Connect with us

Corona

ಕೊರೊನಾ ಸೋಂಕಿರುವುದನ್ನು ಮುಚ್ಚಿಟ್ಟ ವರ- ಮದ್ವೆಯಾದ 5 ದಿನಕ್ಕೆ ಸಾವು

Published

on

-ಮದುವೆಗೆ ಆಗಮಿಸಿದ್ದ ನೆಂಟರಿಷ್ಟರಿಗೂ ಸೋಂಕು

ಕಾರವಾರ: ಮದುವೆ ಸಂಭ್ರಮದಲ್ಲಿ ತನಗೆ ಕೊರೊನಾ ಸೋಂಕು ಹರಡಿರುವುದನ್ನು ಮುಚ್ಚಿಟ್ಟು ಮದುವೆಯಾಗಿದ್ದ ಮದುಮಗ ವಿವಾಹ ಜರುಗಿದ 5ದಿನಕ್ಕೆ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ. ಮದುವೆ ಸಂಭ್ರಮದಲ್ಲಿದ್ದ ಮದುಮಗ ಸದ್ಯ ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ನೆಂಟರು ಹಾಗೂ ಕುಟುಂಬಕ್ಕೆ ಸೋಂಕು ಹರಡಲು ಕಾರಣನಾಗಿದ್ದಾನೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ ಭಟ್ಕಳದ 26 ವರ್ಷದ ಯುವಕ ತನ್ನ ಮದುವೆ ಸಂಭ್ರಮದಲ್ಲಿದ್ದ. ಈತನಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಇದರಿಂದ ತನ್ನ ಮದುವೆಗೆ ತೊಂದರೆಯಾಗಬಹುದು ಎಂಬ ಕಾರಣದಿಂದ ಎಲ್ಲವನ್ನೂ ಮುಚ್ಚಿಟ್ಟು ಜೂನ್ 25 ರಂದು ಭಟ್ಕಳದಲ್ಲಿ ಮದುವೆಯಾಗಿ ಮಂಗಳೂರಿನಲ್ಲಿರುವ ತನ್ನ ಮನೆಗೆ ತೆರಳಿದ್ದ. ಈ ವೇಳೆ ಸೋಂಕಿನ ತೀವ್ರತೆ ಹೆಚ್ಚಾಗಿ ಮದುವೆಯಾದ ಐದು ದಿನದಲ್ಲೇ ಸಾವನ್ನಪ್ಪಿದ್ದಾನೆ. ಅಲ್ಲದೇ ಮದುವೆ ಸಮಯದಲ್ಲಿ ಈತನ ಕುಟುಂಬದ 75 ಮತ್ತು 65 ವರ್ಷದ ವೃದ್ಧರಿಬ್ಬರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.

ವೃದ್ಧರಿಬ್ಬರಿಂದ ಸದ್ಯ ಕುಟುಂಬದ 20 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ ಒಂದು ವರ್ಷದ ಮಗುವು ಸೇರಿ 18 ವರ್ಷದ ಒಳಗಿನ 8 ಜನ ಅಪ್ರಾಪ್ತರು ಸೇರಿದ್ದಾರೆ. ಇದಲ್ಲದೇ ಈತನ ಮದುವೆಯಲ್ಲಿ ಭಾಗಿಯಾದ 70 ಜನ ಸಂಬಂಧಿಕರನ್ನು ಕ್ವಾರಂಟೈನ್ ಮಾಡಲಾಗಿದ್ದು ಇವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ.

ಕುಟುಂಬವು ಮದುವೆ ಕಾರಣದಿಂದ ಸೋಂಕಿರುವುದನ್ನು ಮುಚ್ಚಿಟ್ಟು ಹಲವು ಜನರಿಗೆ ಸೋಂಕು ತಗುಲುವಂತೆ ಮಾಡಿದೆ. ಇದಲ್ಲದೇ ಇವರ ಕುಟುಂಬದ ಇಬ್ಬರು ವೃದ್ಧರ ಸ್ಥಿತಿಯೂ ಗಂಭೀರವಾಗಿದೆ. ಈ ಎಲ್ಲಾ ಹಿನ್ನೆಲೆಯನ್ನನು ಅವಲೋಕಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಅವರು ಯುವಕನ ಕುಟುಂಬಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

ಜಿಲ್ಲೆಯ ಭಟ್ಕಳ ನಗರ ಒಂದರಲ್ಲೇ 93 ಜನ ಕೊರೊನಾ ಸೋಂಕಿತರು ಇದುವರೆಗೂ ದಾಖಲಾಗಿದ್ದಾರೆ. ಜಿಲ್ಲಾಡಳಿತ ಇದುವರೆಗೂ 1,765 ಜನರ ಗಂಟಲು ದ್ರವ ಪರೀಕ್ಷೆ ನಡೆಸಿದೆ. ಇನ್ನು 58 ಮಂದಿಯ ಸ್ಯಾಂಪಲ್ ಫಲಿತಾಂಶ ಬರಬೇಕಿದೆ.

ಭಟ್ಕಳದಲ್ಲಿ ಕಠಿಣ ಕ್ರಮ: ಘಟನೆಯಿಂದಾಗಿ ಸದ್ಯ 20 ಜನರಿಗೆ ಸೋಂಕು ತಗುಲಿದ್ದು, ಇಂದು 10ಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಪಡುವುದು ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಭಟ್ಕಳದ ಪ್ರತಿ ವಾರ್ಡಿಗೆ ಎರಡು ಫೀವರ್ ಕ್ಲಿನಿಕ್ ಸ್ಥಾಪನೆ ಮಾಡಲಾಗುತ್ತಿದೆ. ಪ್ರತಿ ದಿನ ಮಕ್ಕಳು, ಮಹಿಳೆಯರು, ವೃದ್ಧರು ಕಡ್ಡಾಯವಾಗಿ ತಮ್ಮ ವಾರ್ಡಿನಲ್ಲಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕಿದೆ. ಇಲ್ಲವಾದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಜೊತೆಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *