Bengaluru CityKarnatakaLatestMain Post

ಉಪಚುನಾವಣೆಯಲ್ಲಿ ಬಿಜೆಪಿ ತಂತ್ರಗಾರಿಕೆ ಚೇಂಜ್

ಬೆಂಗಳೂರು: ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರಿಸಲು ಸಕಲ ರೀತಿ ಸಿದ್ಧವಾಗುತ್ತಿದೆ. ಅಧಿವೇಶನದಲ್ಲಿ ಸಿಎಂ ಯಡಿಯೂರಪ್ಪ ಬೈ ಎಲೆಕ್ಷನ್ ನಲ್ಲಿ ಗೆಲ್ಲೋದಾಗಿ ಚಾಲೆಂಜ್ ಹಾಕಿದ್ದಾರೆ. ಹೀಗಾಗಿ ತಮ್ಮದಲ್ಲದ ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಬಿಜೆಪಿ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಎರಡು ಕ್ಷೇತ್ರಗಳಲ್ಲಿ ಚುನಾವಣಾ ತಂತ್ರಗಾರಿಕೆಯನ್ನ ಬಿಜೆಪಿ ಬದಲಿಸಿಕೊಂಡಿದ್ದು, ಈ ಕುರಿತು ಪಕ್ಷದ ಎಲ್ಲರಿಗೂ ಗುಪ್ತ ಸಂದೇಶ ರವಾನಿಸಿದೆ ಎಂದು ತಿಳಿದು ಬಂದಿದೆ.

ಹೌದು, ಎರಡು ಕ್ಷೇತ್ರಗಳ ಚುನಾವಣೆಯಲ್ಲಿ ಜೆಡಿಎಸ್ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಬೇಕು. ಕಾಂಗ್ರೆಸ್ ಪಕ್ಷ ಮತ್ತು ನಾಯಕರನ್ನ ಟಾರ್ಗೆಟ್ ಮಾಡಿ ವಾಗ್ದಾಳಿ ನಡೆಸಬೇಕು. ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ ನೇರ ಎದುರಾಳಿಯಾಗಿದ್ದು, ಹಾಗಾಗಿ ಜೆಡಿಎಸ್ ಮತ್ತು ಅವರ ಅಭ್ಯರ್ಥಿಗಳು ನಮ್ಮ ಗುರಿಯಲ್ಲ ಅನ್ನೋ ಸಂದೇಶ ಬಿಜೆಪಿ ಪಕ್ಷದೊಳಗೆ ರವಾನಿಸಿದೆ ಎನ್ನಲಾಗಿದೆ.

ರಾಜ ರಾಜೇಶ್ವರಿ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳು ಎರಡೂ ವಿಭಿನ್ನ. ಕಳೆದ ಬಾರಿ ಆರ್.ಆರ್.ನಗರದಲ್ಲಿ ಕಾಂಗ್ರೆಸ್ ನಿಂದ ಗೆದ್ದಿದ್ದ ಮುನಿರತ್ನ ಈಗ ಬಿಜೆಪಿ ಅಭ್ಯರ್ಥಿ. ಇತ್ತ ಕಾಂಗ್ರೆಸ್‍ನಿಂದ ಕುಸುಮಾ ಹನುಮಂತ್ರಾಯಪ್ಪ ಮೊದಲ ಬಾರಿಗೆ ಎಲೆಕ್ಷನ್ ಅಖಾಡಕ್ಕೆ ಧುಮುಕಿದ್ದಾರೆ. ಆದ್ರೆ ಇಲ್ಲಿ ಡಿಕೆ ಬ್ರದರ್ಸ್ ಹೆಚ್ಚು ಪ್ರಚಾರದಲ್ಲಿ ತೊಡಗಿಕೊಳ್ಳುವ ಸಾಧ್ಯತೆಗಳಿವೆ. ಇತ್ತ ಶಿರಾದಲ್ಲಿ ದಿವಂಗತ್ ಸತ್ಯನಾರಾಯಣ್ ಅವರ ಪತ್ನಿ ಅಮ್ಮಜಮ್ಮಾ ಅವರು ಅಖಾಡದಲ್ಲಿದ್ದಾರೆ. ಹಾಗಾಗಿ ಶಿರಾದಲ್ಲಿ ಅತ್ಯಂತ ಎಚ್ಚರಿಕೆಯಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಯಾವುದೇ ಕಾರಣಕ್ಕಾಗಿ ವಿವಾದಾತ್ಮಕ ಮಾತುಗಳು ಬೇಡ ಎಂದು ಬಿಜೆಪಿ ಪಕ್ಷದ ವರಿಷ್ಠರಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ ಎಂಬ ಮಾಹಿತಿ ಲಭ್ಯವಾಗಿವೆ.

ಉಪ ಚುನಾವಣೆಯಲ್ಲಿ ನೇರ ರಾಜಕೀಯ ಅಸ್ತ್ರ ಪ್ರಯೋಗ ಕಾಂಗ್ರೆಸ್ ಮೇಲೆ ಇರಬೇಕು ಎಂದು ಬಿಜೆಪಿ ಮಹಾಪ್ಲ್ಯಾನ್ ಮಾಡಿಕೊಂಡಿದೆ. ಬಿಜೆಪಿಯ ಎರಡು ಕಡೆಯ ಅಸ್ತ್ರಗಳು ವರ್ಕ್ ಔಟ್ ಆಗುತ್ತಾ? ಮತದಾರ ಪ್ರಭು ಯಾರಿಗೆ ಜೈ ಅನ್ನುತ್ತಾನೆ ಎಂಬ ಸತ್ಯ ಫಲಿತಾಂಶದ ದಿನವೇ ತಿಳಿಯಲಿದೆ.

Leave a Reply

Your email address will not be published. Required fields are marked *

Back to top button