Connect with us

Latest

ಆಸ್ಪತ್ರೆಗೆ ತೆರಳಿ ಗಾಯಗೊಂಡ ಯೋಧರಿಗೆ ಧೈರ್ಯ ತುಂಬಿದ ಮೋದಿ

Published

on

ನವದೆಹಲಿ: ಗಲ್ವಾನ್ ಘರ್ಷಣೆಯಲ್ಲಿ ಗಾಯಗೊಂಡಿದ್ದ ಭಾರತೀಯ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಧೈರ್ಯ ತುಂಬಿದ್ದಾರೆ.

ಜೂನ್ 15 ರಂದು ನಡೆದಿದ್ದ ಗಲ್ವಾನ್ ಘರ್ಷಣೆಯಲ್ಲಿ ಗಾಯಗೊಂಡಿದ್ದ ಭಾರತೀಯ ಯೋಧರಿಗೆ ಲೇಹ್‍ನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಭೇಟಿ ನೀಡಿದ್ದ ಪ್ರಧಾನಿಗಳು ಪ್ರತಿಯೊಬ್ಬ ಯೋಧರ ಬಳಿಗೆ ತೆರಳಿ ಸ್ವತಃ ಯೋಗಕ್ಷೇಮ ವಿಚಾರಿಸಿದರು. ಬಳಿಕ ಯೋಧರನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮನ್ನು ಅಗಲಿದ ಧೈರ್ಯಶಾಲಿಗಳು ಯಾವುದೇ ಕಾರಣವಿಲ್ಲದೆ ನಿರ್ಗಮಿಸಲಿಲ್ಲ. ನೀವೆಲ್ಲರೂ ಸೂಕ್ತವಾದ ಉತ್ತರವನ್ನೇ ನೀಡಿದ್ದೀರಿ. ನಾನು ನಿಮಗೆ ಮತ್ತು ನಿಮ್ಮಂತಹ ಧೈರ್ಯಶಾಲಿಗಳಿಗೆ ಜನ್ಮ ನೀಡಿದ ತಾಯಂದಿರಿಗೆ ಗೌರವ ಸಲ್ಲಿಸುತ್ತೇನೆ. ಎಲ್ಲರೂ ಬಹುಬೇಗ ಗುಣಮುಖರಾಗುತ್ತೀರಿ ಎಂದು ಭಾವಿಸುವುದಾಗಿ ಮೋದಿ ಹೇಳಿದರು.

ನಿಮ್ಮ ಧೈರ್ಯ, ನೀವು ಸುರಿಸಿರುವ ರಕ್ತ ನಮ್ಮ ಯುವಕರಿಗೆ, ದೇಶದ ಪ್ರಜೆಗಳಿಗೆ ತಲೆಮಾರುಗಳವರೆಗೂ ಸ್ಫೂರ್ತಿ ನೀಡುತ್ತದೆ. ನಮ್ಮ ದೇಶವೂ ಜಗತ್ತಿನ ಯಾವುದೇ ಶಕ್ತಿ ಎದುರು ತಲೆಬಾಗುವುದಿಲ್ಲ. ನಿಮ್ಮಂತಹ ಧೈರ್ಯಶಾಲಿಗಳ ಕಾರಣದಿಂದಾಗಿ ನಾನು ಇದನ್ನು ಹೇಳಲು ಸಮರ್ಥವಾಗಿದ್ದೇನೆ ಎಂದು ಮೋದಿ ಹೇಳಿದರು.

ಭಾರತದ ಯೋಧರ ಸಾಮರ್ಥ್ಯ ಇಡೀ ವಿಶ್ವಕ್ಕೆ ತಿಳಿದುಬಂದಿದೆ. ವಿಶ್ವವೇ ಭಾರತೀಯ ಯೋಧರ ಶೌರ್ಯದ ಕುರಿತು ವಿಶ್ಲೇಷಣೆ ಮಾಡುತ್ತಿದೆ. ನೀವು ಧೈರ್ಯ ಶಾಲಿಗಳು. ನಿಮ್ಮ ಶೌರ್ಯದ ಸಂದೇಶ ಜಗತ್ತಿಗೆ ತಲುಪಿದೆ. ಇಡೀ ಜಗತ್ತು ಈಗ ಯಾರು ಈ ಧೈರ್ಯಶಾಲಿಗಳು? ಅವರ ತರಬೇತಿ ಏಗಿತ್ತು? ಅವರ ತ್ಯಾಗವೇನು? ಎಂದು ತಿಳಿದುಕೊಳ್ಳಲು ಬಯಸುತ್ತಿದೆ ಎಂದರು.

ಇದಕ್ಕೂ ಮುನ್ನ ನಿಮು ಸೇನಾ ನೆಲೆಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಗಲ್ವಾನ್ ಕಣಿಯಲ್ಲಿ ಹುತಾತ್ಮರಾದ ಸೈನಿಕರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಇದು ದೇಶಕ್ಕೆ ಸರ್ವಸ್ವ ತ್ಯಾಗ ಮಾಡುವ ರಾಷ್ಟ್ರ ಭಕ್ತರ ಭೂಮಿ. ವೀರತ್ವ ನಮ್ಮ ಭೂಮಿಯಲ್ಲಿದೆ. ಆ ವೀರತನ ನಿಮ್ಮ ಮುಖಗಳಲ್ಲಿ ಕಾಣಿಸುತ್ತಿದೆ. ದೇಶದ ಪ್ರತಿ ಮೂಲೆಯಿಂದ ಬಂದ ಸೈನಿಕರು ತಮ್ಮ ಪರಾಕ್ರಮ ತೋರಿಸಿದ್ದಾರೆ. ಅವರ ಪರಾಕ್ರಮಕ್ಕೆ ಇಡೀ ದೇಶ ಗೌರವಿಸುತ್ತಿದೆ. ನಿಮ್ಮ ವೀರತ್ವ ಮತ್ತು ಪರಾಕ್ರಮದಿಂದ ನಾವು ಎದೆಯುಬ್ಬಿಸಿ ನಿಲ್ಲುವಂತಾಗಿದೆ ಎಂದು ಸೈನಿಕರ ಪರಾಕ್ರಮವನ್ನು ಕೊಂಡಾಡಿದ್ದರು.

Click to comment

Leave a Reply

Your email address will not be published. Required fields are marked *