Monday, 18th June 2018

Recent News

2 ಮದ್ವೆಯಾಗಿದ್ದ ಡಾಕ್ಟರ್ ಪತಿಗೆ ಪೊಲೀಸರ ಮುಂದೆಯೇ ಅಟ್ಟಾಡಿಸಿ ಹೊಡೆದ ಪತ್ನಿ

ಧಾರವಾಡ: ಮೊದಲ ಪತ್ನಿ ಸತ್ತಿದ್ದಾಳೆ ಎಂದು ಸುಳ್ಳು ಹೇಳಿ ಎರಡನೇ ಮದುವೆಯಾಗಿದ್ದ ಧಾರವಾಡದ ವೈದ್ಯನಿಗೆ ಎರಡನೇ ಪತ್ನಿ ಪೊಲೀಸರ ಮುಂದೆಯೇ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ.

ನಗರದ ಬಸವನಗರ ಬಡಾವಣೆಯ ನಿವಾಸಿಯಾಗಿರುವ ಸಂತೋಷ್ ವಲಾಂಡಿಕರ್ ಎಂಬ ವೈದ್ಯ ಮೇ ತಿಂಗಳಿನಲ್ಲಿ ವಿಜಯಪುರದಲ್ಲಿ ಸುಶೀಲಾ (ಹೆಸರು ಬದಲಿಸಲಾಗಿದೆ) ಎಂಬವರನ್ನು ಮದುವೆಯಾಗಿದ್ದರು. ಮದುವೆಯಾದ ಬಳಿಕ ಸುಶೀಲಾರನ್ನ ಧಾರವಾಡಕ್ಕೆ ಕರೆದುಕೊಂಡು ಬಂದು ತಮ್ಮ ಮನೆಯಲ್ಲಿ ಇರಿಸಿದ್ದರು.

ಎರಡು ತಿಂಗಳ ಕಾಲ ಮನೆಯಲ್ಲಿಯೇ ಇರಿಸಿದ್ದ ಸಂತೋಷ್ ನಾಗರಪಂಚಮಿ ಹಬ್ಬಕ್ಕೆಂದು ಸುಶೀಲಾ ಅವರ ತವರೂರಾದ ವಿಜಯಪುರಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದರು. ನಂತರ ಮೂರು ತಿಂಗಳು ಕಳೆದರೂ ಸುಶೀಲಾ ಅವರನ್ನು ಕರೆದುಕೊಂಡು ಹೋಗಲು ಸಂತೋಷ್ ಬರಲಿಲ್ಲ. ಹೀಗೆ ದಿನನಿತ್ಯ ಕರೆ ಮಾಡುತ್ತಿದ್ದ ಸುಶೀಲಾ ದೂರವಾಣಿ ಕರೆಯನ್ನು ಸಂತೋಷ್ ಅವರ ಮೊದಲ ಹೆಂಡತಿ ರಿಸೀವ್ ಮಾಡಿದಾಗ ಸುಶೀಲಾ ಅವರಿಗೆ ಮೊದಲ ಮದುವೆಯಾದ ವಿಚಾರ ಗೊತ್ತಾಗಿದೆ.

ಮೊದಲ ಮದುವೆ ಆಗಿರುವ ಆಘಾತಕಾರಿ ವಿಷಯ ತಿಳಿದು ಸುಶೀಲಾ ಧಾರವಾಡಕ್ಕೆ ಅವರ ಸಂಬಂಧಿಕರೊಂದಿಗೆ ಬಂದು ವಿಚಾರಿಸಿದಾಗ ಸುಶೀಲಾ ಅವರನ್ನು ಕಂಡು ಡಾ. ಸಂತೋಷ್ ಓಡಿ ಹೋಗಿದ್ದರು. ಈ ಸಂಬಂಧ ಎರಡನೇ ಪತ್ನಿ ನ್ಯಾಯ ಕೇಳಲು ಬಂದಾಗ ಸಂತೋಷ ಅವರ ವಿರುದ್ಧವೇ ಧಾರವಾಡ ಉಪನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ಈ ಸಂಬಂಧ ಪೊಲೀಸರು ಎರಡು ಕಡೆಯವರನ್ನು ವಿಚಾರಣೆ ನಡೆಸಲು ಕರೆಸಿದ್ದಾರೆ. ಈ ವೇಳೆ ಠಾಣೆಗೆ ಬಂದಾಗ ಪತಿ-ಪತ್ನಿ ನಡುವೆ ಮಾತಿಗೆ ಮಾತು ಬೆಳೆದು ಒಬ್ಬರ ಮೇಲೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಪೊಲೀಸ್ ಠಾಣೆಗೆ ಬರುವಾಗ ಸಂತೋಷ್ ಗನ್ ತೆಗೆದುಕೊಂಡು ಬಂದಿದ್ದು, ನನ್ನ ಜೀವಕ್ಕೆ ಅಪಾಯವಿದೆ ಎಂದು ಸುಶೀಲಾ ಹೇಳಿದ್ದಾರೆ.

 

Leave a Reply

Your email address will not be published. Required fields are marked *