ಅಂಬುಲೆನ್ಸ್‌ಗೆ ಕಾದು ಸುಸ್ತಾಗಿ ನಡೆದುಕೊಂಡೇ ಆಸ್ಪತ್ರೆಗೆ ಬಂದ ಸೋಂಕಿತ

– ಆರೋಗ್ಯ ಸಚಿವರ ಕ್ಷೇತ್ರದಲ್ಲೇ ಆಘಾತಕಾರಿ ಘಟನೆ

ಚಿತ್ರದುರ್ಗ: ಅಂಬುಲೆನ್ಸ್ ಕಾದು ಸುಸ್ತಾಗಿ ಸೋಂಕಿತನೋರ್ವ ಆಂಧ್ರದ ಗಡಿಯಿಂದ ಸುಮಾರು 1 ಕಿ.ಮೀ. ನಡೆದುಕೊಂಡೇ ಕೋವಿಡ್-19 ಕೇಂದ್ರಕ್ಕೆ ಆಗಮಿಸಿರುವ ಆಘಾತಕಾರಿ ಘಟನೆ ಆರೋಗ್ಯ ಸಚಿವ ಶ್ರೀರಾಮುಲು ಅವರ ಕ್ಷೇತ್ರದಲ್ಲಿ ನಡೆದಿದೆ.

ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಇದರಿಂದ ಆತಂಕಗೊಂಡ ಸ್ಥಳಿಯರು, ಆತ ನಡೆದುಕೊಂಡು ಹೋಗುವ ವೀಡಿಯೋ ಮಾಡಿದ್ದಾರೆ. ಈ ವಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

ಸಿಎಂ ಯಡಿಯೂರಪ್ಪ ನಿನ್ನೆ ತಾನೆ ಅಂಬುಲೆನ್ಸ್ ಕೊರತೆಯಾಗದಂತೆ ಕಾಳಜಿವಹಿಸಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ, ಅರೋಗ್ಯ ಸಚಿವ ಶ್ರೀರಾಮುಲು ಪ್ರತಿನಿಧಿಸುವ ಕ್ಷೇತ್ರದಲ್ಲೇ ಅಂಬುಲೆನ್ಸ್ ಸಿಗಲಾರದೆ ಕೋವಿಡ್-19 ಸೊಂಕಿತ ಸುಮಾರು ಒಂದು ಗಂಟೆಯ ಕಾಲ ಅಂಬುಲೆನ್ಸ್ ಗಾಗಿ ಕಾದು ಸುಸ್ತಾಗಿ, ಸುಮಾರು 1 ಕಿ.ಮೀ.ನಡೆದುಕೊಂಡೇ ರಾಂಪುರ ಪ್ರವೇಶಿಸಿ, ಅಲ್ಲಿಂದ ಸುಮಾರು 200 ಮೀಟರ್ ಗಳಷ್ಟು ದೂರವಿರುವ ಆಸ್ಪತ್ರೆಗೆ ಬಂದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

ಅರೋಗ್ಯ ಸಚಿವ ಶ್ರೀರಾಮುಲು ಕ್ಷೇತ್ರದಲ್ಲೇ ಸೋಂಕಿತನನ್ನು ಆಸ್ಪತ್ರೆಗೆ ಕರೆತರಲು ಅಂಬುಲೆನ್ಸ್ ಕೊರತೆಯುಂಟಾಗಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ, ಸೋಂಕಿತ ಯುವಕ ಆಂಧ್ರದ ಗಡಿ ಭಾಗದಿಂದ ಕಾಲ್ನಡಿಗೆಯಲ್ಲಿ ಹೊರಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಚಿವರು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಅಣ್ಣನ ಮಗಳ ಪ್ರಾಥಾಮಿಕ ಸಂಪರ್ಕದಿಂದ ಈತನಿಗೆ ಸೋಂಕು ತಗುಲಿದ್ದು, ಕೋವಿಡ್ ಕೇರ್ ಸೆಂಟರ್ ಗೆ ತೆರಳಲು, ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಆದರೆ ಸುಮಾರು ಒಂದು ಗಂಟೆಯ ಕಾಲ ಕಾದರೂ ಅಂಬುಲೆನ್ಸ್ ಬಾರದ ಹಿನ್ನೆಲೆಯಲ್ಲಿ, ರಾಂಪುರ ಗ್ರಾಮದ ಮಧ್ಯ ಇರುವ ಕೋವಿಡ್‍ ಕೇರ್ ಸೆಂಟರ್ ಗೆ ನಡೆದುಕೊಂಡೇ ಬಂದಿದ್ದಾನೆ. ಆದರೆ ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರುವ ಟಿಹೆಚ್‍ಓ ಸುಧಾ, ಸೋಂಕಿತ ವ್ಯಕ್ತಿಯ ಮನವಿ ಮೇರೆಗೆ ಅವರ ಮನೆಯ ಬಳಿಗೆ ಅಂಬುಲೆನ್ಸ್ ಕಳಿಸಲಿಲ್ಲ. ಹೀಗಾಗಿ ಅವರು ನಡೆದುಕೊಂಡೇ ಕೇರ್ ಸೆಂಟರ್ ಗೆ ಬಂದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

- Advertisement -