– ಇನ್ನೂ 700 ಜನರ ವರದಿ ಬರಬೇಕಿದೆ
ಉಡುಪಿ: ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಬಂದು ಕ್ವಾರಂಟೈನ್ನಲ್ಲಿ ಇರುವವರಲ್ಲಿ ಹೆಚ್ಚು ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಕೊರೊನಾ ಸ್ಫೋಟವಾಗುತ್ತಿದೆ. ಇಂದು ಒಟ್ಟು 25 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಜನರನ್ನು ಆತಂಕಕ್ಕೆ ದೂಡಿದೆ.
ಇಂದು ಹೊಸದಾಗಿ 25 ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯ ಕೊರೊನಾ ಪೀಡಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಿಂದ ಬಂದ 21 ಜನರಿಗೆ ಇಂದು ಒಂದೇ ದಿನ ಕೊರೊನಾ ದೃಢವಾಗಿದೆ. ತೆಲಂಗಾಣದಿಂದ ಬಂದ ಮೂವರಿಗೆ, ಕೇರಳದಿಂದ ಬಂದು ಕೆಎಂಸಿ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಬ್ಬರಿಗೆ ಕೋವಿಡ್-19 ಸೋಂಕು ಇರುವುದು ಸಾಬೀತಾಗಿದೆ. ಇಂದು ಪಾಸಿಟಿವ್ ಬಂದ ಪ್ರಕರಣಗಳ ಪೈಕಿ 15 ಮಕ್ಕಳಲ್ಲಿ ಸೋಂಕು ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
Advertisement
Advertisement
ಸೋಂಕಿತರೆಲ್ಲ ಮಹಾರಾಷ್ಟ್ರದ ವಿವಿಧ ಭಾಗದವರೇ ಆಗಿದ್ದಾರೆ. ಜಿಲ್ಲೆಯಿಂದ 987 ಮಂದಿಯ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಕೇವಲ 199 ವರದಿಗಳು ಮಾತ್ರ ಜಿಲ್ಲಾಡಳಿತದ ಕೈ ಸೇರಿದೆ. ದುಬೈ ಮತ್ತು ಮಸ್ಕತ್ ನಿಂದ ವಾಪಾಸ್ಸಾದವರ ವರದಿ ಬರಲಿದ್ದು ಈಗಲೇ ಭಯ ಶುರುವಾಗಿದೆ. ಹೀಗಾಗಿ ಸುಮಾರು 700 ಜನರ ವರದಿ ಇನ್ನಷ್ಟೇ ಬರಬೇಕಿದೆ. ಹೀಗಾಗಿ ಜಿಲ್ಲಾಡಳಿತಕ್ಕೆ ಆತಂಕ ಮನೆ ಮಾಡಿದೆ.
Advertisement
ಉಡುಪಿ ಜಿಲ್ಲೆಯ ಒಟ್ಟು ಕೊರೊನಾ ಸೋಂಕಿತರ ಪೈಕಿ 33 ಜನ ಮುಂಬೈನಿಂದ ಬಂದವರು, ದುಬೈ ಮತ್ತು ಯುಎಇಯಿಂದ ಬಂದ 8, ಕೇರಳದಿಂದ ಬಂದ ಇಬ್ಬರು, ತೆಲಂಗಾಣದಿಂದ ಬಂದ 3 ಜನರಿಗೆ ಸೋಂಕು ತಗುಲಿದೆ. ಕ್ವಾರಂಟೈನ್ ಸೆಂಟರ್ನ ಸುತ್ತಲಿನ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಪಾಸಿಟಿವ್ ಬಂದ ಕ್ವಾರಂಟೈನ್ ಕೇಂದ್ರಗಳಿಗೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಿ ಈ ಭಾಗದಲ್ಲಿ ಜನರ ಓಡಾಟವನ್ನು ನಿರ್ಬಂಧಿಸಲಾಗಿದೆ.
Advertisement
ಈ ಕುರಿತು ಡಿಸಿ ಜಿ.ಜಗದೀಶ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಇಂದು ಪಾಸಿಟಿವ್ ಬಂದವರ ಪೈಕಿ ಒಬ್ಬರನ್ನು ಹೊರತುಪಡಿಸಿ ಎಲ್ಲರೂ ಕ್ವಾರಂಟೈನ್ ನಲ್ಲಿ ಇದ್ದರು. ಕೇರಳದಿಂದ ಮಣಿಪಾಲದಲ್ಲಿ ಚಿಕಿತ್ಸೆಗೆ ಬಂದ ವ್ಯಕ್ತಿಗೆ ಸೋಂಕು ತಗುಲಿದೆ. ನಮ್ಮ ಜಿಲ್ಲೆಯ ಇಬ್ಬರು ಉತ್ತರ ಕನ್ನಡ ಜಿಲ್ಲೆಯ ಕ್ವಾರಂಟೈನ್ ನಲ್ಲಿ ಇದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದರು.