Tuesday, 22nd May 2018

Recent News

ಮೋದಿ ಪ್ರಧಾನಿ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದ ದ್ವಾರಕಾನಾಥ ಗುರೂಜಿ 2019ರ ಬಗ್ಗೆ ಹೇಳಿದ್ದು ಹೀಗೆ

ಬೆಂಗಳೂರು: 2014ರ ಲೋಕಸಭಾ ಚುನಾವಣೆ ವೇಳೆ ನಿಖರವಾಗಿ ನರೇಂದ್ರ ಮೋದಿ ದೇಶದ ಪ್ರಧಾನಿ ಆಗುತ್ತಾರೆ ಎಂದು ಹೇಳಿದ್ದ ರಾಜಗುರು ದ್ವಾರಕಾನಾಥ ಗುರೂಜಿ ಅವರು 2019ರಲ್ಲಿ ಯಾರು ಗದ್ದುಗೆ ಏರಲಿದ್ದಾರೆ ಎನ್ನುವುದನ್ನು ಸೆಪ್ಟೆಂಬರ್ ನಂತರ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 13ಕ್ಕೆ ಗುರು ಬದಲಾವಣೆ ಆಗುತ್ತಾನೆ. ಹೀಗಾಗಿ ಈಗಲೇ ಹೇಳಲು ಬರುವುದಿಲ್ಲ. ಗುರು ಬದಲಾವಣೆ ಆದ ಬಳಿಕ ಹೇಳುತ್ತೇನೆ ಎಂದು ಉತ್ತರಿಸಿದರು.

ಈ ಸಂದರ್ಭದಲ್ಲಿ ರಾಜಕೀಯ ನಾಯಕರ ಒಡನಾಟದ ಬಗ್ಗೆ ಮಾತನಾಡಿದ ಅವರು, 2004ರಲ್ಲಿ ಕಾಂಗ್ರೆಸ್ ನಾಯಕ ನಟವರ್ ಸಿಂಗ್ ಮನೆಗೆ ಬಂದಿದ್ದರು. ಮುಂದೆ ಯಾರು ಪ್ರಧಾನಿ ಆಗುತ್ತಾರೆ ಎಂದು ಕೇಳಿದಾಗ ನಾನು ಸೋನಿಯಾ ಗಾಂಧಿ ಯಾವುತ್ತೂ ದೇಶದ ಪ್ರಧಾನಿ ಆಗಲು ಸಾಧ್ಯವಿಲ್ಲ ಎಂದಿದ್ದೆ. ಮನಮೋಹನ್ ಸಿಂಗ್ ಆಗಬಹುದು. ಆದರೆ ಪ್ರಣಬ್ ಮುಖರ್ಜಿ ಅವರಿಗೆ ಅಧಿಕಾರ ಕೊಟ್ಟರೆ ಪಕ್ಷಕ್ಕೆ ಮುಂದೆ ಸಹಾಯವಾಗಬಹುದು ಎಂದು ನಾನು ಸಲಹೆ ನೀಡಿದ್ದೆ. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂದರು.

2014ರಲ್ಲಿ ಮೋದಿ ಪ್ರಧಾನಿ ಆಗುತ್ತಾರೆ ಎಂದು ಹೇಗೆ ನಿಖರವಾಗಿ ಹೇಳಿದ್ದೀರಿ ಎಂದು ಕೇಳಿದ್ದಕ್ಕೆ, ನಾನು ನನ್ನ ಶಿಷ್ಯಂದಿರಿಗೆ ಸ್ಟಷ್ಟವಾಗಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದೆ. 2014ರ ನಂತರ ಕಾಂಗ್ರೆಸ್ ದ್ವಿಮುಖವಾಗಲಿದೆ. ಯಾವುದೋ ಒಂದು ಹುಲಿ ಬರುತ್ತದೆ. ನನ್ನ ಪ್ರಕಾರ ಇದು ಬೇಗ ಮುಕ್ತಾಯವಾಗುವುದಿಲ್ಲ.. 2014ರಲ್ಲಿ ಹಾಕಿದ ಬುನಾದಿ ದೇಶದಲ್ಲಿ ಶಾಶ್ವತವಾಗಿರುತ್ತದೆ ಎಂದು ತಿಳಿಸಿದರು.

ಈ ವೇಳೆ 2019ರಲ್ಲೂ ಮೋದಿ ಅಧಿಕಾರಕ್ಕೆ ಏರಲಿದ್ದೀರಿ ಎಂದು ನೀವು ಹೇಳ್ತಾ ಇದ್ದೀರಾ ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ, ಈ ಪ್ರಶ್ನೆಗೆ ಈಗಲೇ ಉತ್ತರ ನೀಡುವುದಿಲ್ಲ. ಸೆಪ್ಟೆಂಬರ್ 13ಕ್ಕೆ ಗುರು ಬದಲಾವಣೆ ಆಗುತ್ತಾನೆ. ಬಳಿಕ ನಾನು ಭವಿಷ್ಯ ಹೇಳುತ್ತೇನೆ. ಎಲ್ಲವೂ ದೇವರ ಇಚ್ಛೆ ಎಂದು ಉತ್ತರಿಸಿದರು.

ಲೋಕಸಭೆ ಆಯ್ತು ಕರ್ನಾಟಕದಲ್ಲಿ ಮುಂದೆ ಏನಾಗಬಹುದು ಎಂದು ಕೇಳಿದ್ದಕ್ಕೆ, ಸ್ಥೂಲವಾಗಿ ಹೇಳುವುದಾದರೆ ಯಾವ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ. ಸೆಪ್ಟೆಂಬರ್ ನಂತರ ಏನಾಗಬಹುದು ಎನ್ನುವುದು ತಿಳಿಯಬಹುದು ಎಂದರು.

2014ರಲ್ಲಿ ನ್ಯೂಯಾರ್ಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮೋದಿ ಜಯಿಸುತ್ತಾರೆ ಎಂದು ದ್ವಾರಕಾನಾಥ್ ಗುರೂಜಿ ನಿಖರವಾಗಿ ಭವಿಷ್ಯ ಹೇಳಿದ್ದರು. ಇದಕ್ಕೂ ಮೊದಲು 2011ರಲ್ಲಿ ಭಾರತ ವಿಶ್ವಕಪ್ ಕ್ರಿಕೆಟ್ ಗೆಲ್ಲಲ್ಲಿದೆ ಎಂದು ಭವಿಷ್ಯ ನುಡಿದಿದ್ದರು.

ಇದನ್ನೂ ಓದಿ: ಡಿಕೆ ಶಿವಕುಮಾರ್ ಬಗ್ಗೆ 25 ವರ್ಷದ ಹಿಂದೆ ಹೇಳಿದ ಮಾತಿಗೆ ನಾನು ಈಗಲೂ ಬದ್ಧ: ದ್ವಾರಕಾನಾಥ ಗುರೂಜಿ

 

ಇದನ್ನೂ ಓದಿ: Exclusive: ಡಿಕೆಶಿ ಗುರು, ಜ್ಯೋತಿಷಿ ದ್ವಾರಕಾನಾಥ್ ಯಾರು? ರಾಜ್ಯದಲ್ಲಿ ಅಷ್ಟೊಂದು ಪ್ರಭಾವಿಯೇ?

Leave a Reply

Your email address will not be published. Required fields are marked *