Connect with us

Cinema

ಅಲ್ಲು ಅರ್ಜುನ್ ಸಿನಿಮಾಗೆ ರಶ್ಮಿಕಾ ಎರಡನೇ ಆಯ್ಕೆ, ಮೊದಲ ಆಫರ್ ಹೋಗಿದ್ದು ಯಾವ ನಟಿಗೆ?

Published

on

ಹೈದರಾಬಾದ್: ರಶ್ಮಿಕಾ ಮಂದಣ್ಣ ಹಲವು ಹಿಟ್ ಸಿನಿಮಾಗಳ ಮೂಲಕ ಟಾಲಿವುಡ್‍ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹೀಗಾಗಿ ಹಲವು ಸಿನಿಮಾಗಳ ಆಫರ್ ಬರುತ್ತಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ನಟಿಸಲು ರಶ್ಮಿಕಾ ಎರಡನೇ ಆಯ್ಕೆಯಂತೆ.

ನಟಿ ರಶ್ಮಿಕಾ ಮಂದಣ್ಣ ಸರಿಲೇರು ನೀಕೆವ್ವರು ಹಾಗೂ ಭೀಷ್ಮ ಸಿನಿಮಾಗಳ ಮೂಲಕ ತೆಲುಗು ಸಿನಿಮಾ ರಂಗದಲ್ಲಿ ಬಿಗ್ ಬ್ರೇಕ್ ಪಡೆದಿದ್ದಾರೆ. ಇದೀಗ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾಗೂ ಆಯ್ಕೆಯಾಗಿದ್ದಾರೆ. ಆದರೆ ಈ ಸಿನಿಮಾಗೆ ರಶ್ಮಿಕಾ ಮಂದಣ್ಣ ಮೊದಲ ಆಯ್ಕೆ ಅಲ್ಲವಂತೆ. ಎರಡನೇ ಆಯ್ಕೆಯಂತೆ. ಮೊದಲ ಆಯ್ಕೆ ನಟಿ ಸಮಂತಾ ಆಗಿದ್ದರಂತೆ. ನಿರ್ದೇಶಕ ಸುಕುಮಾರ್ ಸಮಂತಾ ಅವರೇ ಈ ಸಿನಿಮಾದಲ್ಲಿ ನಟಿಸಬೇಕು ಅಂದುಕೊಂಡಿದ್ದರಂತೆ. ನಟ ಅಲ್ಲು ಅರ್ಜುನ್ ಸಹ ಸಮಂತಾ ಪರ ಒಲವು ತೋರಿದ್ದರಂತೆ.

ಈ ಹಿಂದೆ ಸುಕುಮಾರ್ ನಿರ್ದೇಶನದ ರಂಗಸ್ಥಲಂ ಸಿನಿಮಾದಲ್ಲಿ ಸಮಂತಾ ಅವರೇ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅವರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ರಂಗಸ್ಥಲಂ ರೀತಿಯಲ್ಲಿಯೇ ಪುಷ್ಪ ಸಿನಿಮಾ ಸಹ ರಿಯಲಿಸ್ಟಿಕ್ ಆಗಿ ಮೂಡಿ ಬರುತ್ತಿರುವುದರಿಂದ ಮತ್ತೆ ಸಮಂತಾ ಅವರಿಗೆ ಕಳೆದ ವರ್ಷವೇ ಆಫರ್ ನೀಡಲಾಗಿತ್ತಂತೆ. ಆದರೆ ಸಮಂತಾ ರಿಜೆಕ್ಟ್ ಮಾಡಿದ್ದರಂತೆ.

ವಿವಾಹದ ಮುಂಚೆ ಹೆಚ್ಚು ಸಿನಿಮಾಗಳಲ್ಲಿ ಸಮಂತಾ ನಟಿಸಿದ್ದಾರೆ. ನಾಗಚೈತನ್ಯ ಜೊತೆ ವಿವಾಹವಾದ ನಂತರವೂ ಸಿನಿಮಾ ಮಾಡುವುದನ್ನು ಸಮಂತಾ ಬಿಟ್ಟಿರಲಿಲ್ಲ. ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇತ್ತೀಚೆಗೆ ಅವರಿಗೆ ಬ್ರೇಕ್ ಬೇಕು ಅನ್ನಿಸಿದೆಯಂತೆ. ಹೀಗಾಗಿ ಪುಷ್ಪ ಸಿನಿಮಾದ ಆಫರ್ ರಿಜೆಕ್ಟ್ ಮಾಡಿದ್ದಾರೆ. ಸದ್ಯ ಅವರ ಕೈಯ್ಯಲ್ಲಿರುವುದು ‘ಕಾಧುವಾಕುಲ ರೆಂಡು ಕಾಧಲ್’ ಸಿನಿಮಾ ಮಾತ್ರ. ಇದೀಗ ಲಾಕ್‍ಡೌನ್ ಸಂದರ್ಭದಲ್ಲಿ ಮನೆಯ ಟೆರಸ್ ಮೇಲೆ ತರಕಾರಿ ಹಾಗೂ ಸೊಪ್ಪು ಬೆಳೆಯುತ್ತಿದ್ದಾರೆ. ಅಲ್ಲದೆ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.

ಸಮಂತಾ ನಟಿಸಲು ಒಪ್ಪದಿದ್ದಾಗ ಚಿತ್ರ ತಂಡ ರಶ್ಮಿಕಾ ಮಂದಣ್ಣ ಅವರಿಗೆ ಆಫರ್ ನೀಡಿತಂತೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಲಾರಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಕ್ತ ಚಂದನದ ಕಳ್ಳಸಾಗಣಿಕೆ ಕುರಿತ ಕಥಾ ಹಂದರವನ್ನು ಚಿತ್ರ ಹೊಂದಿದೆ. ಅಂದಹಾಗೆ ಈ ಸಿನಿಮಾ ಕನ್ನಡ ಸೇರಿ ಒಟ್ಟು ಐದು ಭಾಷೆಗಳಲ್ಲಿ ತಯಾರಾಗುತ್ತಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

Click to comment

Leave a Reply

Your email address will not be published. Required fields are marked *