ಪತಿ ಮಾನಸಿಕ ಅಸ್ವಸ್ಥರಾಗಿದ್ದರೆ, ಬಂದೂಕು ನೀಡಿದ್ದು ಯಾಕೆ: ಬಿಎಸ್‍ಎಫ್ ಯೋಧನ ಪತ್ನಿ ಪ್ರಶ್ನೆ

ಚಂಡೀಗಢ: ಬಿಎಸ್‍ಎಫ್ ಕಳಪೆ ಆಹಾರ ನೀಡುತ್ತಿದೆ ಎಂದು ಆರೋಪಿಸಿ ವೀಡಿಯೋ ಮೂಲಕ ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿ ಸುದ್ದಿಯಾದ ಯೋಧ ತೇಜ್ ಬಹದ್ದೂರ್ ಯಾದವ್ ಅವರ ಪತ್ನಿ ಇದೀಗ ಪ್ರತಿಕ್ರಿಯಿಸಿದ್ದಾರೆ.

`ಒಂದು ವೇಳೆ ನನ್ನ ಪತಿ ಮಾನಸಿಕ ಅಸ್ವಸ್ಥರಾಗಿದ್ದರೆ, ಅವರ ಕೈಗೆ ಯಾಕೆ ಬಂದೂಕು ನೀಡಿದ್ದೀರಿ? ಮಾತ್ರವಲ್ಲದೇ ದೇಶದ ಗಡಿ ಭಾಗಗಳನ್ನು ಕಾಯುವಂತಹ ದೊಡ್ಡ ಜವಾಬ್ದಾರಿಯನ್ನು ಯಾಕೆ ನೀಡಿದ್ದೀರಿ?’ ಅಂತಾ ತೇಜ್ ಬಹದ್ದೂರ್ ಯಾದವ್ ಪತ್ನಿ ಶರ್ಮಿಳಾ ಬಿಎಸ್‍ಎಫ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ನನ್ನ ಪತಿಗೆ ಅನ್ಯಾಯವನ್ನು ಸಹಿಸಿಕೊಳ್ಳಲಾಗದಂತಹ ಗುಣವಿದೆ. ಇದನ್ನು ಅವರು ತಮ್ಮ ಸೇವಾ ಅವಧಿಯುದ್ದಕ್ಕೂ ಸಹಿಸಿಕೊಂಡು ಬಂದಿದ್ದಾರೆ. ಒಟ್ಟಿನಲ್ಲಿ ಸತ್ಯ ಹೇಳಿದ್ದಕ್ಕೆ ಪತಿಯನ್ನು ಶಿಕ್ಷಿಸಿದೆ ಅಂತಾ ಬಿಎಸ್‍ಎಫ್ ವಿರುದ್ಧ ಯೋಧರ ಪತ್ನಿ ಕಿಡಿಕಾರಿದ್ದಾರೆ.

ಮೂರು ದಿನಗಳ ಹಿಂದೆಯಷ್ಟೇ ಯೋಧ ತೇಜ್ ಯಾದವ್ ಅವರು ಬಿಎಸ್‍ಎಫ್ ಕಳಪೆ ಆಹಾರ ನೀಡುತ್ತಿದೆ ಎಂದು ಆರೋಪಿಸಿ ಪರೋಟ, ಒಂದು ಲೋಟ ಚಹಾವನ್ನು ತೋರಿಸಿ ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ವೀಡಿಯೋ ಅಪ್‍ಲೋಡ್ ಮಾಡಿದ್ದರು. ಈ ವೀಡಿಯೋವನ್ನು 90 ಲಕ್ಷ ಮಂದಿ ವೀಕ್ಷಿಸಿದ್ದು, 4.4 ಲಕ್ಷ ಮಂದಿ ಶೇರ್ ಮಾಡಿದ್ದರು.

ವೀಡಿಯೋ ಮೂಲಕ ಯೋಧ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತೀಯ ಸೇನೆ ಈ ಆರೋಪವನ್ನು ತಿರಸ್ಕರಿಸಿತ್ತು. ಮಾತ್ರವಲ್ಲದೇ ಆರೋಪ ಮಾಡುತ್ತಿರುವ ಯೋಧ ಪ್ರತೀ ದಿನ ಮದ್ಯದ ಅಮಲಿನಲ್ಲಿರುತ್ತಾರೆ. ಅಲ್ಲದೇ ಅನುಮತಿಯಲ್ಲದೇ ಕರ್ತವ್ಯಕ್ಕೆ ಗೈರಾಗುತ್ತಿದ್ದರು. ಹಿರಿಯ ಅಧಿಕಾರಿಗಳೊಂದಿಗೂ ಸರಿಯಾಗಿ ನಡೆದುಕೊಳ್ಳುತ್ತಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಅವರ ದುರ್ವರ್ತನೆಯನ್ನು ಸರಿಪಡಿಸಿಕೊಳ್ಳಲೆಂದು ಕಠಿಣ ಪರಿಸ್ಥಿತಿ ಇರುವ ಕಡೆ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಅಂತಾ ಬಿಎಸ್‍ಎಫ್ ಅಧಿಕಾರಿಗಳು ಹೇಳಿದ್ದರು.

ಇನ್ನು ಪತಿ 5 ವರ್ಷಗಳ ಕಾಲ ಬಿಎಸ್‍ಎಫ್‍ನಲ್ಲಿ ಸೇವೆ ಮುಂದುವರಿಸಲಿ ಅಂತಾ 17 ವರ್ಷದ ಪುತ್ರ ರೋಹಿತ್ ಜೊತೆ ವಾಸವಿರುವ ಶರ್ಮಿಳಾ ಬಯಕೆ. ಆದ್ರೆ ಇತ್ತ ಸ್ವಯಂ ನಿವೃತ್ತಿ ಕೋರಿ ಯೋಧ ಈಗಾಗಲೇ ಸಲ್ಲಿಸಿದ್ದ ಅರ್ಜಿಯನ್ನು ಬಿಎಸ್‍ಎಫ್ ಅಂಗೀಕರಿಸಿದೆ.

LEAVE A REPLY