Connect with us

Cinema

ಓಂ: ಉಪ್ಪಿ ಮತ್ತು ರಾಜ್ ಫ್ಯಾಮಿಲಿಗೆ ಕೊಂಡಿಯಾದದ್ದು ಹೊನ್ನವಳ್ಳಿ!

Published

on

ಒಂದು ಗೆದ್ದ ಸಿನಿಮಾದ ಸುತ್ತ ಹತ್ತು ಹಲವು ಕಥೆ, ರೋಚಕ ಸಂಗತಿಗಳ ಪಕಳೆಗಳು ಚೆದುರಿಕೊಂಡಿರುತ್ತವೆ. ಅವುಗಳನ್ನು ಕಾಲ ಕಾಲಕ್ಕೆ ಬೊಗಸೆಗಿಟ್ಟುಕೊಂಡು ಸಂಭ್ರಮಿಸೋದಕ್ಕಿಂತಲೂ ಬೇರೆ ಖುಷಿಗಳು ಸಿನಿಮಾ ಪ್ರೇಮಿಗಳ ಪಾಲಿಗೆ ಸಿಗಲಿಕ್ಕಿಲ್ಲ. ಅದರಲ್ಲಿಯೂ ಅಂತಹ ಸಿನಿಮಾಗಳು ಸಿಲ್ವರ್ ಜ್ಯುಬಿಲಿಯಂಥ ಮೈಲಿಗಲ್ಲು ದಾಟಿಕೊಳ್ಳುವಂತಹ ಸಂದರ್ಭವಂತೂ ಅಂತಹ ಭಾವಗಳನ್ನು ಮತ್ತಷ್ಟು ತೀವ್ರವಾಗಿಸುತ್ತೆ. ಸದ್ಯ 1995ರಲ್ಲಿ ತೆರೆ ಕಂಡು ಕನ್ನಡ ಸಿನಿಮಾ ರಂಗದ ದಿಕ್ಕು ದೆಸೆಗಳನ್ನು ಬದಲಿಸಿದ್ದ ಓಂ ಚಿತ್ರ ಕೂಡ ಕನ್ನಡದ ಸಿನಿಮಾಸಕ್ತರ ಪಾಲಿಗೆ ಅಂಥದ್ದೊಂದು ಸಂಭ್ರಮವನ್ನು ಕೊಡಮಾಡಿದೆ.

ಇದೇ ತಿಂಗಳ 18ರಂದು ಓಂ ಬಿಡುಗಡೆಯಾಗಿ 25 ವರ್ಷ ತುಂಬುತ್ತಿರೋದು ಅದಕ್ಕೆ ಕಾರಣ. ಈ ಹೊತ್ತಿನಲ್ಲಿ ಹಿದಿರುಗಿ ನೋಡಿದರೆ, ಮಾರುಕಟ್ಟೆ, ತಾಂತ್ರಿಕತೆ ಸೇರಿದಂತೆ ಎಲ್ಲದರಲ್ಲಿಯೂ ಹಿಂದುಳಿದ ಕಾಲದಲ್ಲಿ ಈ ಸಿನಿಮಾ ಮಾಡಿದ್ದ ದಾಖಲೆಗಳ ಬಗ್ಗೆ ಯಾರಿಗಾದರೂ ಅಚ್ಚರಿ ಮತ್ತು ಹೆಮ್ಮೆಯ ಭಾವ ಮೂಡಿಕೊಳ್ಳದಿರಲು ಸಾಧ್ಯವೇ ಇಲ್ಲ. ಇಂತಹದ್ದೊಂದು ಸಿನಿಮಾ ಸಿದ್ಧಗೊಂಡಿದ್ದರ ಹಿಂದೆ ನಾನಾ ಕಥೆಗಳಿದ್ದಾವೆ. ಅದರಲ್ಲಿ ಒಂದೊಳ್ಳೆ ಕಥೆ ರೆಡಿ ಮಾಡಿಕೊಂಡು, ಅದಕ್ಕೆ ಶಿವಣ್ಣನನ್ನೇ ನಾಯಕನಾಗಿಯೂ ನಿಕ್ಕಿ ಮಾಡಿಕೊಂಡಿದ್ದ ಉಪ್ಪಿ ರಾಜ್ ಕುಟುಂಬದ ಸಂಪರ್ಕ ಸಾಧಿಸಿದ್ದು ಮತ್ತೊಂದು ರೋಚಕ ಕಥೆ!

ಅದು ಶಿವಣ್ಣ ಗೆಲುವಿನ ಓಟದಲ್ಲಿದ್ದ ಕಾಲ. ಆರಂಭದಲ್ಲಿ ಈ ಕಥೆಗೆ ನಾಯಕ ಯಾರಾಗಬೇಕೆಂಬ ಬಗ್ಗೆ ಉಪ್ಪಿ ನಾನಾ ನಿಟ್ಟಿನಲ್ಲಿ ಆಲೋಚಿಸಿದ್ದರು. ಅವರ ಮನಸಲ್ಲಿ ಒಂದಷ್ಟು ನಟರ ಚಿತ್ರಗಳೂ ಕೂಡ ಕದಲಿ ಹೋಗಿದ್ದವು. ಆದರೆ ಆ ಪಾತ್ರಕ್ಕೆ ಅವರೇ ಆಗಬೇಕೆಂಬಂತೆ ಸ್ಥಿರವಾಗಿದ್ದ ಚಿತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರದ್ದು. ಆದರೆ ಅದಕ್ಕಾಗಿ ಡಾ ರಾಜ್ ಫ್ಯಾಮಿಲಿಯನ್ನು ಭೇಟಿಯಾಗಿ ಕಥೆ ಹೇಳಿ ಒಪ್ಪಿಸುವ ಬಗೆ ಯಾವುದೆಂಬುದು ಮಾತ್ರ ಉಪ್ಪಿ ಪಾಲಿಗೆ ಯಕ್ಷಪ್ರಶ್ನೆಯಾಗುಳಿದಿತ್ತು.

ಅದಕ್ಕೆ ಯಾವ ದಾರಿಯೆಂಬ ಹುಡುಕಾಟದಲ್ಲಿದ್ದಾಗ ಉಪೇಂದ್ರ ಅವರಿಗೆ ನೆನಪಾದದ್ದು ಹಿರಿಯ ನಟ ಹೊನ್ನವಳ್ಳಿ ಕೃಷ್ಣ. ರಾಜ್ ಪಾಲಿಗೆ ಆಪ್ತ ವಲಯದಲ್ಲಿದ್ದ ಹೊನ್ನವಳ್ಳಿ ಕೃಷ್ಣರನ್ನು ಮಾತಾಡಿಸಿದರೆ ತನ್ನ ಹಾದಿ ಸುಗಮವಾದೀತೆಂಬ ಇರಾದೆಯಿಂದ ಉಪ್ಪಿ ಅವರನ್ನು ಸಂಧಿಸಿದ್ದರು. ಉಪ್ಪಿಯ ಉತ್ಸಾಹ, ಆ ಕಥೆಯ ಹೊಸತನಗಳನ್ನೆಲ್ಲ ಕಂಡ ಹೊನ್ನವಳ್ಳಿ ಕೃಷ್ಣ ಕಡೆಗೂ ಅದೊಂದು ದಿನ ಉಪ್ಪಿಯನ್ನು ಡಾ.ರಾಜ್ ಮನೆಗೆ ಕರೆದೊಯ್ದಿದ್ದರಂತೆ.

ಹಾಗೆ ಹೋದವರೇ ಹೊನ್ನವಳ್ಳಿ ಕೃಷ್ಣ ವರದಪ್ಪನವರನ್ನು ಭೇಟಿಯಾಗಿ ವಿಚಾರವನ್ನೆಲ್ಲ ತಿಳಿಸಿ ರಾಜ್‍ಕುಮಾರ್ ಅವರೊಂದಿಗೆ ಭೇಟಿಗೆ ಅವಕಾಶ ಕಲ್ಪಿಸುವಂತೆ ಕೇಳಿಕೊಂಡಿದ್ದರಂತೆ. ಕೆಲವೇ ಸಮಯದಲ್ಲಿ ಆ ಸಂದರ್ಭವೂ ಕೂಡಿ ಬಂದಿತ್ತು. ಸಾವಧಾನದಿಂದ ಕಥೆ ಕೇಳಿದ ಅಣ್ಣಾವ್ರು ಬಲು ಖುಷಿಯಿಂದ ಒಪ್ಪಿಕೊಂಡಿದ್ದರಂತೆ. ಅದರ ಬಲದಿಂದಲೇ ಉಪ್ಪಿಗೆ ಸಲೀಸಾಗಿ ಶಿವಣ್ಣನ ಕಾಲ್‍ಶೀಟ್ ಸಿಗುವಂತಾಗಿತ್ತು. ಆ ಕಥೆ ರಾಜ್‍ಕುಮಾರ್ ಅವರಿಗೆ ಅದೆಷ್ಟು ಇಷ್ಟವಾಗಿತ್ತೆಂದರೆ, ಓಂ ಆರಂಭವಾಗಿ ಕಡೇಯವರೆಗೂ ಅವರು ಅದರಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಂಡಿದ್ದರು. ಕಡೆಗೂ ರಾಜಣ್ಣ ಆ ಕಥೆಯ ಮೇಲಿಟ್ಟಿದ್ದ ನಂಬಿಕೆ ಸುಳ್ಳಾಗಲಿಲ್ಲ.

Click to comment

Leave a Reply

Your email address will not be published. Required fields are marked *