ ನಂತರ ಕೋವಿಡ್ ನಿಂದ ಮುಚ್ಚಿದ್ದ ರಾಜ್ಯದ ಮುಜರಾಯಿ ಕ್ಷೇತ್ರಗಳನ್ನ ಕೇಂದ್ರದ ಮಾರ್ಗ ದರ್ಶನದಂತೆ ಇಂದು ತೆರೆಯಲಾಗಿದೆ. ಹಿರಿಯರು ಮತ್ತು ಮಕ್ಕಳನ್ನ ಆರೋಗ್ಯದ ದೃಷ್ಡಿಯಿಂದ ನಿರ್ಬಂಧ ಮಾಡಲಾಗಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಮೂಲಕ ದೇವರ ದರ್ಶನಕ್ಕೆ ಮಾತ್ರ ಅವಕಾಶವನ್ನು ನೀಡಲಾಗಿದೆ ಎಂಬುದಾಗಿ ತಿಳಿಸಿದರು.
