ಭಾರತದಲ್ಲಿ ಸ್ಯಾಮ್‍ಸಂಗ್ ಸೋಲಿಸಿ ಅಗ್ರಪಟ್ಟಕ್ಕೆ ಏರಿದ ಕ್ಸಿಯೋಮಿ: ಯಾವ ಕಂಪೆನಿಗೆ ಎಷ್ಟನೇ ಸ್ಥಾನ?

ಬೋಸ್ಟನ್: ಇದೆ ಮೊದಲ ಬಾರಿಗೆ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಚೀನಾದ ಕ್ಸಿಯೋಮಿ ಕಂಪೆನಿ ನಂಬರ್ ಒನ್ ಬ್ರಾಂಡ್ ಪಟ್ಟಕ್ಕೆ ಏರಿದೆ. ಗ್ರಾಹಕರು ಇಷ್ಟಪಡುವ ಸ್ಮಾರ್ಟ್ ಫೋನ್‍ ಬ್ರಾಂಡ್ ಕಂಪೆನಿಗಳ ಪಟ್ಟಿಯಲ್ಲಿ ಕ್ಸಿಯೋಮಿ ಸ್ಯಾಮ್‍ಸಂಗ್ ಕಂಪೆನಿಯನ್ನು ಸೋಲಿಸಿ ಮೊದಲ ಸ್ಥಾನವನ್ನುಗಳಿಸಿದೆ.

ಅಮೆರಿಕದ ಸ್ಟ್ರಾಟೆಜಿ ಅನಾಲಿಟಿಕ್ಸ್ ಅಧ್ಯಯನ ನಡೆಸಿ ಭಾರತದ ಟಾಪ್ ಬ್ರಾಂಡ್ ಕಂಪೆನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಶೇ.26 ರಷ್ಟು ಜನ ಕ್ಸಿಯೋಮಿಯನ್ನು ಇಷ್ಟಪಟ್ಟಿದ್ದರೆ, ಶೇ.12ರಷ್ಟು ಜನ ಸ್ಯಾಮ್‍ಸಂಗ್ ಫೋನ್ ಇಷ್ಟಪಟ್ಟಿದ್ದಾರೆ.

ಅಧ್ಯಯನದಲ್ಲಿ ಕ್ಯಾಮೆರಾ ಗುಣಮಟ್ಟ, ಮೆಗಾಪಿಕ್ಸೆಲ್, ಸ್ಕ್ರೀನ್ ಗಾತ್ರಗಳನ್ನು ಆಧಾರಿಸಿ ಈ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಭಾರತದಲ್ಲಿ ಶೇ.6 ರಷ್ಟು ಜನ ಮಾತ್ರ 35 ಸಾವಿರ ರೂ. ಗಿಂತಲೂ ಹೆಚ್ಚಿನ ಸ್ಮಾರ್ಟ್ ಫೋನನ್ನು ಖರೀದಿಸುತ್ತಾರೆ. ಸ್ಮಾರ್ಟ್ ಫೋನ್ ಖರೀದಿ ಮಾಡುವ ಜನಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಜನ 10 ಸಾವಿರ ಮತ್ತು 20 ಸಾವಿರ ರೂ. ಒಳಗಿನ ಫೋನ್‍ಗಳನ್ನು ಖರೀದಿ ಮಾಡುತ್ತಾರೆ ಎಂದು ಅಧ್ಯಯನ ತಿಳಿಸಿದೆ.

ಸ್ಟ್ರಾಟೆಜಿ ಅನಾಲಿಸ್ಟ್ ಸಂಸ್ಥೆಯ ಉಪಾಧ್ಯಕ್ಷ ಡೇವಿಡ್ ಕೇರ್ ಪ್ರತಿಕ್ರಿಯಿಸಿ, ಭಾರತದಲ್ಲಿ ನೋಕಿಯಾ ಫೋನ್‍ಗಳು ಮಾರುಕಟ್ಟೆಗೆ ಬಿಡುಗಡೆಯಾದರೆ ಆಂಡ್ರಾಯ್ಡ್ ಬ್ರಾಂಡ್‍ಗಳ ನಡುವೆ ಮತ್ತಷ್ಟು ಪೈಪೋಟಿ ಆಗಲಿದೆ ಎಂದಿದ್ದಾರೆ.

ಸ್ಟ್ರಾಟೆಜಿ ಅನಾಲಿಸ್ಟ್ ಸಂಸ್ಥೆಯ ಹಿರಿಯ ಅನಾಲಿಸ್ಟ್ ರಾಜೀವ್ ನಾಯರ್ ಪ್ರತಿಕ್ರಿಯಿಸಿ, ಭಾರತದ ಮಾರುಕಟ್ಟೆಗೆ ಪ್ರವೇಶಿಸಿದ ಬಳಿಕ 2016ರ ನಾಲ್ಕನೇಯ ತ್ರೈಮಾಸಿಕದಲ್ಲಿ ಕ್ಸಿಯೋಮಿ ಟಾಪ್ 3 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಅವಧಿಯಲ್ಲಿ ಕ್ಸಿಯೋಮಿ ಶೇ.10 ರಷ್ಟು ಮಾರುಕಟ್ಟೆ ಪಾಲನ್ನು ಗಳಿಸಿದೆ ಎಂದು ತಿಳಿಸಿದ್ದಾರೆ.

ಯಾವುದಕ್ಕೆ ಎಷ್ಟನೇ ಸ್ಥಾನ?:
ಲೆನೊವೊ ಶೇ.6, ಮೊಟರೊಲಾ ಶೇ.7,ಮೈಕ್ರೋಮ್ಯಾಕ್ಸ್ ಶೇ.2, ಆಪಲ್ ಶೇ.12, ಒನ್ ಪ್ಲಸ್ ಶೇ.6 ರಷ್ಟು ಜನ ಇಷ್ಟಪಡುತ್ತಾರೆ ಎಂದು ಸ್ಟ್ರಟೆಜಿ ಅನಾಲಿಸ್ಟ್ ತಿಳಿಸಿದೆ.

ಕ್ಸಿಯೋಮಿ ಭಾರತದ ಮಾರುಕಟ್ಟೆಗೆ 2014ರಲ್ಲಿ ಪ್ರವೇಶಿಸಿದ್ದು, ಹೊಸ ಫೋನ್ ಬಿಡುಗಡೆಯಾದ ಸಂದರ್ಭದಲ್ಲಿ ಯಾವುದಾದರು ಒಂದು ಆನ್‍ಲೈನ್ ಶಾಪಿಂಗ್ ತಾಣದ ಜೊತೆ ಒಪ್ಪಂದ ಮಾಡಿಕೊಂಡು ಫ್ಲಾಶ್ ಸೇಲ್ ನಲ್ಲಿ ಆ ಫೋನ್‍ಗಳನ್ನು ಮಾರಾಟ ಮಾಡುವ ಮಾರುಕಟ್ಟೆ ತಂತ್ರವನ್ನು ಅನುಸರಿಕೊಂಡು ಬಂದಿದೆ.

20 ಸಾವಿರ ರೂ. ಒಳಗಿನ ಫೋನ್‍ಗಳನ್ನು ಹೆಚ್ಚಾಗಿ ಕ್ಸಿಯೋಮಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಈ ಕಾರಣಕ್ಕಾಗಿ ಕ್ಸಿಯೋಮಿ ಈಗ ದೇಶದ ನಂಬರ್ ಒನ್ ಗ್ರಾಹಕರು ಇಷ್ಟಪಟ್ಟುವ ಸ್ಮಾರ್ಟ್ ಫೋನ್ ಬ್ರಾಂಡ್ ಕಂಪೆನಿಯಾಗಿದೆ.

ಇದನ್ನೂ ಓದಿ: 2016ರಲ್ಲಿ ಅತಿಹೆಚ್ಚು ಮಾರಾಟವಾದ ವಿಶ್ವದ ಟಾಪ್ 10 ಫೋನ್‍ಗಳ ಪಟ್ಟಿ ಇಲ್ಲಿದೆ

ಮೂರನೇ ಸ್ಥಾನದಲ್ಲಿ ಕ್ಸಿಯೋಮಿ: 2016 ಅಕ್ಟೋಬರ್- ಡಿಸೆಂಬರ್ ಅವಧಿಯಲ್ಲಿನ ದೇಶದ ಸ್ಮಾರ್ಟ್ ಫೋನ್ ಮಾರುಕಟ್ಟೆಯನ್ನು ಕೌಂಟರ್‍ಪಾಯಿಂಟ್ ಸಂಸ್ಥೆ ಅಧ್ಯಯನ ನಡೆಸಿ ಟಾಪ್ ಕಂಪೆನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಶೇ.24 ಪಾಲುಗಳನ್ನು ಪಡೆಯುವ ಮೂಲಕ ಸ್ಯಾಮ್‍ಸಂಗ್ ಮೊದಲ ಸ್ಥಾನದಲ್ಲಿದ್ದರೆ, ಶೇ.10ರಷ್ಟು ಪಾಲುಗಳನ್ನು ಪಡೆಯುವ ಮೂಲಕ ವಿವೊ ಎರಡನೇ ಸ್ಥಾನದಲ್ಲಿತ್ತು. ಕ್ಸಿಯೋಮಿ ಮತ್ತು ಲೆನೊವೊ ಶೇ.9 ರಷ್ಟು ಪಾಲನ್ನು ಪಡೆದಿದ್ದರೆ, ಒಪ್ಪೋ ಶೇ.8ರಷ್ಟು ಪಾಲನ್ನು ಪಡೆದಿತ್ತು.

2016ರಲ್ಲಿ ಮೈಲಿಗಲ್ಲು: ಕ್ಸಿಯೋಮಿ 2016ರ ಮಾರ್ಚ್ ನಲ್ಲಿ ರೆಡ್‍ಮೀ ನೋಟ್ 3 ಬಿಡುಗಡೆ ಮಾಡಿತ್ತು. ಬಿಡುಗಡೆಯಾದ 5 ತಿಂಗಳಿನಲ್ಲಿ 17 ಲಕ್ಷ ಫೋನ್‍ಗಳನ್ನು ಮಾರಾಟ ಮಾಡಿದ್ದರೆ, ಸೆಪ್ಟೆಂಬರ್ ಕೊನೆಯ ವಾರದಲ್ಲಿ ಒಟ್ಟು 23 ಲಕ್ಷ ಫೋನ್‍ಗಳನ್ನು ಮಾರಾಟ ಮಾಡಿ ಹೊಸ ಮೈಲಿಗಲ್ಲನ್ನು ಬರೆದಿತ್ತು. ಈ ಮೂಲಕ ಭಾರತದಲ್ಲಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮಾರಾಟವಾದ ಫೋನ್ ಎಂಬ ಹೆಗ್ಗಳಿಕೆಗೆ ಕ್ಸಿಯೋಮಿ ರೆಡ್ ಮೀ ನೋಟ್ 3 ಪಾತ್ರವಾಗಿತ್ತು.

ಇದನ್ನೂ ಓದಿ:ಹೊಸ ಇತಿಹಾಸ ಸೃಷ್ಟಿಸಿದ ರೆಡ್‍ಮೀ 4ಎ: ಜಸ್ಟ್ 4 ನಿಮಿಷದಲ್ಲಿ ಎಷ್ಟು ಫೋನ್ ಮಾರಾಟವಾಗಿದೆ ಗೊತ್ತಾ?

You might also like More from author

Leave A Reply

Your email address will not be published.

badge