ಆಗಸ್ಟ್ 6 ಇಲ್ಲವೇ 8 ರಂದು SSLC ಫಲಿತಾಂಶ: ಸಚಿವ ಸುರೇಶ್ ಕುಮಾರ್

ಚಾಮರಾಜನಗರ: ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಆಗಸ್ಟ್ ಮೊದಲನೇ ವಾರದಲ್ಲಿ ಕೊಡುವಂತಹ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜುಲೈ 3ನೇ ತಾರೀಖು ಎಸ್.ಎಸ್.ಎಲ್.ಸಿ ಪರೀಕ್ಷೆ ಮುಗಿದಿದೆ. ಈಗಾಗಲೇ ಎಲ್ಲಾ ಜಿಲ್ಲೆಯಲ್ಲಿಯೂ ಮೌಲ್ಯಮಾಪನ ಮಾಪನ ಬಹುತೇಕ ಮುಕ್ತಾಯವಾಗಿದೆ. ಆಗಸ್ಟ್ 6 ಇಲ್ಲವೇ 8 ರೊಳಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದರು.

- Advertisement -

ಟಿಪ್ಪು ಪಠ್ಯ ಕೈ ಬಿಟ್ಟ ವಿಚಾರದ ಬಗ್ಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ನಮ್ಮಲ್ಲಿ ಡಿ.ಎಸ್.ಇ.ಆರ್.ಟಿ. ಟೆಸ್ಟ್ ಬುಕ್ ಕಮಿಟಿ ಇದ್ದು ಕೆಲವು ನಿರ್ಧಾರಗಳನ್ನು ಈ ಕಮೀಟಿ ತೆಗೆದುಕೊಂಡಿದೆ. ಪ್ರತಿ ವರ್ಷ ನಮಗೆ 240 ದಿನ ಶೈಕ್ಷಣಿಕ ಸಿಗುತ್ತಿತ್ತು. ಆದರೆ ಈ ಬಾರಿ ಕೋವಿಡ್ ನಿಂದಾಗಿ ಅಷ್ಟು ದಿನಗಳು ಸಿಗುವುದಿಲ್ಲ. 120 ರಿಂದ 140 ದಿನಗಳು ಸಿಗಬಹುದು ಅಷ್ಟೆ. ಈ ಹಿನ್ನೆಲೆ ಶೇ.30 ರಷ್ಟು ಪಠ್ಯ ತೆಗೆಯಲು ನಿರ್ಧಾರ ಮಾಡಲಾಗಿತ್ತು.

- Advertisement -

ಒಂದೇ ವಿಷಯವನ್ನು ಮಕ್ಕಳು ಬೇರೆ ಬೇರೆ ಕ್ಲಾಸ್ ಗಳಲ್ಲಿ ಓದುತ್ತಾರೋ ಅದರ ಆಧಾರದ ಮೇಲೆ ಯಾವ ಭಾಗವನ್ನು ತೆಗಿಯಬಹುದು ಎಂದು ಕಮಿಟಿಯವರು ಯೋಚನೆ ಮಾಡಿದ್ದಾರೆ. ಆದರೆ ಈ ವಿಚಾರವಾಗಿ ಆ ವಿಷಯ ತೆಗೆದಿದ್ದಾರೆ, ಈ ವಿಷಯ ತೆಗೆದಿದ್ದಾರೆ ಅಂತಾ ಆರೋಪಗಳು ಕೇಳಿ ಬಂದಿದೆ. ಜನರಿಗೆ ಗೊಂದಲ ಮೂಡಿದೆ, ಕೆಲವರಿಗೆ ಬೇಸರವಾಗಿದೆ.

ಈ ಹಿನ್ನೆಲೆಯಲ್ಲಿ ಪಠ್ಯದ ಯಾವ ಯಾವ ಭಾಗ ಮತ್ತು ವಿಷಯವನ್ನು ತೆಗೆಯಲು ನಿರ್ಧರಿಸಿ ವೆಬ್ ಸೈಟ್ ನಲ್ಲಿ ಹಾಕಲಾಗಿತ್ತೋ ಸದ್ಯಕ್ಕೆ ಈ ಪಠ್ಯ ಕೈ ಬಿಡುವ ವಿಚಾರವನ್ನು ಸಂಪೂರ್ಣವಾಗಿ ತಡೆಹಿಡಿದಿದ್ದೇವೆ. ಮುಂದಿನ ದಿನಗಳಲ್ಲಿ ಯೋಚಿಸಿ ವೈಜ್ಞಾನಿಕ ಆಧಾರದ ಮೇಲೆ ಯಾವ ರೀತಿ ಮಾಡಬೇಕು ಅಂತಾ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

- Advertisement -