KarnatakaKolarLatestMain Post

ಆಕಸ್ಮಿಕ ಬೆಂಕಿ, ಹೊತ್ತಿ ಉರಿದ ಟೈರ್ ಅಂಗಡಿ- ತಪ್ಪಿದ ಅನಾಹುತ

– ಲಕ್ಷಾಂತರ ರೂ. ವಸ್ತುಗಳು ಭಸ್ಮ

ಕೋಲಾರ: ನೂರಾರು ಜನ ಸೇರುವ ಪ್ರದೇಶದಲ್ಲಿ ಇದ್ದಕ್ಕಿದಂತೆ ಬೆಂಕಿ ಹೊತ್ತಿಕೊಂಡಿದ್ದು, ಟೈರ್ ಅಂಗಡಿಯಲ್ಲಿ ಹೊತ್ತಿ ಉರಿದ ಘಟನೆ ನಗರದ ಹೊರವಲಯದಲ್ಲಿರುವ ಎಪಿಎಂಸಿ ಮಾರುಕಟ್ಟೆ ಬಳಿ ನಡಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಜಾಕೀರ್ ಅವರ ಟೈರ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಅಂಗಡಿ ಬೃಹದಾಕಾರವಾಗಿ ಹೊತ್ತಿ ಉರಿಯಲು ಆರಂಭಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.

ಅಲ್ಲಿದ್ದವರು ಏನಾಯ್ತು ಎಂದು ನೋಡುವಷ್ಟರಲ್ಲಿ ಆಕಾಶದೆತ್ತರಕ್ಕೆ ಕಪ್ಪು ಹೊಗೆ ಇಡೀ ಪ್ರದೇಶವನ್ನು ಆವರಿಸಿತ್ತು. ಪಂಕ್ಚರ್ ಅಂಗಡಿಯಲ್ಲಿದ್ದ ಟೈರ್‍ಗಳನ್ನು ಹೊರತೆಗೆದು ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಮೂರು ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ನಂದಿಸಿದರು ಬೆಂಕಿ ಆರಲಿಲ್ಲ, ಕೊನೆಗೆ ಜೆಸಿಬಿ ಸಹಾಯದಿಂದ ಟೈರ್ ಅಂಗಡಿಯನ್ನು ತೆರವು ಗೊಳಿಸಿದ ನಂತರ ಬೆಂಕಿ ಹತೋಟಿಗೆ ಬಂತು.

ಟೈರ್ ಅಂಗಡಿಯ ಹಿಂಭಾಗದಲ್ಲಿ ಬಾರ್ ಇತ್ತು. ಅಲ್ಲಿನ ಕಸದ ರಾಶಿಗೆ ಹಾಕಿದ್ದ ಬೆಂಕಿಯಿಂದ ಅಂಗಡಿಗೆ ಬೆಂಕಿ ಬಿದ್ದಿರಬಹುದು ಎನ್ನಲಾಗಿದೆ. ಅಂಗಡಿಯ ಮೇಲೆ 66 ಕೆವಿ ವಿದ್ಯುತ್ ಲೈನ್ ಹೋಗಿದೆ. ಅಲ್ಲದೆ ಪಕ್ಕದಲ್ಲೇ ಮೂರ್ನಾಲ್ಕು ಅಂಗಡಿಗಳಿಗೆ ಬೆಂಕಿ ವ್ಯಾಪಿಸುವ ಆತಂಕವಿತ್ತು.

ಅಂಗಡಿಗೆ ಹೊಂದಿಕೊಂಡಂತೆ ಎಪಿಎಂಸಿ ಮಾರುಕಟ್ಟೆ ಇದ್ದು, ನೂರಾರು ಜನ ಕೆಲಸ ಮಾಡುತ್ತಿದ್ದರು. ಅಂಗಡಿಯೊಳಗಿದ್ದ ಕಂಪ್ರಷರ್, ಯಂತ್ರಗಳು ಸಿಡಿಯುವ ಆತಂಕ ಇತ್ತು. ಹೀಗಾಗಿ ಪೊಲೀಸರು ಜನರನ್ನು ಚದುರಿಸಿ ಬೆಂಕಿ ನಂದಿಸಲು ನೆರವು ನೀಡಿದರು. ಈ ಮೂಲಕ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಅವಘಡದಿಂದ ಅಂಗಡಿಯಲ್ಲಿದ್ದ ಸುಮಾರು 20 ಲಕ್ಷಕ್ಕೂ ಅಧಿಕ ಮೌಲ್ಯದ ಟೈರ್, ಯಂತ್ರೋಪಕರಣಗಳು, ಎರಡು ಬೈಕ್‍ಗಳು ಸುಟ್ಟು ಕರಕಲಾಗಿವೆ.

Leave a Reply

Your email address will not be published.

Back to top button