Connect with us

Bengaluru City

ಇತಿಹಾಸ ಸೃಷ್ಟಿಸಿ ದೇಶಕ್ಕೆ ಮಾದರಿಯಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಸುರೇಶ್ ಕುಮಾರ್

Published

on

ಬೆಂಗಳೂರು: ಜೂನ್ 25ರಿಂದ ಜುಲೈ 3ರವರೆಗೆ ನಡೆದ 2019-20ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ವಿದ್ಯಾರ್ಥಿಗಳು, ಪೋಷಕರು, ವಿವಿಧ ಇಲಾಖೆಗಳು ಮತ್ತು ಜಿಲ್ಲಾಡಳಿತಗಳ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆದಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಆರನೇ ದಿನದ ಪರೀಕ್ಷೆಯ ನಂತರ ಶುಕ್ರವಾರ ಸಂಜೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಆರು ದಿನಗಳ ಅವಧಿಯ ಪರೀಕ್ಷೆಗಳಲ್ಲಿ ಪ್ರತಿದಿನ ಸರಾಸರಿ 7.5 ಲಕ್ಷ ವಿದ್ಯಾಥಿಗಳು ಯಾವುದೇ ಸಮಸ್ಯೆಯಿಲ್ಲದ ರೀತಿಯಲ್ಲಿ ಪರೀಕ್ಷೆಗಳನ್ನು ಧೈರ್ಯವಾಗಿ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಎದುರಿಸಿದ್ದಾರೆ ಎಂದು ಹೇಳಿದರು.

ಈಗಾಗಲೇ ಹೇಳಿದಂತೆ ನಮಗೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ನಡೆಸುವುದು ಬಹುದೊಡ್ಡ ಸವಾಲಾಗಿತ್ತು. ಅದು ನಮ್ಮ ಪ್ರತಿಷ್ಠೆಯ ಪ್ರಶ್ನೆಯಾಗದೇ ವಿದ್ಯಾರ್ಥಿಗಳ ಹಿತ ಹಾಗೂ ಸುರಕ್ಷತೆಯೇ ಮುಖ್ಯವಾಗಿತ್ತು. ಆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಾವು ಸರ್ಕಾರದ ಪ್ರಯತ್ನವಾಗಿ ಬಹು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಇದು ನನಗೆ ನಿಜಕ್ಕೂ ಹೆಮ್ಮೆ ಹಾಗೂ ಅಭಿಮಾನದ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ ಸರ್ಕಾರ ಈ ಪರೀಕ್ಷೆಗಳನ್ನು ನಡೆಸುವ ಮೂಲಕ ಒಂದು ಇತಿಹಾಸವನ್ನು ಸೃಷ್ಟಿಸಿದೆ. ನ್ಯಾಯಾಲಯಗಳಲ್ಲಿ ಪರೀಕ್ಷೆಗಳನ್ನು ರದ್ದುಪಡಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾದವು. ಆಗಲೇ ನಾನು ರಾಜ್ಯಾದ್ಯಂತ ಕೋವಿಡ್ ಸಮಯವೆಂದೂ ಲೆಕ್ಕಿಸದೇ ಸಂಚರಿಸಲು ಶುರು ಮಾಡಿದೆ. ನಾನು ಭೇಟಿ ಮಾಡಿದ ಅಸಂಖ್ಯ ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕೆ ಪರೀಕ್ಷೆ ಬೇಕು ಎಂದು ನನ್ನನ್ನು ಆಗ್ರಹಿಸಿದರು. ನಮ್ಮ ಜಿಲ್ಲೆಗಳ ಅಧಿಕಾರಿಗಳು ಎಂತಹ ಸಂದರ್ಭದಲ್ಲಿಯೂ ತಾವು ದೃತಿಗೆಡದೇ ಈ ಪರೀಕ್ಷೆಗಳನ್ನು ನಡೆಸುತ್ತೇವೆ ಎಂದು ಆತ್ಮವಿಶ್ವಾಸವನ್ನು ತೋರಿದರು. ಪುನಃ ನಾನು ಬೆಂಗಳೂರಿಗೆ ವಾಪಾಸು ಬಂದು ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡುವ ನಿಟ್ಟಿನಲ್ಲಿ ಭರವಸೆಯ ಉತ್ತರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ನಮ್ಮ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದೆ ಎಂದು ಸುರೇಶ್ ಕುಮಾರ್ ಪರೀಕ್ಷೆಗೆ ಸಂಬಂಧಿಸಿದ ವಿವಿಧ ಮಜಲುಗಳನ್ನು ವಿವರಿಸಿದರು.

ಆರೋಗ್ಯ ಇಲಾಖೆ ಕಟ್ಟುನಿಟ್ಟಾದ ಮಾರ್ಗದರ್ಶಿ ಸೂತ್ರಗಳನ್ನು ನಮಗಾಗಿ ರಚಿಸಿಕೊಟ್ಟಿತು. ಆ ಮಾರ್ಗದರ್ಶಿ ಸೂತ್ರಗಳ ಮೇಲೆ ನ್ಯಾಯಾಲಯವು ಭರವಸೆಯನ್ನಿಟ್ಟು, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿ ಪರೀಕ್ಷೆಗಳನ್ನು ನಡೆಸಲು ಅವಕಾಶ ಕೊಟ್ಟಿತು. ಅದೇ ರೀತಿ ಮುಂದಿನ ದಿನಗಳಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲೂ ಸಹ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಯಿತು. ಅಲ್ಲಿಯೂ ಸಹ ಸೂಕ್ತ ಆಕ್ಷೇಪಣಾ ಹೇಳಿಕೆಗಳನ್ನು ಸಲ್ಲಿಸಿದ ಬಳಿಕ ಸರ್ವೋಚ್ಛ ನ್ಯಾಯಾಲಯ ಪರೀಕ್ಷೆಗಳನ್ನು ನಡೆಸಲು ತನ್ನ ಹಸಿರು ನಿಶಾನೆ ತೋರಿಸಿತು ಎಂದು ಅವರು ಹೇಳಿದರು.

ನಂತರ ನಮ್ಮಲ್ಲಿ ಘಟಿಸಿದ್ದು ಇತಿಹಾಸ. ಪ್ರತಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯುವ ಸುರಕ್ಷಿತ ವಾತಾವರಣವನ್ನು ನಾವು ಕಲ್ಪಿಸಬೇಕಾಗಿತ್ತು. ಪ್ರತಿ ಪೋಷಕರಿಗೆ ತಮ್ಮ ಮಗು ತಮ್ಮ ಮನೆಯಲ್ಲಿನ ಸುರಕ್ಷಿತ ವಾತಾವರಣದಷ್ಟೇ ಪರೀಕ್ಷಾ ಕೊಠಡಿ ಸುರಕ್ಷಿತವಾಗಿರುತ್ತದೆ ಎಂಬ ಭರವಸೆ ನೀಡಬೇಕಾಗಿತ್ತು. ನಮ್ಮ ಅಧಿಕಾರಿಗಳು ಪ್ರತಿ ಸೂಕ್ಷ್ಮ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಆರೋಗ್ಯ ಇಲಾಖೆಯ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಯಾವುದೇ ಒಬ್ಬ ವಿದ್ಯಾರ್ಥಿಗೆ ತೊಂದರೆಯಾಗದ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಬೇಕಿತ್ತು. ನನ್ನ ಭರವಸೆಯನ್ನು ಅವರಾರು ಹುಸಿಗೊಳಿಸಲಿಲ್ಲ ಎಂದು ಸಚಿವರು ತಿಳಿಸಿದರು.

ಪ್ರತಿ ಪರೀಕ್ಷೆಗೆ ಸರಾಸರಿ ಶೇ. 98 ವಿದ್ಯಾರ್ಥಿಗಳು ಹಾಜರಾಗಿ ವ್ಯವಸ್ಥೆಯ ಮೇಲಿನ ಭರವಸೆಯನ್ನು ತೋರಿದ್ದಾರೆ. ನೆರೆ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪುದುಚೇರಿ, ಮಹಾರಾಷ್ಟ್ರಗಳು ಸೇರಿದಂತೆ ಬಹುಪಾಲು ರಾಜ್ಯ ಸರ್ಕಾರಗಳು ತಮ್ಮ ಮಂಡಳಿಗಳ ಪರೀಕ್ಷೆಗಳನ್ನು ಮಾಡದೇ ಹಿಂದೆ ಸರಿದವು. ನಾಡಿನ ಮಕ್ಕಳ ಹಿತ ಮತ್ತು ಅವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವರ ಇಚ್ಛೆಯಂತೆ ನಾವು ಪರೀಕ್ಷೆಗಳನ್ನು ನಡೆಸಿದ್ದೇವೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಕೋವಿಡ್ ಕಾರಣಕ್ಕೆ ನಾವು ದೂರದರ್ಶನದ ಚಂದನ ವಾಹಿನಿಯಲ್ಲಿ ನಡೆಸಿದ ಪುನರ್‌ಮನನ ಕಾರ್ಯಕ್ರಮಗಳು ಆ ವಾಹಿನಿಯ ಸಾರ್ವಕಾಲೀಕ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದವು. ಲಕ್ಷಾಂತರ ವಿದ್ಯಾರ್ಥಿಗಳು ಆ ಪ್ರಯತ್ನದ ಫಲವನ್ನು ಪಡೆದವು. ಅದೇ ರೀತಿ ಆಕಾಶವಾಣಿಯಲ್ಲಿ ಪರೀಕ್ಷಾ ಪೂರ್ವ ಸಿದ್ಧತಾ ತರಗತಿಗಳು ಬಿತ್ತರಗೊಂಡವು. ನಮ್ಮ ಮಕ್ಕಳವಾಣಿ ಯೂ-ಟ್ಯೂಬ್ ಚಾನೆಲ್‍ನಲ್ಲೂ ಸಹ ಪುನರ್‌ಮನನ ತರಗತಿಗಳು ಬಿತ್ತರಗೊಂಡು ಜನಪ್ರಿಯತೆ ಗಳಿಸಿದವು ಎಂದು ಅವರು ತಿಳಿಸಿದರು.

ಆರೋಗ್ಯ ಇಲಾಖೆ ನಿಗದಿಪಡಿಸಿದ ಮಾರ್ಗದರ್ಶಿ ಸೂತ್ರಗಳನ್ನು ಯಾವುದೇ ಒಂದು ಸಣ್ಣ ಲೋಪವಾಗದಂತೆ ಅಳವಡಿಸಿಕೊಂಡು ನಾವು  ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಕೋವಿಡ್ ಸೋಂಕಿತ 33 ವಿದ್ಯಾರ್ಥಿಗಳಿಗೆ ಪೂರ್ವಭಾವಿಯಾಗಿ ಪರೀಕ್ಷೆಯನ್ನು ನಿರಾಕರಿಸಿ ಅವರಿಗೆ ಮುಂದಿನ ಪೂರಕ ಪರೀಕ್ಷೆಗಳಲ್ಲಿ ಅವಕಾಶಗಳನ್ನು ಕಲ್ಪಿಸುವವರಿದ್ದೇವೆ ಎಂದು ತಿಳಿಸಿದರು.

ಕೃತಜ್ಞತೆ:
ಬಹು ವಿಶೇಷವೆಂದರೆ ಸುಮಾರು 7.5 ಲಕ್ಷ ವಿದ್ಯಾರ್ಥಿಗಳು ಪ್ರತಿದಿನ ಪರೀಕ್ಷೆಗಳನ್ನು ಬರೆದಿದ್ದಾರೆ. ಪರೀಕ್ಷೆಯ ಯಶಸ್ಸಿಗೆ ಸಹಕರಿಸಿ ಸಲಹೆ ಸೂಚನೆ ನೀಡಿ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಸಂಪುಟದ ಸಹೋದ್ಯೋಗಿಗಳು, ರಾಜ್ಯದ ವಿಧಾನಸಭೆ, ವಿಧಾನಪರಿಷತ್‍ನ ಎಲ್ಲ ಸದಸ್ಯರು, ವಿರೋಧ ಪಕ್ಷಕದ ನಾಯಕರು, ರಾಜ್ಯದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಜಿಲ್ಲೆಗಳ ಡಿಸಿ, ಎಸ್‌ಪಿ, ಸಿಇಒ, ಡಿಎಚ್‍ಒ, ಖಜಾನಾಧಿಕಾರಿಗಳು ಹಾಗೆಯೇ ಆಯಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸೇರಿದಂತೆ ಪ್ರತ್ಯಕ್ಷ ಹಾಗೂ ಪರೀಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸಚಿವ ಸುರೇಶ್ ಕುಮಾರ್ ಕೃತಜ್ಞತೆಗಳನ್ನು ಸಲ್ಲಿಸಿದರು.

ಎಸ್‍ಒಪಿ ಕಟ್ಟುನಿಟ್ಟಿನ ಪಾಲನೆ:
ಎಸ್‍ಒಪಿ ಪ್ರಕಾರ ಕೋವಿಡ್ ಸೋಂಕು ಇರುವ ಮನೆಗಳ ಮಕ್ಕಳಿಗೆ ಪರೀಕ್ಷೆಗೆ ಅವಕಾಶವಿರಲಿಲ್ಲ. ಅದರಂತೆ ಕೊನೆಯ ದಿನವಾದ ಇಂದು ರಾಜ್ಯದ ಹಿರಿಯ ಅಧಿಕಾರಿಯೊಬ್ಬರ ಮನೆಯಲ್ಲಿ ಒಬ್ಬರಿಗೆ ಸೋಂಕು ತಗಲಿದ್ದರಿಂದ ಇಂದು ಅವರ ಮನೆಯ ವಿದ್ಯಾರ್ಥಿಗೆ ಪರೀಕ್ಷೆ ನಿರಾಕರಿಸಲಾಯಿತು. ಈ ವಿಚಾರದಲ್ಲಿ ಕಳೆದ ಆರು ದಿನಗಳಲ್ಲಿಯೂ ಯಾವುದೇ ರೀತಿಯ ವ್ಯತ್ಯಯವಾಗದಂತೆ ನ್ಯಾಯಾಲಯಕ್ಕೆ ನೀಡಿದ ವಾಗ್ದಾನದಂತೆ ಕಟ್ಟುನಿಟ್ಟಾಗಿ ನಡೆದುಕೊಳ್ಳಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಎಲ್ಲರೂ ಒಟ್ಟಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಎಂತಹ ಸಂಕಷ್ಟದ ಸಂದರ್ಭವನ್ನೂ ಸುಲಭವಾಗಿ ದಾಟಬಹುದು ಮತ್ತು ಏನನ್ನಾದರೂ ಸಾಧಿಸಬಹುದೆನ್ನುವುದಕ್ಕೆ ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾದರಿಯಾಗಿ ನಿಂತಿದೆ ಎಂದು ಅವರು ಹೇಳಿದರು.

ಪರೀಕ್ಷೆ ಆರಂಭವಾದ ಮೇಲೆ ತಾವು ಹಲವಾರು ಜಿಲ್ಲೆಗಳ 80ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಎಲ್ಲಿಯೂ ಸಹ ನ್ಯಾಯಾಲಯಕ್ಕೆ ನೀಡಿದ ಎಸ್‍ಒಪಿಯನ್ನು ಯಾವುದೇ ಕಾರಣಕ್ಕೂ ಉಲ್ಲಂಘನೆಯಾಗಿಲ್ಲ. ಪರೀಕ್ಷಾ ಕೇಂದ್ರದ ಒಳಗೆ ಮತ್ತು ಹೊರಗೂ ಸಹ ಸಾಮಾಜಿಕ ಅಂತರವನ್ನು ಕಾಪಾಡಿ ಅತ್ಯಂತ ಸುರಕ್ಷಿತ ವಾತಾವರಣವನ್ನು ಕಾಯ್ದುಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಈ ಪರೀಕ್ಷೆಯ ಯಶಸ್ಸು ಈ ಸಂದರ್ಭದಲ್ಲೂ ಧೈರ್ಯವಾಗಿ ಬಂದು ಪರೀಕ್ಷೆ ಬರೆದ ಮಕ್ಕಳು ಮತ್ತು ನಮ್ಮ ಮೇಲೆ ಭರವಸೆ ಇಟ್ಟು ಮಕ್ಕಳನ್ನು ಆಶೀರ್ವದಿಸಿ ಕಳಿಸಿದ ಪೋಷಕರಿಗೆ ಸಲ್ಲಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಡಾಕ್ಯೂಮೆಂಟರಿ ಪ್ರದರ್ಶನ:
ಪತ್ರಿಕಾಗೋಷ್ಠಿಗೂ ಮೊದಲು ಪರೀಕ್ಷೆಯ ಕುರಿತಂತೆ ತಯಾರಿಸಲಾದ ವಿವಿಧ ಘಟನಾವಳಿಗಳ ಡಾಕ್ಯೂಮೆಂಟರಿಯನ್ನು ಪ್ರಸ್ತುತ ಪಡಿಸಲಾಯಿತು. ಈ ಪರೀಕ್ಷೆಗೆ ಶಿಕ್ಷಣ ಇಲಾಖೆ ಕೈಗೊಂಡ ಕ್ರಮಗಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಶ್ಲಾಘನೆ ವ್ಯಕ್ತಪಡಿಸಿದರು. ಹಲವಾರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಕೈಗೊಂಡ ಕ್ರಮಗಳು ಹಾಗೂ ತಾವು ಖುಷಿಯಿಂದ ಪರೀಕ್ಷೆಯಲ್ಲಿ ಪಾಲ್ಗೊಂಡ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಡಾಕ್ಯೂಮೆಂಟರಿಯಲ್ಲಿ ಸಿಎಂ ಬಿಎಸ್ ವೈ ಅವರು ವ್ಯಕ್ತಪಡಿಸಿದ ಅಭಿಪ್ರಾಯ ಇಂತಿದೆ:
ಇಡೀ ದೇಶ ಹಿಂದಿರುಗಿ ನೋಡುವ ರೀತಿಯಲ್ಲಿ ಶಿಕ್ಷಣ ಇಲಾಖೆ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯನ್ನು ನಡೆಸಿ ಸೈ ಎನಿಸಿಕೊಂಡಿದೆ. ಅತ್ಯಂತ ಸೂಕ್ಷ್ಮವಾದ ಸಾಮಾಜಿಕ ಸಂದರ್ಭದಲ್ಲಿ ಯಾವುದೇ ಸಣ್ಣ ಸಮಸ್ಯೆಗೂ ಅವಕಾಶ ನೀಡದೇ 8.5 ಲಕ್ಷ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಹಾಗೂ 6.5 ಲಕ್ಷ ಪಿಯುಸಿ ವಿದ್ಯಾರ್ಥಿಗಳು ಸುರಕ್ಷಿತವಾಗಿ ಪರೀಕ್ಷೆಯನ್ನು ಬರೆಯುವ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಮಾಡಿದೆ. ದೇಶದ ಇತಿಹಾಸ ಪುಟಗಳಲ್ಲಿ ಸೇರಿ ಹೋಗುವ ಇಂತಹುದೊಂದು ಕ್ರಾಂತಿಕಾರಕ ಕೆಲಸವನ್ನು ನಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂತ್ರಿ ಎಸ್. ಸುರೇಶ್ ಕುಮಾರ್ ಮಾಡಿ ತಮ್ಮ ವೈಯಕ್ತಿಕ ದಕ್ಷತೆ ತೋರಿಸಿದ್ದಾರೆ. ರಾಜ್ಯಾದ್ಯಂತ ಓಡಾಡಿ ಮಕ್ಕಳನ್ನು, ಪೋಷಕರನ್ನು ಅವರು ಹುರಿದುಂಬಿಸಿದ್ದಾರೆ. ಅಧಿಕಾರಿಗಳು ಜಾಗರೂಕವಾಗಿ ಕೆಲಸ ಮಾಡಲು ಪ್ರೇರೇಪಿಸಿದ್ದಾರೆ. ಸುರೇಶ್ ಕುಮಾರ್ ಅವರಿಗೆ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಇಂದಿನ ಪರೀಕ್ಷೆಯ ಅಂಕಿ-ಅಂಶಗಳು ಈ ಕೆಳಕಂಡಂತಿದೆ: 
ಏಳನೇ ದಿನವಾದ ಶುಕ್ರವಾರ ನಡೆದ ತೃತೀಯ ಭಾಷಾ ಪರೀಕ್ಷೆಗೆ ನೊಂದಾಯಿತ 7,76,251 ವಿದ್ಯಾರ್ಥಿಗಳ ಪೈಕಿ 7,61,506 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಶೇ. 98.10ರಷ್ಟು ಇಂದು ಹಾಜರಾತಿ ಇದೆ. 14,745 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. (ಕಳೆದ 2018-19ನೇ ಸಾಲಿಗೆ 7,72,071 ವಿದ್ಯಾರ್ಥಿಗಳ ಪೈಕಿ 7,62,538 ವಿದ್ಯಾರ್ಥಿಗಳು ಹಾಜರಾಗಿದ್ದು, 9533 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಶೇ. 98.76 ಹಾಜರಾತಿ ಇತ್ತು.)

ಮೊದಲ ಬಾರಿಗೆ 7,43,477 ಶಾಲಾ ವಿದ್ಯಾರ್ಥಿಗಳು ಹಾಗೂ 20,857 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಕಂಟೈನ್‍ಮೆಂಟ್ ಪ್ರದೇಶಗಳ 3911 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 863 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ ಯಾವುದೇ ವಿದ್ಯಾರ್ಥಿಗಳು ಇರುವುದಿಲ್ಲ. ಸರ್ಕಾರಿ/ಖಾಸಗಿ ವಸತಿ ನಿಲಯಗಳಲ್ಲಿ ಇದ್ದು, 1446 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳಿಂದ 639 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, 41 ವಿದ್ಯಾರ್ಥಿಗಳು ಗೈರು ಹಾಜರಿಯಾಗಿ 590 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 12,644 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು, 12,535 ವಿದ್ಯಾರ್ಥಿಗಳು ಹಾಜರಾಗಿದ್ದರೆ, 109 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ಹೋಂ ಕ್ವಾರಂಟೈನಲ್ಲಿರುವ ಹಾಗೂ ಕೋವಿಡ್ ಪಾಸಿಟೀವ್ ಎಂದು ಗುರುತಿಸಲಾದ ವಿದ್ಯಾರ್ಥಿಗಳಿಗೆ ಈಗಿನ ಪರೀಕ್ಷೆಯನ್ನು ಬರೆಯುವುದರಿಂದ ವಿನಾಯ್ತಿ ನೀಡಲಾಗಿದೆ. ಈ ಎಲ್ಲರಿಗೂ ಸಕಾರಣದ ಆಧಾರದ ಮೇಲೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗುವುದು. ಪರೀಕ್ಷಾ ಕೇಂದ್ರಕ್ಕೆ 3,212 ಬಸ್ ಹಾಗೂ ಇತರೆ ವಾಹನಗಳನ್ನು ಒಪ್ಪಂದದ ಮೇರೆಗೆ ಪಡೆದು ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ.

ಪರೀಕ್ಷಾ ಕೇಂದ್ರಗಳಿಗೆ ಭೇಟಿ:
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಆನೇಕಲ್, ಅತ್ತಿಬೆಲೆ, ದೊಮ್ಮಸಂದ್ರ, ಚಂದಾಪುರ, ಜಿಗಣಿ, ಹೆಬ್ಬಗೋಡಿ 12 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಎಲ್ಲ ವ್ಯವಸ್ಥೆಗಳನ್ನು ಗಮನಿಸಿದ್ದೇನೆ. ಎಲ್ಲ ಕಡೆ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಕ್ಕಳು ನೆಮ್ಮದಿ ಮತ್ತು ಆಹ್ಲಾದಕರ ವಾತಾವರಣದಲ್ಲಿ ಪರೀಕ್ಷೆ ಬರೆಯುತ್ತಿದ್ದುದು ಕಂಡುಬಂತು.

ಕೆಲ ಪ್ರಮುಖ ಸಂಗತಿಗಳು:
1. ಗದಗದಲ್ಲಿ ಮಕ್ಕಳನ್ನು ಮನೆಗಳಿಂದ ಪರೀಕ್ಷಾ ಕೇಂದ್ರಗಳಿಗೆ ಉಚಿತವಾಗಿ ಕರೆತರುತ್ತಿದ್ದ ಆಟೋ ಚಾಲಕರನ್ನು ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

2. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಾರ್ಗ ಮಧ್ಯೆ ಮರ ಬಿದ್ದು, ಸಂಚಾರಕ್ಕೆ ವ್ಯತ್ಯಯವಾಗಿತ್ತು. ಸುದ್ದಿ ತಿಳಿದ ಸಾಗರ ಬಿಇಒ ಮಕ್ಕಳನ್ನು ಕರೆತರಲು ತಕ್ಷಣವೇ ಸಾರಿಗೆ ವ್ಯವಸ್ಥೆ ಮಾಡಿದರು. ಹಾಗೆಯೇ ಆ ಮಾರ್ಗದ ಪರೀಕ್ಷಾ ಕೇಂದ್ರಗಳಿಗೆ ತಮ್ಮದೇ ವಾಹನದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಕಾಲದಲ್ಲಿ ತಲುಪಿಸಿದರು.

ಒಟ್ಟಾರೆಯಾಗಿ ಇಂದು 2,879 ಪರೀಕ್ಷಾ ಕೇಂದ್ರಗಳು ಮತ್ತು 330 ಬ್ಲಾಕ್ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್, ಸ್ವಯಂ ಸೇವಕರು ಅತ್ಯಂತ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಂಡು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರು ವ್ಯವಸ್ಥೆ ಮೇಲೆ ಇಟ್ಟ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ ಎಂದ ಸಚಿವರು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

 

Click to comment

Leave a Reply

Your email address will not be published. Required fields are marked *